ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ರಣ ಬಿಸಿಲು: ತಾಪಕ್ಕೆ ಬಸವಳಿದ ಜನ ಜಾನುವಾರು

Published 8 ಏಪ್ರಿಲ್ 2024, 7:27 IST
Last Updated 8 ಏಪ್ರಿಲ್ 2024, 7:27 IST
ಅಕ್ಷರ ಗಾತ್ರ

ಉಡುಪಿ: ಕರಾವಳಿಯಲ್ಲಿ ಬಿಸಿಲಿನ ಧಗೆಗೆ ಸಾರ್ವಜನಿಕರು ಹೈರಾಣಾಗಿದ್ದಾರೆ. ದಶಕಗಳಲ್ಲೇ ಕಾಣದಷ್ಟು ತಾಪಮಾನ ಹೆಚ್ಚಾಗಿದೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 4 ರವರೆಗೂ ನಾಗರಿಕರು ಮನೆಯಿಂದ ಹೊರಗೆ ಕಾಲಿಡಲು ಸಾಧ್ಯವಾಗದಷ್ಟು ರಣ ಬಿಸಿಲಿದ್ದು ಜನರು ಪರಿತಪಿಸುವಂತಾಗಿದೆ.

ಸಾಮಾನ್ಯವಾಗಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 32 ರಿಂದ 35 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರುತ್ತಿತ್ತು. ಆದರೆ, ಈ ವರ್ಷ ಮಾತ್ರ ಗರಿಷ್ಠ 39 ರಿಂದ 40 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಮಾನ ದಾಖಲಾಗಿರುವುದು ಬಿಸಿಲಿನ ತೀವ್ರತೆ ತೋರಿಸುತ್ತದೆ.

ಬಿಸಿ ಗಾಳಿಯ ತೀವ್ರತೆ: ರಣ ಬಿಸಿಲಿನ ಜತೆಗೆ ಬಿಸಿ ಗಾಳಿಯ ಹೊಡೆತವೂ ಹೆಚ್ಚಾಗಿದ್ದು ಮಧ್ಯಾಹ್ನದ ಹೊತ್ತು ರಸ್ತೆಗಳಲ್ಲಿ ದ್ವಿಚಕ್ರ ವಾಹನ ಚಲಾಯಿಸಲು ಕಷ್ಟವಾಗುತ್ತಿದೆ. ಬಿಸಿ ಗಾಳಿ ಮುಖಕ್ಕೆ ರಾಚುತ್ತಿರುವ ಪರಿಣಾಮ ವಾಹನಗಳನ್ನು ಓಡಿಸಲಾಗುತ್ತಿಲ್ಲ. ಇನ್ನೂ ಪಾದಚಾರಿಗಳ ಪರಿಸ್ಥಿತಿಯಂತೂ ಹೇಳತೀರದು. ನೆತ್ತಿ ಸುಡುವ ಬಿಸಿಲಿನಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಜಿಲ್ಲೆಯಲ್ಲಿ ಸೂರಿಲ್ಲದ ನೂರಾರು ನಿರ್ಗತಿಕರು, ಭಿಕ್ಷುಕರು, ಮದ್ಯವ್ಯಸನಿಗಳು ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದು ಬಿಸಿಲಿನ ಝಳ ಸಹಿಸಲಾಗದೆ ಪರಿತಪಿಸುತ್ತಿದ್ದಾರೆ. ಅಂಗಡಿ ಮುಂಗಟ್ಟುಗಳ ಮುಂದೆ ನಿಲ್ಲಲು, ಕೂರಲು ಮಾಲೀಕರು ಬಿಡದ ಪರಿಣಾಮ ರಸ್ತೆ ಬದಿಗಳಲ್ಲಿ ಮಲಗಿರುವ ದೃಶ್ಯಗಳು ಉಡುಪಿ ಹಾಗೂ ಮಣಿಪಾಲ ಹೆದ್ದಾರಿಯುದ್ದಕ್ಕೂ ಕಂಡುಬರುತ್ತಿದೆ.

ಬೀದಿಗೆ ಬಿದ್ದಿರುವ ಬಹಳಷ್ಟು ಮಂದಿಗೆ ಕುಡಿಯಲು ಸಮರ್ಪಕ ನೀರಿನ ವ್ಯವಸ್ಥೆಯಿಲ್ಲದೆ ಅಸ್ವಸ್ಥಗೊಳ್ಳುತ್ತಿದ್ದಾರೆ. ನರ್ಮ್‌ ಬಸ್‌ ನಿಲ್ದಾಣ, ಹಳೆಯ ಕೆಎಸ್‌ಆರ್‌ಟಿಸಿ, ಸಿಟಿ ಹಾಗೂ ಸರ್ವೀಸ್‌ ಬಸ್ ನಿಲ್ದಾಣಗಳ ಬಳಿ ನಿತ್ಯವೂ ಅಸ್ವಸ್ಥಗೊಂಡವರ ರಕ್ಷಣೆಗೆ ಕರೆ ಬರುತ್ತವೆ ಎನ್ನುತ್ತಾರೆ ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ವಳಕಾಡು.

ಜಲ ಕುಟೀರ ಸ್ಥಾಪನೆ: ಬಿಸಿಲಿನ ತಾಪ ತಣಿಸುವ ಉದ್ದೇಶದಿಂದ ನಾಗರಿಕ ಸಮಿತಿಯ ವತಿಯಿಂದ ಜೋಸ್ ಆಲೂಕ್ಕಾಸ್ ಆಭರಣ ಮಳಿಗೆಯ ಸಹಕಾರದೊಂದಿಗೆ ಮಾರುಥಿ ವೀಥಿಕಾ ರಸ್ತೆಯಲ್ಲಿ ಜಲಕುಟೀರ ಸ್ಥಾಪನೆ ಮಾಡಲಾಗಿದೆ. ಶುದ್ಧವಾದ ಕುಡಿಯುವ ನೀರನ್ನು ತಂಪಾಗಿಡುವ ಮೃತ್ತಿಕೆಯ ಹೂಜಿಯಲ್ಲಿ ಸಂಗ್ರಹಿಸಿಡಲಾಗಿದೆ.

ಎರಡು ಹೂಜಿಗಳನ್ನು ಇರಿಸಲಾಗಿದ್ದು ಒಂದರಲ್ಲಿ ಕುಡಿಯುವ ನೀರು, ಮತ್ತೊಂದರಲ್ಲಿ ತಂಪು ಪಾನೀಯ ವಿತರಿಸಲಾಗುತ್ತಿದೆ. ಮಜ್ಜಿಗೆ, ಕೊಕ್ಕಂ, ನೆಲ್ಲಿಯ ಜ್ಯೂಸ್ ಸಹಿತ ಆರೋಗ್ಯಕ್ಕೆ ಪೂರಕವಾದ ಪಾನೀಯಗಳನ್ನು ನೀಡಲಾಗುತ್ತಿದೆ. ಪ್ರತಿದಿನ 30 ಲೀಟರ್‌ನಷ್ಟು ತಂಪು ಪಾನೀಯ ಖರ್ಚಾಗುತ್ತಿದೆ. ಬಿಸಿಲಿನ ಧಗೆಯಿಂದ ಬಳಲಿದವರ ದಾಹ ತಣಿಸಲು ಜಲ ಕುಟೀರ ಸಹಕಾರಿಯಾಗಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬಹುದು. ಮಳೆಗಾಲ ಆರಂಭವಾಗುವವರೆಗೂ ನೀರಿನ ವ್ಯವಸ್ಥೆ ಮುಂದುವರಿಯಲಿದೆ ಎನ್ನುತ್ತಾರೆ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು.

ಸಾರ್ವಜನಿಕರಿಗೆ ಮಾತ್ರವಲ್ಲ ಜಾನುವಾರುಗಳಿಗೂ ಸಮಿತಿಯಿಂದ ನೀರಿನ ವ್ಯವಸ್ಥೆ ಮಾಡಲಾಗಿದ್ದು ಉಡುಪಿಯ ರಥಬೀದಿಯಲ್ಲಿರುವ ರಾಘವೇಂದ್ರ ಮಠ, ಚಿತ್ತರಂಜನ್‌ ಸರ್ಕಲ್, ಬೀಡಿನಗುಡ್ಡೆ ಮೈದಾನ ಸೇರಿದಂತೆ ಐದು ಕಡೆಗಳಲ್ಲಿ ಮರಿಗೆಗಳನ್ನು ಇರಿಸಲಾಗಿದ್ದು ಬೀದಿ ನಾಯಿಗಳು, ಜಾನುವಾರುಗಳು, ಪಕ್ಷಿಗಳ ದಾಹ ತಣಿಸಲಾಗುತ್ತಿದೆ ಎಂದರು.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬಿಸಿಲಿನ ತಾಪ ತಣಿಸುವ ಉದ್ದೇಶದಿಂದ ನಾಗರಿಕ ಸಮಿತಿಯ ವತಿಯಿಂದ ಜೋಸ್ ಆಲೂಕ್ಕಾಸ್ ಆಭರಣ ಮಳಿಗೆಯ ಸಹಕಾರದೊಂದಿಗೆ ಮಾರುಥಿ ವೀಥಿಕಾ ರಸ್ತೆಯಲ್ಲಿ ಜಲಕುಟೀರ ಸ್ಥಾಪನೆ ಮಾಡಲಾಗಿದೆ
ಬಿಸಿಲಿನ ತಾಪ ತಣಿಸುವ ಉದ್ದೇಶದಿಂದ ನಾಗರಿಕ ಸಮಿತಿಯ ವತಿಯಿಂದ ಜೋಸ್ ಆಲೂಕ್ಕಾಸ್ ಆಭರಣ ಮಳಿಗೆಯ ಸಹಕಾರದೊಂದಿಗೆ ಮಾರುಥಿ ವೀಥಿಕಾ ರಸ್ತೆಯಲ್ಲಿ ಜಲಕುಟೀರ ಸ್ಥಾಪನೆ ಮಾಡಲಾಗಿದೆ
ಸಾರ್ವಜನಿಕರು ತುರ್ತು ಸೇವೆ ಪಡೆಯಲು ಶುಲ್ಕ ರಹಿತ 1077 ಅಥವಾ ದೂ. ಸಂಖ್ಯೆ: 0820-2574802 2574360 ಸಂಪರ್ಕಿಸಬಹುದು.
–ಕೆ.ವಿದ್ಯಾ ಕುಮಾರಿ ಜಿಲ್ಲಾಧಿಕಾರಿ
‘ಕುಡಿಯುವ ನೀರಿನ ವ್ಯವಸ್ಥೆ ಮಾಡಿ’
ಜಿಲ್ಲಾ ನಾಗರಿಕ ಸಮಿತಿ ನಿರ್ವಹಣೆಗೊಳಪಟ್ಟಿರುವ ಮೂರು ಆಂಬ್ಯುಲೆನ್ಸ್‌ಗಳಿದ್ದು ಪ್ರತಿದಿನ ಎರಡರಿಂದ ಮೂರು ಮಂದಿ ನೀರ್ಜಲೀಕರಣದಿಂದ ಅಸ್ವಸ್ಥಗೊಳ್ಳುತ್ತಿರುವ ಬಗ್ಗೆ ಕರೆಗಳು ಬರುತ್ತಿವೆ. ದಿನೇದಿನೇ ಬಿಸಲಿನ ತಾಪ ಹೆಚ್ಚುತ್ತಿದ್ದು ಸಾರ್ವಜನಿಕ ಸ್ಥಳಗಳಲ್ಲಿ ನಗರಸಭೆ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ನಾಗರಿಕ ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು ಹೇಳಿದರು.
‘ನೀರು ಪೋಲು ಮಾಡಬೇಡಿ’
ಉಡುಪಿ ನಗರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ಕೊರತೆಯಿಂದ ಸ್ಥಗಿತವಾಗಿರುವುದು ಗಮನಕ್ಕೆ ಬಂದಿಲ್ಲ. ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಹಾಕಲಾಗಿರುವ ನಲ್ಲಿಗಳನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದು ವಾಹನಗಳನ್ನು ತೊಳೆಯುತ್ತಿದ್ದಾರೆ. ನೀರು ಪೋಲು ಮಾಡಬಾರದು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಬೇಕು ಎಂದು ಪೌರಾಯುಕ್ತರ ರಾಯಪ್ಪ ಹೇಳಿದರು.

ಬಿಸಿಗಾಳಿಯಿಂದ ರಕ್ಷಣೆ ಹೇಗೆ

- ಬಿಸಿಲಿನಲ್ಲಿ ಕೊಡೆ ಬಳಸಿ

– ತೆಳುವಾದ ಬಿಳಿ ಬಣ್ಣದ ಸಡಿಲ ಹತ್ತಿಯ ಉಡುಪು ಧರಿಸಿ

– ಟೋಪಿ ಕೂಲಿಂಗ್ ಗ್ಲಾಸ್ ಪಾದರಕ್ಷೆ ಧರಿಸಿ

– ಹಿರಿಯ ನಾಗರಿಕರು ಮಕ್ಕಳು ಹೆಚ್ಚು ನೀರು ಸೇವಿಸಿ

– ಬೆಳಿಗ್ಗೆ 11ರಿಂದ 3ರವರೆಗೆ ಹೊರಾಂಗಣ ಚಟುವಟಿಕೆ ಕಡಿಮೆ ಮಾಡಿ

– ನೀರು ಮಜ್ಜಿಗೆ ಗ್ಲೂಕೋಸ್ ಹಣ್ಣಿನ ರಸ ಹೆಚ್ಚು ಉಪಯೋಗಿಸಿ

– ಕೊಠಡಿ ತಾಪಮಾನ ಕಡಿಮೆ ಮಾಡಿಕೊಳ್ಳಿ –ನೇರವಾಗಿ ಸೂರ್ಯನ ಶಾಖ ಬಿಸಿ ಗಾಳಿ ಮನೆ ಪ್ರವೇಶಿಸದಂತೆ ತಡೆಯಿರಿ

– ಪ್ರಯಾಣದ  ಸಂದರ್ಭ ಕಡ್ಡಾಯವಾಗಿ ನೀರು ಜತೆಗಿರಲಿ

–‘ ವಿಟಮಿನ್ ಸಿ’ ಕೊರತೆಗೆ ನಿಂಬೆ ಜ್ಯೂಸ್ ಕುಡಿಯಬಹುದು

– ತುಳಸಿ ಎಲೆಗಳನ್ನು ರುಬ್ಬಿ ನೀರಿನಲ್ಲಿ ಬೆರೆಸಿ ಕುಡಿದರೆ ಆಯಾಸ ನಿವಾರಣೆ

– ಆಹಾರದಲ್ಲಿ ಮಸಾಲೆ ಪದಾರ್ಥ ಹೆಚ್ಚು ಬಳಕೆ ಬೇಡ

– ತಲೆ ಮತ್ತು ಮೆದುಳು ತಂಪಾಗಿರಲು ಹರಳೆಣ್ಣೆ ಬಳಸಿ

– 5 ವರ್ಷದೊಳಗಿನ ಮಕ್ಕಳಿಗೆ ಅರ್ಧ ಗಂಟೆಗೊಮ್ಮೆ ನೀರು ಕೊಡಿ

– ತಣ್ಣೀರಿನ ಸ್ನಾನ ದೇಹಕ್ಕೆ ಒಳ್ಳೆಯದು

ಸಲಹೆಗಳು
ಹೀಟ್ ಸ್ಟ್ರೋಕ್ ಲಕ್ಷಣ ಹೊಂದಿರುವ ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಸ್ಥಳಾಂತರಿಸಬೇಕು. ತಣ್ಣೀರಿನಿಂದ ಮೈ ಒರೆಸಬೇಕು ಐಸ್ ಪ್ಯಾಕ್‌ಗಳನ್ನು ಉಪಯೋಗಿಸಬಹುದು. ಪರಿಸ್ಥಿತಿ ಸುಧಾರಿಸದಿದ್ದರೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಬೇಕು. ಹೊರಗೆ ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳು ಸಾಕುಪ್ರಾಣಿಗಳನ್ನು ಬಿಡಬಾರದು. ಜಾನುವಾರುಗಳನ್ನು ನೆರಳಿನಲ್ಲಿ ಕಟ್ಟಿ ಕುಡಿಯಲು ಸಾಕಷ್ಟು ನೀರು ಒದಗಿಸಬೇಕು.
‘ರೋಗಿಗಳು ಎಚ್ಚರದಿಂದಿರಿ’
ನವಜಾತ ಶಿಶಿಗಳು ಚಿಕ್ಕ ಮಕ್ಕಳು ಗರ್ಭಿಣಿಯರು ಹೊರಗೆ ಕೆಲಸ ಮಾಡುವವರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರು ಹೃದ್ರೋಗ ರಕ್ತದೊತ್ತಡದಿಂದ ಬಳುತ್ತಿರುವವರು ಎಚ್ಚರಿಕೆಯಿಂದ ಇರಬೇಕು. ದೇಹ ನಿರ್ಜಲೀಕರಣವಾಗದಂತೆ ಆಗಾಗ ನೀರು ಸೇವಿಸಬೇಕು. ಸಮಸ್ಯೆ ಹೆಚ್ಚಾದರೆ ಕೂಡಲೇ ಹತ್ತಿರದ ಆಸ್ಪತ್ರೆಗಳಿಗೆ ಭೇಟಿನೀಡಿ ಚಿಕಿತ್ಸೆ ಪಡೆಯಬೇಕು ಎಂದು ಡಿಎಚ್‌ಒ ಐ.ಪಿ.ಗಡಾದ್ ಹೇಳಿದರು.
ಕೆಟ್ಟುನಿಂತ ನೀರಿನ ಘಟಕಗಳು
ಉಡುಪಿ ನಗರದ ಕ್ಲಾಕ್ ಟವರ್‌ ಕೃಷ್ಣಮಠದ ಪಾರ್ಕಿಂಗ್ ಪ್ರದೇಶ ಸೇರಿದಂತೆ ಹಲವು ಕಡೆಗಳಲ್ಲಿ ನಗರಸಭೆ ಹಾಗೂ ಸಂಘ ಸಂಸ್ಥೆಗಳಿಂದ ಅಳವಡಿಕೆ ಮಾಡಲಾಗಿದ್ದ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ಕೊರತೆಯಿಂದ ಹಾಳಾಗಿದ್ದು ಸಾರ್ವಜನಿಕರು ನೀರಿಗಾಗಿ ಪರಿತಪಿಸುವಂತಾಗಿದೆ. ವಿಶೇಷವಾಗಿ ನಿರ್ಗತಿಕರು ಭಿಕ್ಷುಕರು ಹಾಗೂ ಬಡವರ ಪಾಲಿಗೆ ಆಧಾರವಾಗಿದ್ದ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸದಿರುವುದರಿಂದ ನೀರಿಗಾಗಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT