ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಪ್ರವಾಸೋದ್ಯಮ ಕ್ಷೇತ್ರಕ್ಕೆ ಬೇಕು ಕಾಯಕಲ್ಪ

Published 4 ಡಿಸೆಂಬರ್ 2023, 7:30 IST
Last Updated 4 ಡಿಸೆಂಬರ್ 2023, 7:30 IST
ಅಕ್ಷರ ಗಾತ್ರ

ಉಡುಪಿ: ಪ್ರಾಕೃತಿಕ ಸೌಂದರ್ಯವನ್ನು ಹೊದ್ದು ನಿಂತಿರುವ ಪಶ್ಚಿಮ ಘಟ್ಟಗಳು, ಕಣ್ಮನ ಸೆಳೆಯುವ ಕರಾವಳಿ ತೀರಗಳು, ಸುಂದರ ಹಿನ್ನೀರಿನ ತಾಣಗಳು, ಪ್ರಸಿದ್ಧ ಹಾಗೂ ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ಉಡುಪಿ ಜಿಲ್ಲೆಗೆ ಹೊರಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಕೋವಿಡ್‌ನಿಂದ ಮಂಕಾಗಿದ್ದ ಪ್ರವಾಸೋದ್ಯಮ ಕ್ಷೇತ್ರ ಮಗ್ಗಲು ಬದಲಿಸಿದ್ದು ಸಹಜ ಸ್ಥಿತಿಗೆ ಮರಳಿದೆ.

ಆದರೆ, ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಗಳು ಮಾತ್ರ ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿವೆ. ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ, ಭದ್ರತೆ, ಅನೈರ್ಮಲ್ಯ, ಸುಗಮ ಸಂಚಾರಕ್ಕೆ ಗುಂಡಿಮುಕ್ತ ರಸ್ತೆಗಳು ಇಲ್ಲವಾಗಿದ್ದು ಪ್ರವಾಸಿಗರು ಕಿರಿಕಿರಿ ಅನುಭವಿಸುವಂತಾಗಿದೆ.

ಮಲ್ಪೆ ಬೀಚ್ ಅವ್ಯವಸ್ಥೆ: ರಾಜ್ಯದಲ್ಲೇ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಮಲ್ಪೆ ಬೀಚ್‌ಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದು ಇಲ್ಲಿನ ಅವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಉಡುಪಿ ನಗರದಿಂದ ಮಲ್ಪೆ ರಸ್ತೆ ಪ್ರವೇಶಿಸುತ್ತಿದ್ದಂತೆ ಹೊಂಡ ಗುಂಡಿಗಳು ಪ್ರವಾಸಿಗರಿಗೆ ಸ್ವಾಗತ ಕೋರುತ್ತವೆ.

ಕರಾವಳಿ ಬೈಪಾಸ್‌ನಿಂದ ಮಲ್ಪೆಯವರೆಗೂ ಹೆದ್ದಾರಿ ಸಂಪೂರ್ಣವಾಗಿ ಹಾಳಾಗಿದ್ದು ಕೇವಲ 5ಕಿ.ಮೀ ಕ್ರಮಿಸುವಷ್ಟರಲ್ಲಿ ಆಯಾಸ ಶುರುವಾಗುತ್ತದೆ. ಪ್ರವೇಶದ್ವಾರದಲ್ಲಿ ಪ್ರವೇಶ ಶುಲ್ಕ ಪಾವತಿಸುವ ಪ್ರವಾಸಿಗರಿಗೆ ಬೀಚ್‌ನಲ್ಲಿ ಉಚಿತವಾಗಿ ಶುದ್ಧ ಕುಡಿಯುವ ನೀರಿನ  ವ್ಯವಸ್ಥೆ ಇಲ್ಲ. ಕರಾವಳಿಯ ಧಗೆಯ ವಾತಾವರಣ ತಡೆಯದ ಪ್ರವಾಸಿಗರು ಬಾಟೆಲ್‌ ನೀರಿಗೆ ಅಲೆಯಬೇಕಾದ ಪರಿಸ್ಥಿತಿ ಇದೆ.

ಶಾಲಾ ಪ್ರವಾಸಕ್ಕೆ ಬರುವ ಸರ್ಕಾರಿ ಶಾಲೆಯ ಮಕ್ಕಳು ಹಣ ಕೊಟ್ಟು ಬಾಟೆಲ್‌ ನೀರು ಖರೀದಿಸಲು ಸಾಧ್ಯವಿಲ್ಲದೆ ಬಿಸಿಲಿನ ಧಗೆಯಿಂದ ಬಳಲುವ ದೃಶ್ಯ ಬೀಚ್‌ನಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತದೆ. ಶಾಲೆಯಿಂದ 300 ಮಕ್ಕಳು ಪ್ರವಾಸಕ್ಕೆ ಬಂದಿದ್ದು ತಲಾ ಒಂದು ಬಾಟೆಲ್‌ನಂತೆ ನೀರು ಖರೀದಿಸಿದರೂ ₹7,500 ಖರ್ಚಾಗುತ್ತದೆ.

ಒಬ್ಬರು ಮೂತ್ರ ವಿಸರ್ಜನೆಗೆ ₹5, ಮಲ ವಿಸರ್ಜನೆಗೆ ₹10, ಸ್ನಾನಕ್ಕೆ ₹20 ಶುಲ್ಕ ಪಾವತಿಸಬೇಕು. ಕುಡಿಯುವ ನೀರು, ಮಲ, ಮೂತ್ರ ವಿಸರ್ಜನೆಗೆ ಸಾವಿರಾರು ರೂಪಾಯಿ ತೆರಬೇಕು. ಬೀಚ್‌ನಲ್ಲಿ ಸಾಮೂಹಿಕ ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿದರೆ ಬಡ ವಿದ್ಯಾರ್ಥಿಗಳಿಗೆ ಹಾಗೂ ಆರ್ಥಿಕವಾಗಿ ಅಶಕ್ತರಿಗೆ ಹೆಚ್ಚು ಅನುಕೂಲವಾಗಲಿದೆ ಎನ್ನುತ್ತಾರೆ ಪ್ರವಾಸಕ್ಕೆ ಮಕ್ಕಳನ್ನು ಕರೆತಂದಿದ್ದ ಶಿಕ್ಷಕ ಚಂದ್ರಶೇಖರ್.

ಶಾಲಾ ಪ್ರವಾಸಕ್ಕೆ ಬರುವ ಕೆಲವು ಮಕ್ಕಳು ಕಡಲ ಕಿನಾರೆ ಬಳಿಯೇ ಮೂತ್ರ ವಿಸರ್ಜನೆಗೆ ಮುಂದಾಗುತ್ತಿದ್ದು ದುರ್ವಾಸನೆ ತುಂಬಿದೆ. ಮುಜುಗರದ ಸನ್ನಿವೇಶಗಳು ಸೃಷ್ಟಿಯಾಗುತ್ತಿದ್ದು ಕಿರಿಕಿರಿ ಉಂಟಾಗುತ್ತಿದೆ ಎಂದು ದೂರುತ್ತಾರೆ ಪ್ರವಾಸಿಗರಾದ ಬೆಂಗಳೂರಿನ ದೇವರಾಜ್‌.

