ಸೋಮವಾರ, ಮೇ 17, 2021
31 °C
ಆಸ್ಪತ್ರೆಯೂ ಸ್ಚಚ್ಛ, ಕಸ ಮಾರಾಟದಿಂದ ಬರುತ್ತಿದೆ ಕಾಸು

ಉಡುಪಿ: ಜಿಲ್ಲಾ ಆಸ್ಪತ್ರೆಯಲ್ಲಿ ತ್ಯಾಜ್ಯವೇ ಸಂಪನ್ಮೂಲ

ವಿಶೇಷ ವರದಿ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ರಾಜ್ಯದ ಇತರೆಡೆ ಜಿಲ್ಲಾ ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನಿರ್ವಹಣೆ ಸ್ಥಳೀಯ ಆಡಳಿತಕ್ಕೆ ಸವಾಲಾಗಿ ಕಾಡಿದರೆ, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಮಾತ್ರ ತ್ಯಾಜ್ಯವೇ ಸಂಪನ್ಮೂಲ. ಇಲ್ಲಿ ನಿತ್ಯ ಉತ್ಪತ್ತಿಯಾಗುವ ಕಸ ಆಸ್ಪತ್ರೆಗೆ ‘ಕಾಸು’ ತಂದುಕೊಡುತ್ತಿದೆ.

ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿರುವ ಘನ ಮತ್ತು ದ್ರವ ತ್ಯಾಜ್ಯ ಸಂಪನ್ಮೂಲ ಕೇಂದ್ರವು (ಎಸ್‌ಎಲ್‌ಆರ್‌ಎಂ ಘಟಕ) ಪ್ರತಿದಿನ ಆಸ್ಪತ್ರೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ವೈಜ್ಞಾನಿಕವಾಗಿ ವಿಂಗಡಿಸುವ ಮೂಲಕ ಆದಾಯಗಳಿಸುತ್ತಿದೆ.

ಇಲ್ಲಿನ ಎಸ್‌ಎಲ್‌ಆರ್‌ಎಂ ಘಟಕದ ಸಿಬ್ಬಂದಿ ಆಸ್ಪತ್ರೆಯಲ್ಲಿ ಬಿಸಾಡುವ ಸಿರಿಂಜ್ ಕವರ್‌, ಮಾತ್ರೆಗಳ ಕವರ್, ಔಷಧ ಪ್ಯಾಂಕಿಂಗ್ ಬಾಕ್ಸ್‌, ರಟ್ಟಿನ ಬಾಕ್ಸ್‌, ಖಾಲಿ ಗ್ಲುಕೋಸ್ ಬಾಟೆಲ್‍ ಹಾಗೂ ನೀರಿನ ಬಾಟೆಲ್‍ಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಂಗಡಿಸಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಆಸ್ಪತ್ರೆಯೂ ಸ್ವಚ್ಛವಾಗಿದ್ದು, ಆದಾಯವೂ ಸಂಗ್ರಹವಾಗುತ್ತಿದೆ.

ಘನ ತ್ಯಾಜ್ಯ ಮಾರಾಟಕ್ಕೆ ಮಾರುಕಟ್ಟೆ ವ್ಯವಸ್ಥೆಯೂ ಇದ್ದು, ಖಾಸಗಿ ವ್ಯಕ್ತಿಗಳು ಖರೀದಿಸುತ್ತಿದ್ದಾರೆ. ಆರಂಭದಲ್ಲಿ ಪ್ರತಿ ತಿಂಗಳು 250 ಕೆ.ಜಿ ಘನ ತ್ಯಾಜ್ಯ ಸಿಗುತ್ತಿತ್ತು. ಈಗ 1 ಟನ್ ತ್ಯಾಜ್ಯ ಸಿಗುತ್ತಿದೆ. ಕಳೆದ ಬಾರಿ 5 ಟನ್ ತ್ಯಾಜ್ಯ ಮಾರಾಟದಿಂದ ₹ 33,000 ಆದಾಯ ಸಿಕ್ಕಿತ್ತು. ಈ ಬಾರಿ 7 ಟನ್ ತ್ಯಾಜ್ಯ ಸಂಗ್ರಹವಾಗಿದ್ದು, ಬೇಡಿಕೆ ಹಾಗೂ ದರ ಹೆಚ್ಚಾಗಿದ್ದು ₹60,000 ಆದಾಯ ನಿರೀಕ್ಷೆ ಇದೆ ಎನ್ನುತ್ತಾರೆ ಎಸ್‌ಎಲ್‌ಆರ್‌ಎಂ ಕೇಂದ್ರದ ಮೇಲ್ವಿಚಾರಕಿ ಜ್ಯೋತಿ.

ತ್ಯಾಜ್ಯ ಮಾರಾಟದಿಂದ ಬಂದ ಹಣವನ್ನು ಆಸ್ಪತ್ರೆಯ ಆರೋಗ್ಯ ರಕ್ಷಾ ಕವಚದ ನಿಧಿಗೆ ಕೊಡಲಾಗುತ್ತಿದೆ. ಇದರಿಂದ ಆಸ್ಪತ್ರೆಗೆ ಅಗತ್ಯ ಯಂತ್ರೋಪಕರಣಗಳನ್ನು ಖರೀದಿಸಬಹುದು. ಈಗಾಗಲೇ ತ್ಯಾಜ್ಯ ಹರಾಜಿಗೆ ಟೆಂಡರ್ ಕರೆಯಲಾಗಿದೆ ಎನ್ನುತ್ತಾರೆ ಅವರು. 

ಸಾವಯವ ಗೊಬ್ಬರ ತಯಾರಿ: ಆಸ್ಪತ್ರೆಯ ಗಾರ್ಡನ್‌ನಲ್ಲಿ ಬೀಳುವ ಎಲೆ ಹಾಗೂ ಕಸದಿಂದ ಸಾವಯವ ಗೊಬ್ಬರ ತಯಾರಿಸಲಾಗುತ್ತಿದೆ. ಪ್ರತಿ ಬುಟ್ಟಿಗೆ ₹ 20ರಂತೆ ತೋಟಗಾರಿಕಾ ಇಲಾಖೆ ಗೊಬ್ಬರ ಖರೀದಿಸಿದೆ. ತ್ಯಾಜ್ಯ ಎಂದರೆ ಮೂಗು ಮುಚ್ಚಿಕೊಳ್ಳುವವರು ಘಟಕಕ್ಕೆ ಒಮ್ಮೆ ಭೇಟಿ ನೀಡಿ. ಇಲ್ಲಿ ಕಸದ ರಾಶಿ, ದುರ್ವಾಸನೆ ಕಾಣುವುದಿಲ್ಲ. ಘಟಕದ ಪಕ್ಕದಲ್ಲಿಯೇ ಸರ್ಕಾರಿ ಕಚೇರಿಗಳಿದ್ದು ಯಾರಿಗೂ ತೊಂದರೆಯಾಗಿಲ್ಲ ಎನ್ನುತ್ತಾರೆ ಜ್ಯೋತಿ.

ಮುಂದೆ, ಬಯೋ ಗ್ಯಾಸ್ ಘಟಕ ಸ್ಥಾಪಿಸಿ ರೋಗಿಗಳು ಬಿಸಾಡುವ ಆಹಾರ, ಹಣ್ಣಿನ ಸಿಪ್ಪೆ ಹಾಗೂ ಹಸಿ ತ್ಯಾಜ್ಯ ಸಂಗ್ರಹಿಸಿ ಗ್ಯಾಸ್‌ ತಯಾರಿಸುವ ಚಿಂತನೆ ಇದೆ. ಅನಿಲವನ್ನು ಆಸ್ಪತ್ರೆಯ ಬಳಕೆಗೆ ಬಳಸುವ ಉದ್ದೇಶವಿದೆ ಎಂದರು. ಘಟಕದಲ್ಲಿ ಜ್ಯೋತಿ ಅವರಿಗೆ ಸಹಾಯಕರಾಗಿ ರೇವತಿ ಕಾರ್ಯ ನಿರ್ವಹಿಸುತ್ತಿದ್ದಾರೆ.

‘ಬ್ಯಾಂಡೇಜ್‌, ಸಿರಿಂಜ್ ಸಂಗ್ರಹವಲ್ಲ’
ಆಸ್ಪತ್ರೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಎಂದರೆ ರೋಗಿಗಳ ರಕ್ತಸಿಕ್ತ ಬ್ಯಾಂಡೇಜ್, ಸಿರೆಂಜ್‍ಗಳಲ್ಲ. ವೈದ್ಯಕೀಯ ತ್ಯಾಜ್ಯಗಳನ್ನು ವೈಜ್ಞಾನಿಕ ವಿಧಾನದಲ್ಲಿ ವಿಲೇವಾರಿ ಮಾಡಲು ಬೇರೆಡೆಗೆ ಸಾಗಿಸಲಾಗುತ್ತಿದೆ ಎನ್ನುತ್ತಾರೆ ಎಸ್‌ಎಲ್‌ಆರ್‌ಎಂ ಘಟಕದ ಉಸ್ತುವಾರಿ ಜ್ಯೋತಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು