ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಠ್ಯ ಪರಿಷ್ಕರಣೆ; ಶ್ರೇಣೀಕೃತ ಸಮಾಜ ನಿರ್ಮಾಣ ಹುನ್ನಾರ’

ನಾರಾಯಣ ಗುರುಗಳ ಪಠ್ಯ ಕೈಬಿಟ್ಟ ಕ್ರಮದ ವಿರುದ್ಧ ಬಿಲ್ಲವ ಸಮಾಜದಿಂದ ಪ್ರತಿಭಟನೆ
Last Updated 8 ಜುಲೈ 2022, 13:37 IST
ಅಕ್ಷರ ಗಾತ್ರ

ಉಡುಪಿ: ಅಸ್ಪೃಶ್ಯತೆ ಹೆಸರಿನಲ್ಲಿ ಮೇಲ್ವರ್ಗದವರು ಕೆಳವರ್ಗದವರ ಮೇಲೆ ನಡೆಸುತ್ತಿದ್ದ ದೌರ್ಜನ್ಯ, ಶೋಷಣೆಯ ಅರಿವು ಇಂದಿನ ವಿದ್ಯಾರ್ಥಿಗಳಿಗೆ ಸಿಗಬಾರದು ಎಂಬ ಕಾರಣಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಸಮಾಜ ವಿಜ್ಞಾನ ಪುಸ್ತಕದಿಂದ ಕೈಬಿಡಲಾಗಿದೆ ಎಂದು ನಾರಾಯಣ ಗುರುಗಳ ವಿಚಾರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಆಕ್ರೋಶ ವ್ಯಕ್ತಪಡಿಸಿದರು.

ಶ್ರೀವಿಶ್ವನಾಥ ಕ್ಷೇತ್ರ ಹಾಗೂ ಬಿಲ್ಲವ ಸಮಾಜದಿಂದ ಪಠ್ಯ ಪರಿಷ್ಕರಣೆ ವೇಳೆ ಸಮಾಜ ವಿಜ್ಞಾನ ಪುಸ್ತಕದಿಂದ ನಾರಾಯಣ ಗುರುಗಳ ಪಠ್ಯ ಕೈಬಿಟ್ಟಿರುವುದನ್ನು ಖಂಡಿಸಿ ಹಾಗೂ ಪಠ್ಯ ಮರುಸೇರ್ಪಡೆಗೆ ಒತ್ತಾಯಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಪಠ್ಯ ಪರಿಶೀಲನೆ ಮಾಡುವಂತೆ ಮಾತ್ರ ಸಮಿತಿಗೆ ಅಧಿಕಾರ ನೀಡಿದ್ದರೂ ದುರ್ಬಳಕೆ ಮಾಡಿಕೊಂಡು ಪಠ್ಯ ಪರಿಷ್ಕರಿಸಲಾಗಿದೆ. ಸಮಾಜ ವಿಜ್ಞಾನ ವಿಷಯದಲ್ಲಿದ್ದ ನಾರಾಯಣ ಗುರುಗಳ ಪಾಠ ತೆಗೆದು ಕನ್ನಡ ಪುಸ್ತಕಕ್ಕೆ ಸೇರಿಸಲಾಗಿದೆ. ಆದರೆ, ಐಚ್ಛಿಕವಾಗಿ ಕನ್ನಡ ವಿಷಯ ತೆಗೆದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಇದ್ದು, ಶೇ 75ರಷ್ಟು ವಿದ್ಯಾರ್ಥಿಗಳಿಗೆ ನಾರಾಯಣ ಗುರುಗಳ ಚಿಂತನೆಗಳು ತಲುಪುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಲಿತರ, ಹಿಂದುಳಿದ ವರ್ಗದವರ ಮತಾಂತರಕ್ಕೆ ಮೇಲ್ವರ್ಗದವರ ಶೋಷಣೆ ಪ್ರಮುಖ ಕಾರಣ. ನಾಲ್ಕು ಸಮುದಾಯಗಳು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಪ್ರಬಲರಾದರೆ ಇಡೀ ಹಿಂದೂ ಸಮಾಜ ಗಟ್ಟಿಯಾಗುವುದಿಲ್ಲ. ದಲಿತರು, ಹಿಂದುಳಿದ ವರ್ಗಗಳ ಅಭಿವೃದ್ಧಿಯೂ ಅಗತ್ಯ ಎಂದು ಪ್ರತಿಪಾದಿಸಿದರು.

ನಾರಾಯಣ ಗುರುಗಳ ಹೆಸರಿನಲ್ಲಿ ನಿಗಮ ಮಂಡಳಿ ಸ್ಥಾಪಿಸಲು ನಿರಾಕರಿಸಿರುವ ಸರ್ಕಾರ, ಸಣ್ಣ ಸಮುದಾಯಗಳಿಗೆ ನಿಗಮ ಮಂಡಳಿ ರಚಿಸಿ ಕೋಟ್ಯಂತರ ರೂಪಾಯಿ ಅನುದಾನ ನೀಡಿ ಮಲತಾಯಿ ಧೋರಣೆ ಪ್ರದರ್ಶಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ಕೋಶಾಧಿಕಾರಿ ಪದ್ಮರಾಜ ಮಾತನಾಡಿ, ನಾರಾಯಣ ಗುರುಗಳ ತತ್ವ ಚಿಂತನೆಗಳು ಸರ್ವಕಾಲಕ್ಕೂ ಸಲ್ಲುತ್ತವೆ. ಆದರೆ, ಗುರುಗಳ ಪಠ್ಯವನ್ನು ಕೈಬಿಡುವ ಮೂಲಕ ಸಮಿತಿ ಅಪಚಾರ ಎಸಗಿದೆ. ಗುರುಗಳ ಪಠ್ಯ ಸೇರ್ಪಡೆಯಾಗಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ನಾರಾಯಣ ಗುರುಗಳ ಸಂದೇಶಗಳೊಂದಿಗೆ ಬಿಲ್ಲವ ಸಮುದಾಯ ಮುನ್ನಡೆಯುತ್ತಿದೆ. ಗುರುಗಳ ಪಠ್ಯ ಕೈಬಿಡುವ ಮೂಲಕ ಸಮಾಜದ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಠ್ಯ ಪರಿಷ್ಕರಣೆ ಸಮಿತಿಯು ನಾರಾಯಣ ಗುರುಗಳ ವಿಚಾರವನ್ನು ಮಾತ್ರ ಕೈಬಿಟ್ಟಿಲ್ಲ, ಜಗಜ್ಯೋತಿ ಬಸವಣ್ಣ, ರಾಷ್ಟ್ರಕವಿ ಕುವೆಂಪು, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಕಯ್ಯಾರ ಕಿಞ್ಞಣ್ಣ ರೈ ಅವರನ್ನೂ ಅವಹೇಳನ ಮಾಡಿದೆ. ಹಿಂದಿದ್ದ ಜಾತಿ ಆಧಾರಿತ ಶ್ರೇಣಿಕೃತ ಸಮಾಜ ನಿರ್ಮಾಣ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.‌

ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್‌.ವೀಣಾ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಗೂ ಮುನ್ನ ಕಾಯಿನ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಬಿಲ್ಲವ ಸಮಾಜದ ಮುಖಂಡರಾದ ಕಟಪಾಡಿ ಶಂಕರ ಪೂಜಾರಿ, ನವೀನ್ ಅಮೀನ್, ಜನಾರ್ದನ ತೋನ್ಸೆ, ಸುನಿಲ್ ಬಂಗೇರ, ಜಗನ್ನಾಥ್‌ ಕೋಟೆ, ಮಂಜುನಾಥ್ ಹೆಬ್ರಿ, ರಮೇಶ್ ಕಾಂಚನ್‌, ದೀಪಕ್ ಕೋಟ್ಯಾನ್‌, ಗೀತಾಂಜಲಿ ಸುವರ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT