ಶನಿವಾರ, ಆಗಸ್ಟ್ 17, 2019
24 °C
ಶಾಲೆಗಳಿಗೆ ಟ್ಯಾಂಕರ್ ನೀರು ಪೂರೈಕೆಗೆ ಜಿಲ್ಲಾಧಿಕಾರಿ ಸೂಚನೆ

ಬಿಸಿಯೂಟಕ್ಕೆ ನೀರಿಲ್ಲ: ಮಧ್ಯಾಹ್ನ ಶಾಲೆಗಳಿಗೆ ರಜೆ

Published:
Updated:
Prajavani

ಉಡುಪಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಹಲವು ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೂ ನೀರು ಸಿಗುತ್ತಿಲ್ಲ. ಪರಿಣಾಮ, ಬೆಳಿಗ್ಗೆ ಶಾಲೆ ನಡೆಸಿ ಮಧ್ಯಾಹ್ನ ರಜೆ ನೀಡಲಾಗುತ್ತಿದೆ.

ಕಾರ್ಕಳ ತಾಲ್ಲೂಕು ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ಶಾಲೆಗಳಲ್ಲಿ ಬಿಸಿಯೂಟಕ್ಕೆ ನೀರಿನ ಅಭಾವ ಎದುರಾಗಿದೆ. ಅಡುಗೆಗೆ ನೀರಿಲ್ಲದ ಪರಿಣಾಮ ಅಕ್ಷರ ದಾಸೋಹ ಸಿಬ್ಬಂದಿ ಕೆಲಸ ನಿಲ್ಲಿಸಿದ್ದಾರೆ. ಸಮಸ್ಯೆಯನ್ನು ಡಿಡಿಪಿಐ ಅವರ ಗಮನಕ್ಕೆ ತರಲಾಗಿದ್ದು, ಅವರ ಸೂಚನೆಯಂತೆ ಬೆಳಗಿನ ಶಾಲೆ ನಡೆಸಿ, ಮಧ್ಯಾಹ್ನ ಮಕ್ಕಳನ್ನು ಮನೆಗೆ ಊಟಕ್ಕೆ ಕಳುಹಿಸುವಂತೆ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಲಾಗಿದೆ ಎಂದು ಕಾರ್ಕಳ ಬಿಇಒ ಶಶಿಧರನ್ ಮಾಹಿತಿ ನೀಡಿದರು.

ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಬುತ್ತಿ ತರುವಂತೆ ಸೂಚಿಸಲಾಗಿದೆ. ಬುತ್ತಿ ತರದವರಿಗೆ ಮನೆಗೆ ಕಳುಹಿಸಲಾಗುತ್ತಿದೆ. ಮಧ್ಯಾಹ್ನದ ನಂತರ ಶಾಲೆಗೆ ರಜೆ ನೀಡಿದರೂ ಶಿಕ್ಷಕರು ಮಾತ್ರ ಸಂಜೆವರೆಗೆ ಕರ್ತವ್ಯ ನಿರ್ವಹಿಸಲಿದ್ದಾರೆ. ಶಾಲೆಗಳನ್ನು ಮುಚ್ಚದಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.

ಬಿಸಿಯೂಟಕ್ಕೆ ಮಾತ್ರವಲ್ಲ; ಶೌಚಾಲಯ ಬಳಕೆಗೂ ನೀರು ಸಿಗುತ್ತಿಲ್ಲ. ಕೆಲವು ಶಾಲೆಗಳಲ್ಲಿ ಶಿಕ್ಷಕರು ಅಕ್ಕಪಕ್ಕದ ಮನೆಗಳಿಂದ, ಗ್ರಾಮ ಪಂಚಾಯತ್‌ಗಳಿಂದ ನೀರು ಪಡೆದು ಬಳಸುತ್ತಿದ್ದಾರೆ. ಆದರೆ, ಬಿಸಿಯೂಟಕ್ಕೆ ಶುದ್ಧ ನೀರನ್ನು ಬಳಸಬೇಕಿರುವ ಕಾರಣ, ಅಡುಗೆಗೆ ಯೋಗ್ಯ ನೀರು ಸಿಕ್ಕರಷ್ಟೇ ಬಳಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಬಿಇಒ ತಿಳಿಸಿದರು.

