ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಲಸಿಕೆ ಹಾಕಿಸಿಕೊಂಡ ಜಿಲ್ಲಾಧಿಕಾರಿ

2ನೇ ಹಂತದಲ್ಲಿ 4,040 ಫ್ರಂಟ್‌ಲೈನ್‌ ಕಾರ್ಯಕರ್ತರಿಗೆ ಕೋವಿಡ್‌ ಲಸಿಕೆ
Last Updated 8 ಫೆಬ್ರುವರಿ 2021, 16:19 IST
ಅಕ್ಷರ ಗಾತ್ರ

ಉಡುಪಿ: ಕೊರೊನಾ ಸೋಂಕು ಹರಡುವಿಕೆ ತಡೆಗೆ ಶ್ರಮಿಸುತ್ತಿರುವ ಜಿಲ್ಲೆಯ ಫ್ರಂಟ್ ಲೈನ್‌ ಕಾರ್ಯಕರ್ತರಿಗೆ ಕೋವಿಡ್‌ ಲಸಿಕೆ ಹಾಕುವ ಕಾರ್ಯ ಸೋಮವಾರದಿಂದ ಆರಂಭವಾಗಿದ್ದು, ಸ್ವತಃ ಜಿಲ್ಲಾಧಿಕಾರಿ ಜಿ.ಜಗದೀಶ್‌ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್‌, ಹೆಚ್ಚುವರಿ ಎಸ್‌ಪಿ ಕುಮಾರ ಚಂದ್ರ, ನಗರಸಭೆ ಪೌರಾಯುಕ್ತ ಉದಯ್‌ ಕುಮಾರ್ ಶೆಟ್ಟಿ, ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಲಸಿಕೆ ಹಾಕಿಸಿಕೊಂಡರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್‌, ಲಸಿಕೆಯ ಬಗ್ಗೆ ಎದ್ದಿರುವ ಅನುಮಾನ ನಿವಾರಣೆಯಾಗಬೇಕು, ಎಲ್ಲ ಅಧಿಕಾರಿಗಳೆಲ್ಲರೂ ಉತ್ಸಾಹದಿಂದ ಲಸಿಕೆ ಹಾಕಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಮೊದಲು ಮೇಲಧಿಕಾರಿಗಳು ಲಸಿಕೆ ಹಾಕಿಸಿಕೊಂಡಿದ್ದೇವೆ. ಮೂರು ದಿನ ಜಿಲ್ಲೆಯಾದ್ಯಂತ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, 4,040 ಮಂದಿಗೆ ಲಸಿಕೆ ಹಾಕಲಾಗುತ್ತಿದ್ದು, ಶೇ 100 ಗುರಿ ಸಾಧಿಸುವ ವಿಶ್ವಾಸವಿದೆ. ಆಯಾ ತಾಲ್ಲೂಕುಗಳಲ್ಲಿ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು, ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಮೊದಲು ಲಸಿಕೆ ಪಡೆಯಲಿದ್ದಾರೆ ಎಂದರು.

ಉಡುಪಿಯ ಜಿಲ್ಲಾ ಆಸ್ಪತ್ರೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಂದಾಪುರ, ಕಾರ್ಕಳ ತಾಲ್ಲೂಕು ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲಾಗುವುದು. ಸೋಮವಾರ 593 ಮಂದಿಗೆ ಲಸಿಕೆ ಗುರಿ ಇದೆ. ಜಿಲ್ಲೆಯಲ್ಲಿ ಇದುವರೆಗೂ ಲಸಿಕೆ ಪಡೆದ ಯಾರಿಗೂ ಆರೋಗ್ಯ ಸಮಸ್ಯೆಗಳು ಎದುರಾಗಿಲ್ಲ. ಅಧಿಕಾರಿಗಳು ಅನುಮಾನ ಇಲ್ಲದೆ ಲಸಿಕೆ ತೆಗೆದುಕೊಳ್ಳಬೇಕು ಎಂದರು.

ಮೊದಲ ಹಂತದ ಲಸಿಕಾ ಅಭಿಯಾನದಲ್ಲಿ 25,350 ಮಂದಿಗೆ ಲಸಿಕೆ ಗುರಿ ಹೊಂದಲಾಗಿ, ಇದುವರೆಗೂ 15,233 ಮಂದಿ ಮಾತ್ರ ಲಸಿಕೆ ಪಡೆದಿದ್ದಾರೆ. ಆರೋಗ್ಯ ಕಾರ್ಯಕರ್ತರಲ್ಲಿ ಹೆಚ್ಚಿನವರು ಮಹಿಳೆಯರಿದ್ದು, ಬಾಣಂತಿಯರು, ಗರ್ಭಿಣಿಯರು ಇರುವುದರಿಂದ ಲಸಿಕೆ ಗುರಿ ನಿರೀಕ್ಷಿತ ಮಟ್ಟ ತಲುಪಿಲ್ಲ. ಜಿಲ್ಲಾಡಳಿತ ಶೇ 75 ಕೋವಿಡ್‌ ಲಸಿಕೆ ಗುರಿ ಹೊಂದಿತ್ತು. ಆದರೆ ಶೇ 60ರಷ್ಟು ಸಾಧನೆಯಾಗಿದೆ. ಮೊದಲ ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳದವರಿಗೆ ಫೆ.21ರವರೆಗೆ ಲಸಿಕೆ ತೆಗೆದುಕೊಳ್ಳಲು ಮತ್ತೊಂದು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT