ಉಡುಪಿ: ಕೋಲ್ಕತ್ತದಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ, ಆಸ್ಪತ್ರೆಗಳ ಹೊರರೋಗಿ ವಿಭಾಗವನ್ನು ಮುಚ್ಚಿ, ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಶನಿವಾರ ಮುಷ್ಕರ ನಡೆಸಿದರು.
ಇದರಿಂದಾಗಿ ಆಸ್ಪತ್ರೆಗಳ ಹೊರರೋಗಿ ವಿಭಾಗಕ್ಕೆ ಚಿಕಿತ್ಸೆಗೆ ಬಂದಿದ್ದ ರೋಗಿಗಳು ಮರಳಬೇಕಾಯಿತು.
ಉಡುಪಿ, ಮಣಿಪಾಲ ಸೇರಿದಂತೆ ಜಿಲ್ಲೆಯ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ಹೊರ ರೋಗಿ ವಿಭಾಗವನ್ನು ಮುಚ್ಚಲಾಗಿತ್ತು.
ಆಸ್ಪತ್ರೆಗಳ ತುರ್ತು ಚಿಕಿತ್ಸಾ ವಿಭಾಗವು ಎಂದಿನಂತೆ ಕಾರ್ಯಾಚರಿಸಿತ್ತು . ರಾಷ್ಟ್ರೀಯ ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆಯು ಪ್ರತಿಭಟನೆಗೆ ಕರೆ ನೀಡಿತ್ತು.
ಜಿಲ್ಲೆಯಾದ್ಯಂತ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಕೂಡ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಜನರಿಗೆ ತೊಂದರೆಯಾಗದ ರೀತಿಯಲ್ಲಿ ವೈದ್ಯರು ಮುಷ್ಕರ ನಡೆಸಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ಐ.ಪಿ. ಗಡಾದ್ ತಿಳಿಸಿದರು.
ವೈದ್ಯರು ಮುಷ್ಕರ ನಿರತರಾಗಿರುವುದರಿಂದ ಜಿಲ್ಲಾಸ್ಪತ್ರೆಯಲ್ಲಿ ಹೊರರೋಗಿ ವಿಭಾಗ ಕಾರ್ಯಾಚರಿಸಲಿಲ್ಲ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಒಳರೋಗಿ ವಿಭಾಗಗಳಲ್ಲಿ ವೈದ್ಯರು ರೋಗಿಗಳನ್ನು ತಪಾಸಣೆ ನಡೆಸಿದ್ದಾರೆ. ತುರ್ತು ಚಿಕಿತ್ಸಾ ವಿಭಾಗಕ್ಕೆ ಹೆಚ್ಚುವರಿ ವೈದ್ಯರನ್ನು ನಿಯೋಜಿಸಿದ್ದೇವೆ ಎಂದು ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಶೋಕ್ ತಿಳಿಸಿದರು.
ನಗರದಲ್ಲಿ ನಡೆದ ಮೌನ ಮೆರವಣಿಗೆಯಲ್ಲಿ 800ಕ್ಕೂ ಹೆಚ್ಚು ವೈದ್ಯರು ಮೊಂಬತ್ತಿ ಹಿಡಿದು ಪಾಲ್ಗೊಂಡಿದ್ದರು ಎಂದು ಐಎಂಎ ಉಡುಪಿ ಕರಾವಳಿ ಅಧ್ಯಕ್ಷೆ ಡಾ. ರಾಜಲಕ್ಷ್ಮಿ ತಿಳಿಸಿದ್ದಾರೆ.
ಉಡುಪಿಯ ಬಿಆರ್‌ಎಸ್ ಆಸ್ಪತ್ರೆಗೆ ಚಿಕಿತ್ಸೆಗೆ ಬಂದವರು ಮರಳಿದರು