ಬ್ರಹ್ಮಾವರ ವ್ಯಾಪ್ತಿಯಲ್ಲಿ ಬುಧವಾರ 16 ಶಾಲೆಗಳಲ್ಲಿ ಕುಡಿಯುವ ನೀರಿಲ್ಲದೆ ಬಿಸಿಯೂಟ ತಯಾರಿಸಿಲ್ಲ. ಬೆಳಿಗ್ಗೆ ಶಾಲೆ ನಡೆಸಿ ಮಧ್ಯಾಹ್ನ ರಜೆ ನೀಡಲಾಗಿದೆ ಎಂದು ಬಿಇಒ ಪ್ರಕಾಶ್ ತಿಳಿಸಿದರು. 

ಕುಂದಾಪುರ ವ್ಯಾಪ್ತಿಯ ಸರ್ಕಾರಿ ಬೋರ್ಡ್‌ ಹೈಸ್ಕೂಲ್‌, ಜಿಪಿಯುಸಿ, ಕೊಮೆ, ಕೊರವಡಿ ಸೇರಿದಂತೆ ಐದಾರು ಶಾಲೆಗಳಲ್ಲಿ ಬಿಸಿಯೂಟಕ್ಕೆ ನೀರಿಲ್ಲದಿರುವುದು ಗಮನಕ್ಕೆ ಬಂದಿದೆ ಎಂದು ಬಿಇಒ ಮಾಹಿತಿ ನೀಡಿದರು.

ಬಿಸಿಯೂಟಕ್ಕೆ ನೀರು ಸರಬರಾಜು ಆಗುವವರೆಗೂ ಮಧ್ಯಾಹ್ನ ಶಾಲೆ ಮುಚ್ಚುವುದು ಅನಿವಾರ್ಯ. ಶಾಲೆ ತೆರೆದರೆ ಮಕ್ಕಳು ಹಸಿವೆಯಿಂದ ಬಳಲಬೇಕಾಗುತ್ತದೆ. ಮಳೆ ಬಿದ್ದರಷ್ಟೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.‌

‘ಮಾಹಿತಿ ಪಡೆದಿದ್ದೇನೆ’

‘ಬಿಸಿಯೂಟಕ್ಕೆ ನೀರಿನ ಸಮಸ್ಯೆ ಎದುರಾಗಿರುವ ಬಗ್ಗೆ ಡಿಡಿಪಿಐ ಬಳಿ ಮಾಹಿತಿ ಪಡೆದುಕೊಂಡಿದ್ದೇನೆ. ಗಂಭೀರ ಸಮಸ್ಯೆ ಇರುವ ಶಾಲೆಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಸೂಚನೆ ನೀಡಲಾಗಿದೆ. ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ನೀರಿನ ಸಮಸ್ಯೆ ಇಲ್ಲ. ನೀರಿಲ್ಲ ಎಂದು ಶಾಲೆಗಳನ್ನು ಮುಚ್ಚುವುದಿಲ್ಲ’ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.

**

ಬಿಸಿಯೂಟಕ್ಕೆ ನೀರಿಲ್ಲದಿದ್ದರೆ ಬೆಳಿಗ್ಗೆ ಮಾತ್ರ ಶಾಲೆ ನಡೆಸುವಂತೆ ಬಿಇಒಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿ ಟ್ಯಾಂಕರ್ ನೀರು ಪೂರೈಸುವ ಭರವಸೆ ನೀಡಿದ್ದಾರೆ.
ಶೇಷಶಯನ ಕಾರಿಂಜ, ಡಿಡಿಪಿಐ

Post Comments (+)