ಮಲ್ಪೆ ಬೀಚ್‌ನ ನಿರ್ವಹಣೆಯೂ ತೃಪ್ತಿಕರವಾಗಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ. ಪ್ರತಿವರ್ಷ ಮಳೆಗಾಲ ಕಳೆದು ಬೀಚ್‌ ಪ್ರವಾಸಿಗರಿಗೆ ಮುಕ್ತವಾಗುವ ಹೊತ್ತಿಗೆ ಕಡಲ ಕಿನಾರೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತಿತ್ತು. ಆದರೆ, ಈ ಬಾರಿ ಕಿನಾರೆಯ ಬದಿಯಲ್ಲಿ ಬಿಯರ್ ಬಾಟೆಲ್‌ಗಳು, ಪ್ಲಾಸ್ಟಿಕ್ ಬಾಟೆಲ್‌ಗಳು, ಹಳೆಯ ಚಪ್ಪಲಿ, ಹಳೆಯ ಬಟ್ಟೆ, ತ್ಯಾಜ್ಯದ ರಾಶಿ ಬಿದ್ದಿದೆ. ಸೇಂಟ್ ಮೇರಿಸ್ ಐಲ್ಯಾಂಡ್‌ನಲ್ಲೂ ಮೂಲಸೌಕರ್ಯ ಕೊರತೆ ಕಾಡುತ್ತಿದೆ. ಶೌಚಾಲಯದ ವ್ಯವಸ್ಥೆ ಸಮರ್ಪಕವಾಗಿಲ್ಲ. ತ್ಯಾಜ್ಯದ ರಾಶಿ ತೆರವುಗೊಳಿಸಿಲ್ಲ ಎಂದು ದೂರುತ್ತಾರೆ ಪ್ರವಾಸಿಗರಾದ ಸೌಮ್ಯ.

ಪ್ರವಾಸಿತಾಣಗಳು

ಕೃಷ್ಣಮಠ ಮಲ್ಪೆ ಬೀಚ್‌ ಸೀವಾಕ್ ಬಂದರು ಸೇಂಟ್ ಮೇರಿಸ್ ಐಲ್ಯಾಂಡ್‌ ಹಸ್ತಶಿಲ್ಪ ಹೆರಿಟೇಜ್‌ ವಿಲೇಜ್ ಮಣ್ಣಪಳ್ಳ ಕೆರೆ ಕೋಡಿಬೆಂಗ್ರೆ ಹೌಸ್‌ ಬೋಟ್‌ ಪಡುಕೆರೆ ಬೀಚ್ ನಾಣ್ಯ ಮ್ಯೂಸಿಯಂ ಸಾಲುಮರದ ತಿಮ್ಮಕ್ಕ ಟ್ರೀಪಾರ್ಕ್ ಅರ್ಬಿ ಫಾಲ್ಸ್‌ ಗೊಮ್ಮಟೇಶ್ವರ ಬೆಟ್ಟ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ಚತುರ್ಮಖ ಬಸದಿ ಆನೆಕರೆ ತ್ರಾಸಿ ಕೋಡಿ ಗಂಗೊಳ್ಳಿ ಬೀಚ್‌ ಮಲ್ಯಾಡಿ ಪಕ್ಷಿಧಾಮ ಉಪ್ಪಿನಕುದ್ರು ದ್ವೀಪ ಸೌಪರ್ಣಿಕ ನದಿ ಕೋಟ ಶಿವರಾಮಕಾರಂಥ ಥೀಂ ಪಾರ್ಕ್ ಬಾರ್ಕೂರು ಕೋಟೆ ಕತ್ತಲೆ ಬಸದಿ ಡಿವೈನ್ ಪಾರ್ಕ್ ಸೂರಾಲು ಅರಮನೆ ಬಾಳಕುದ್ರು ದ್ವೀಪ ಕಾಪು ಲೈಟ್ ಹೌಸ್ ಪಡುಬಿದ್ರಿ ಬೀಚ್ ಬ್ಲೂಫ್ಲ್ಯಾಗ್ ಬೀಚ್‌ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮರವಂತೆ ಬೀಚ್ ಒತ್ತಿನೆಣೆ ಪಡುವರಿ ಬೀಚ್‌ ಆಜೆಝರಿ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ ಕೊಡಚಾದ್ರಿ ಬೆಟ್ಟ ಕೂಸಳ್ಳಿ ಫಾಲ್ಸ್‌ ಕಿರಿಮಂಜೇಶ್ವರ ಬೀಚ್‌ ಮೂಡಗಲ್ಲು ಪಾದೆ ಶಿರೂರು ಬೀಚ್‌ ಬೆಳ್ಕಲ್ ತೀರ್ಥ ಫಾಲ್ಸ್‌ ಸೋಮೇಶ್ವರ ದೇವಸ್ಥಾನ ಕೂಡ್ಲುತೀರ್ಥ ಜೋಮ್ಲುತೀರ್ಥ ಸೀತಾನದಿ ಪ್ರಕೃತಿ ಕೇಂದ್ರಬಕ್ರೆ ಮಠ ಮುದ್ರಾಡಿ ಗರಡಿ.

ಲೈಫ್‌ ಗಾರ್ಡ್‌ಗಳ ಕೊರತೆ

ಮಲ್ಪೆ ಬೀಚ್‌ನಲ್ಲಿ ಸದ್ಯ ಮೂವರು ಲೈಫ್‌ಗಾರ್ಡ್‌ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಪ್ರವಾಸಿಗರು ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿದರೆ ತಕ್ಷಣ ರಕ್ಷಣೆಗೆ ಧಾವಿಸಲು ಬೀಚ್‌ನಲ್ಲಿ ಲೈಫ್‌ಗಾರ್ಡ್‌ಗಳ ಕೊರತೆ ಉಂಟಾಗಿದೆ. ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿನೀಡುವ ಬೀಚ್‌ನಲ್ಲಿ ಕನಿಷ್ಠ 15 ರಿಂದ 20 ಲೈಫ್‌ಗಾರ್ಡ್‌ಗಳ ಅಗತ್ಯವಿದೆ. ರಕ್ಷಣೆಗೆ ಧಾವಿಸಲು ಲೈಫ್‌ಗಾರ್ಡ್‌ಗಳ ಬಳಿ ಜೆಟ್‌ಸ್ಕೀ ವ್ಯವಸ್ಥೆಯೂ ಇಲ್ಲ. ವಾಟರ್‌ಸ್ಟೋರ್ಟ್ಸ್‌ಗಳಿಗೆ ಬಳಕೆಯಾಗುವ ಜೆಟ್‌ಸ್ಕೀಗಳನ್ನು ರಕ್ಷಣೆಗೆ ಬಳಸಿಕೊಳ್ಳಲಾಗುತ್ತಿದೆ.

‘ಕಾಪು ಬೀಚ್‌ಗೆ ಸಮರ್ಪಕ ರಸ್ತೆ ಇಲ್ಲ’

ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ಕಾಪು ಬೀಚ್‌ನ ಲೈಟ್‌ ಹೌಸ್‌ ಆಕರ್ಷಣೀಯ ಪ್ರವಾಸಿ ತಾಣವಾಗಿದ್ದರೂ ಇಲ್ಲಿಗೆ ಬರಲು ಪ್ರವಾಸಿಗರಿಗೆ ಸೂಕ್ತ ರಸ್ತೆ ಸೌಲಭ್ಯವಿಲ್ಲ. ಹಿಂದಿದ್ದ ಸಿಸಿಟಿವಿ ಕ್ಯಾಮೆರಾವನ್ನು ದುರಸ್ತಿ ಉದ್ದೇಶದಿಂದ ತೆಗೆದು ಹಾಕಲಾಗಿದ್ದು ಇನ್ನೂ ಅಳವಡಿಸಿಲ್ಲ. ಪಡುಬಿದ್ರಿಯ ಬ್ಲೂಫ್ಲ್ಯಾಗ್‌ ಬೀಚ್ ಅಂತರರಾಷ್ಟ್ರೀಯ ಮಾನ್ಯತೆ ಪಡೆದಿದ್ದರೂ ಬೀಚ್‌ಗೆ ಸಂಪರ್ಕಿಸುವ ರಸ್ತೆ ಕಿರಿದಾಗಿದ್ದು ಪ್ರವಾಸಿಗರ ವಾಹನಗಳು ಬರಲು ಹರಸಾಹಸ ಪಡಬೇಕಾಗಿದೆ. ರಸ್ತೆ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಕಾಮಗಾರಿ ಆರಂಭವಾಗಿಲ್ಲ. ಬ್ಲೂಫ್ಲ್ಯಾಗ್‌ ಮಾನ್ಯತೆಯ ಬಳಿಕ ಪಡುಬಿದ್ರಿ ಬೀಚ್‌ಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದರೂ ರಸ್ತೆ ಸಂಪರ್ಕ ಸಮಸ್ಯೆಯಿಂದ ಕಿರಿಕಿರಿ ಅನುಭವಿಸುವಂತಾಗಿದೆ.

