ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಯಾತ್ಮಕ ಚಟುವಟಿಕೆಗಳೊಂದಿಗೆ ಮಕ್ಕಳಿಗೆ ಬೋಧಿಸಿ: ಜಿ. ಜಗದೀಶ್ ಸಲಹೆ

ಮುಖ್ಯ ಶಿಕ್ಷಕರಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸಲಹೆ
Last Updated 15 ಫೆಬ್ರುವರಿ 2021, 16:18 IST
ಅಕ್ಷರ ಗಾತ್ರ

ಉಡುಪಿ: ಜ್ಞಾನ ಹರಿಯುವ ನೀರಾಗಿದ್ದು, ಶಿಕ್ಷಕರು ಓದುವ ಹವ್ಯಾಸದೊಂದಿಗೆ ಹೆಚ್ಚು ಜ್ಞಾನ ಸಂಪಾದಿಸಿಕೊಂಡು ಮಕ್ಕಳಿಗೆ ಕ್ರಿಯಾತ್ಮಕ ಚಟುವಟಿಕೆಗಳೊಂದಿಗೆ ಬೋಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸಲಹೆ ನೀಡಿದರು.

ನಗರದ ಕುಂಜಿಬೆಟ್ಟು ಟಿಎಪೈ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಆಯೋಜಿಸಿದ್ದ ಪ್ರೇರಣಾ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬದಲಾಗುವ ಪ್ರಪಂಚಕ್ಕೆ ಹೊಂದಿಗೊಳ್ಳುವ, ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಗುಣವನ್ನು ಶಿಕ್ಷಕರು ಮೈಗೂಡಿಸಿಕೊಂಡು ವಿದ್ಯಾರ್ಥಿಗಳಿಗೆ ಮುಂದಿನ ಇಪ್ಪತ್ತು ವರ್ಷದ ಜ್ಞಾನಾಧಾರಿತ ಶಿಕ್ಷಣ ನೀಡಬೇಕು. ಆಗ ಮಾತ್ರ ಶಿಕ್ಷಣದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದರು.

ಶಿಸ್ತುಬದ್ಧ ಶಿಕ್ಷಣ ಜೊತೆಗೆ ಕಾರ್ಪೊರೆಟ್ ಕಂಪೆನಿಗಳ ಸಿಎಸ್‌ಆರ್ ಫಂಡ್ ಬಳಸಿಕೊಂಡು ಶಾಲಾ ಪರಿಸರವನ್ನು ಅಂದವಾಗಿಟ್ಟುಕೊಳ್ಳಬೇಕು. ಶಾಲೆಗಳಲ್ಲಿ ಅಶಿಸ್ತಿನ ವಾತಾವರಣ ಕಂಡುಬಂದಲ್ಲಿ ಶಾಲಾ ಮುಖ್ಯಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ 261 ಪ್ರೌಢಶಾಲೆಗಳಿದ್ದು, 106 ಸರ್ಕಾರಿ ಪ್ರೌಢಶಾಲೆಗಳು, 70 ಅನುದಾನಿತ ಹಾಗೂ 85 ಅನುದಾನ ರಹಿತ ಪ್ರೌಢಶಾಲೆಗಳಿವೆ. 13,558 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಓದುತ್ತಿದ್ದು, ವಿದ್ಯಾಭ್ಯಾಸಕ್ಕೆ ಅಡ್ಡಿಯಾಗದಂತೆ ಮುಖ್ಯೋಪಾಧ್ಯಾಯರು ಸಹ ಶಿಕ್ಷಕರೊಂದಿಗೆ ಉತ್ತಮ ಜ್ಞಾನಾಧರಿತ ಶಿಕ್ಷಣ ನೀಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಮಕ್ಕಳ ಮನಸ್ಥಿತಿ ಅರಿತು ಬೋಧನೆ ಮಾಡಬೇಕು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಶಾಲಾ ಶಿಕ್ಷಕರು ಪೂರಕ ವಾತಾವರಣ ಕಲ್ಪಿಸುವುದರೊಂದಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಸಿಟಿಇ ಪ್ರಾಂಶುಪಾಲ ಸಿಪ್ರಿಯಾನ್ ಮೆಂತೆರೋ, ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ, ತಾಲ್ಲೂಕು ಶಿಕ್ಷಣಾಧಿಕಾರಿಗಳು ಇದ್ದರು. ಡಿಡಿಪಿಐ‌ ಎನ್.ಹೆಚ್ ನಾಗೂರ ಸ್ವಾಗತಿಸಿದರು. ಉಡುಪಿ ಡಯಟ್‌ನ ಉಪ ಪ್ರಾಂಶುಪಾಲ ಅಶೋಕ ಕಾಮತ್ ವಂದಿಸಿದರು. ಡಿವೈಪಿಸಿ ಪ್ರಭಾಕರ ಮಿತ್ಯಂತ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT