ಉಡುಪಿ: ಜಿಲ್ಲೆಯ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ಪ್ರಸ್ತುತ ಲಭ್ಯವಿರುವ ನಿವೇಶನಗಳ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ನಡೆದ ನಿವೇಶನ ಹಂಚಿಕೆ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸವಿರುವ ವಸತಿ, ನಿವೇಶನ ರಹಿತ ಫಲಾನುಭವಿಗಳ ಪಟ್ಟಿ ಪರಿಶೀಲಿಸಿ, ಅರ್ಹರನ್ನು ಗುರುತಿಸಿ, ಲಭ್ಯವಿರುವ ನಿವೇಶನಗಳ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಪಿಡಿಒಗಳಿಗೆ ಸೂಚನೆ ನೀಡಿದರು.
ವಿವಿಧ ಗ್ರಾಮ ಪಂಚಾಯಿತಿಯಲ್ಲಿ ನಿವೇಶನ ಕೋರಿ ಈಗಾಗಲೇ ಅರ್ಜಿ ಸಲ್ಲಿಕೆಯಾಗಿದೆ. ಬೇಡಿಕೆಯಿರುವ ಗ್ರಾಮಗಳಲ್ಲಿ ನಿವೇಶನ ವಿತರಿಸಲು ಅಗತ್ಯವಿರುವ ಜಮೀನು ಗುರುತಿಸುವ ಕಾರ್ಯ ತಹಶೀಲ್ದಾರರು, ಕಾರ್ಯನಿರ್ವಹಣಾಧಿಕಾರಿಗಳು ಸಮನ್ವಯದೊಂದಿಗೆ ಮಾಡಬೇಕು ಎಂದು ಜಿಲ್ಲಾದಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ನಿವೇಶನ ರಹಿತರಿಗೆ ಭೂಮಿ ನೀಡಲು ಕಾಯ್ದಿರಿಸುವ ಜಮೀನಿನ ಸರ್ವೇ ಕಾರ್ಯಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಅವುಗಳನ್ನು ನಿವೇಶನವಾಗಿ ಪರಿವರ್ತಿಸುವ ಕಾರ್ಯವನ್ನು ಅಧಿಕಾರಿಗಳು ಆದ್ಯತೆಯಲ್ಲಿ ಕೈಗೊಳ್ಳಬೇಕು ಎಂದರು.
ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ರಹಿತ ಫಲಾನುಭವಿಗಳನ್ನು ಗುರುತಿಸದೆ ಇದ್ದಲ್ಲಿ, ಅಂತಹ ಗ್ರಾಮ ಪಂಚಾಯಿತಿಯು ಒಂದು ತಿಂಗಳ ಒಳಗಾಗಿ ಅರ್ಹ ಫಲಾನುಭವಿಗಳನ್ನು ನಿಯಮಾನುಸಾರ ಆಯ್ಕೆ ಮಾಡಬೇಕು ಎಂದು ಸೂಚನೆ ನೀಡಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ಯೋಜನಾ ನಿರ್ದೇಶಕ ಪ್ರಶಾಂತ್ ರಾವ್, ಎಲ್ಲಾ ತಾಲ್ಲೂಕಿನ ತಹಶೀಲ್ದಾರರು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.
ನಿವೇಶನ ಬೇಡಿಕೆಯಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂಮಿ ಲಭ್ಯವಿಲ್ಲದೇ ಇದ್ದಲ್ಲಿ ನೆರೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಭೂಮಿ ಗುರುತಿಸಿ ನಿವೇಶನ ಹಂಚಿಕೆಗೆ ಕಾಯ್ದಿರಿಸಬೇಕು