ಒತ್ತಿನೆಣೆಯೂ ನಿರ್ಲಕ್ಷ್ಯ

ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಬೈಂದೂರಿನ ಒತ್ತಿನಣೆ ಕ್ಷಿತಿಜ ನೇಸರ ಧಾಮವು ಒಂದಾಗಿದ್ದು ಅರಣ್ಯ ಇಲಾಖೆಯ ಭಾಗವಾಗಿರುವ ಗ್ರಾಮ ಅರಣ್ಯ ಸಮಿತಿ ಅಡಿಯಲ್ಲಿ ಕ್ಷಿತಿಜ ನೇಸರ ಧಾಮ ಕಾರ್ಯನಿರ್ವಹಿಸುತ್ತಿದೆ. ನದಿ ಹಾಗೂ ಸಮುದ್ರಗಳ ಸಂಗಮದ ದೃಶ್ಯವನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಪ್ರವಾಸಿಗರಿಗೆ ಪ್ರವೇಶ ಶುಲ್ಕವನ್ನು ನಿಗದಿ ಪಡಿಸಲಾಗಿದ್ದರೂ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಇಲ್ಲ. ಭದ್ರತೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆಯಾಗಿಲ್ಲ.  ಬೈಂದೂರು ಸೋಮೇಶ್ವರ ಬೀಚ್‌ಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಇಲ್ಲಿ ₹25 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶೌಚಾಲಯ ದುಸ್ಥಿತಿಯಲ್ಲಿದೆ. ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸಮೀಪದ ಸೋಮೇಶ್ವರ ದೇವಸ್ಥಾನದಲ್ಲಿ ಪ್ರವಾಸಿಗರು ನೀರು ಕುಡಿಯಬೇಕು. ಪ್ರವಾಸೋದ್ಯಮ ಇಲಾಖೆಯ ಅಡಿಯಲ್ಲಿ ಬೈಂದೂರು ಸೋಮೇಶ್ವರ ಬೀಚ್ ಅಭಿವೃದ್ಧಿ ಕಾಮಗಾರಿಗೆ 250 ಮೀಟರ್‌ ವಾಕ್‌ ವೇ ವಿದ್ಯುದೀಕರಣ ವಾಹನ ನಿಲ್ದಾಣ ಅಭಿವೃದ್ಧಿಪಡಿಸುವ ಹಾಗೂ ದೇವಸ್ಥಾನದ ಸಮೀಪ ₹6.70 ಕೋಟಿ ವೆಚ್ಚದಲ್ಲಿ ವಾಕ್‌ವೇ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ಪೂರಕ ಮಾಹಿತಿ: ಅಬ್ದುಲ್ ಹಮೀದ್‌ ಪಡುಬಿದ್ರಿ, ವಿಶ್ವನಾಥ್ ಆಚಾರ್ಯ, ಶೇಷಗಿರಿ ಭಟ್‌

ಮಲ್ಪೆಯ ತೀರದಲ್ಲಿ ಕಸದ ರಾಶಿ ಬಿದ್ದಿರುವುದು
ಮಲ್ಪೆಯ ತೀರದಲ್ಲಿ ಕಸದ ರಾಶಿ ಬಿದ್ದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT