ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ವಾರಾಹಿ ನೀರಾವರಿ ಯೋಜನೆ ಪೂರ್ಣಗೊಂಡರೆ ಕೃಷಿಕರ ಬದುಕು ಹಸನು

26 ವರ್ಷಗಳಲ್ಲಿ ಕಾಮಗಾರಿಗೆ ಖರ್ಚಾಗಿದ್ದು ಕೇವಲ ₹ 34.16 ಕೋಟಿ
Last Updated 9 ಜನವರಿ 2022, 1:59 IST
ಅಕ್ಷರ ಗಾತ್ರ

ಕುಂದಾಪುರ/ಉಡುಪಿ: ವಾರಾಹಿ ನೀರಾವರಿ ಯೋಜನೆಗೆ 1979ರಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕರೂ ನಂತರದ 26 ವರ್ಷಗಳ ಕಾಲ ವಾಸ್ತವಿಕವಾಗಿ ಕಾಮಗಾರಿಯೇ ಆರಂಭವಾಗಲಿಲ್ಲ. ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ತೀರುವಳಿ ಪಡೆಯುವ ತನಕ ಅಂದರೆ2005ರವರೆಗೂ ಕಾಮಗಾರಿ ನನೆಗುದಿಗೆ ಬಿದ್ದಿತ್ತು.

ಕಾಮಗಾರಿಗೆ ವೇಗ ನೀಡಲು, ನಿಗಧಿತ ಅವಧಿಯಲ್ಲಿ ಕ್ಷಿಪ್ರವಾಗಿ ಮುಗಿಸುವ ಕಾರಣದಿಂದ 2003ರ ಡಿ.1ರಂದು ರಾಜ್ಯ ಸರ್ಕಾರ ಕಾಮಗಾರಿ ಹೊಣೆಯನ್ನು ಕರ್ನಾಟಕ ನೀರಾವರಿ ನಿಗಮಕ್ಕೆ ಹಸ್ತಾಂತರಿಸಿತು. ಅಲ್ಲಿಯವರೆಗೂ ವರಾಹಿ ಕಾಮಗಾರಿಗೆ ಖರ್ಚಾಗಿದ್ದು ಕೇವಲ ₹ 34.16 ಕೋಟಿ ಮಾತ್ರ. ಇದರಲ್ಲಿ ಯೋಜನೆಯ ತನಿಖೆ, ಸಿಬ್ಬಂದಿ ವೇತನ, ಸಾರಿಗೆ ಸೌಲಭ್ಯ, ರಸ್ತೆ ಹಾಗೂ ವಸತಿ ಉದ್ದೇಶಕ್ಕೆ ಬಹುಪಾಲು ವ್ಯಯವಾಗಿತ್ತು.

ಕೇಂದ್ರ ಮತ್ತು ಅರಣ್ಯ ಪರಿಸರ ಇಲಾಖೆಯಿಂದ ಅನುಮೋದನೆ ಸಿಗವಲ್ಲಿ ಆದ ವಿಳಂಬ ಹಾಗೂ ನಿಧಾನಗತಿಯ ಭೂಸ್ವಾಧೀನ ಪ್ರಕ್ರಿಯೆ, ಅನುದಾನ ಕೊರತೆ, ಯೋಜನಾ ಪ್ರದೇಶದ ಭೌಗೋಳಿಕ ಲಕ್ಷಣ ಗುರುತಿಸುವಿಕೆಯಲ್ಲಿ ತಡ, ರಕ್ಷಿತಾರಣ್ಯ ಹಾಗೂ ಡೀಮ್ಡ್ ಅರಣ್ಯ ಪ್ರದೇಶಗಳಲ್ಲಿನ ಮರಗಳ ಕಟಾವಿಗೆ ಎದುರಾದ ಸಮಸ್ಯೆಯಿಂದ ವಾರಾಹಿ ಯೋಜನೆಯ ಕಾಮಗಾರಿ ವಿಳಂಬವಾಯಿತು.

ಯಾವ ಕಾಮಗಾರಿ ಮುಕ್ತಾಯ:ಹಾಲಾಡಿ ಗ್ರಾಮದ ಭರತ್ಕಲ್ ಪ್ರದೇಶದಲ್ಲಿ ವಾರಾಹಿ ಬಲದಂಡೆ ಸಾಮಾನ್ಯ ನಾಲೆ ಮತ್ತು ವಾರಾಹಿ ಎಡದಂಡೆ ನಾಲಾ ಕಾಮಗಾರಿಯನ್ನು ಸೇರಿಸುವ 558 ಮೀಟರ್ ಉದ್ದದ ವಾರಾಹಿ ಮೇಲ್ಗಾಲುವೆ ಕಾಮಗಾರಿಯನ್ನು 2009-10ನೇ ಸಾಲಿನಲ್ಲಿ ಪೂರ್ಣಗೊಳಿಸಲಾಗಿದೆ.

ಸೌಪರ್ಣಿಕಾ ಏತ ನೀರಾವರಿ ಯೋಜನೆ
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಲೂರು, ನಾಡಾ, ಗುಡ್ಡೆಯಂಗಡಿ, ಸೇನಾಪುರ, ಹರ್ಕೂರು ಗ್ರಾಮಗಳ ಹಾಗೂ ಸುತ್ತಮುತ್ತಲಿನ ಅಚ್ಚುಕಟ್ಟು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸಬೇಕು ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಬೇಕು ಎಂಬ ದೃಷ್ಟಿಯಿಂದ ಸೌಪರ್ಣಿಕಾ ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ಅದರಂತೆ, ಆಲೂರು ಗ್ರಾಮದ ಬಳಿಯಿರುವ ಎದ್ರುಬೈಲ್ ಬಳಿ ಸೌಪರ್ಣಿಕ ನದಿಗೆ ಅಡ್ಡಲಾಗಿ ಸೇತುವೆ ಸಹಿತ ಬ್ಯಾರೇಜ್ ನಿರ್ಮಿಸಿ 4 ಕಿ.ಮೀ ನದಿ ಪಾತ್ರದ ಉದ್ದಕ್ಕೆ ಹಾಗೂ ರಸ್ತೆ ಮಾರ್ಗದಲ್ಲಿ 10 ಕಿ.ಮೀ ದೂರದಲ್ಲಿ ಡೈರ್ವಶನ್ ವಿಯರ್, ಜಾಕ್‌ವೆಲ್ ಕಂ ಪಂಪ್‌ಹೌಸ್ ಹಾಗೂ 33 ಕೆ.ವಿ ಸಬ್ ಸ್ಟೇಷನ್ ನಿರ್ಮಿಸಲಾಗಿದೆ.

1.02 ಟಿಎಂಸಿ ಅಡಿ ನೀರನ್ನು 44 ಮೀ ಎತ್ತರಕ್ಕೆ ಎತ್ತಿ ನಾಲೆ ಹಾಗೂ ಚೆಕ್ ಡ್ಯಾಂ ಮೂಲಕ ನೀರನ್ನು ಹರಿಸುವ ಯೋಜನೆಗೆ 2010ರ ಏ.5ರಂದು ಸರ್ಕಾರದಿಂದ ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿದ್ದು, ₹ 53.22 ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ನಂತರ ₹ 64.65 ಕೋಟಿ ವೆಚ್ಚದಲ್ಲಿ ಟರ್ನ್-ಕೀ ಆಧಾರದ ಕಾಮಗಾರಿ 2012ರ ಮೇ 21ಕ್ಕೆ ಪೂರ್ಣಗೊಂಡು ಸುಮಾರು 1,730 ಹೇಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ.

ಸೌಕೂರು ಏತ ನೀರಾವರಿ ಯೋಜನೆ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಗುಡ್ಡೆಕೊಪ್ಪದಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ 88 ಕಿ.ಮೀ ಉದ್ದಕ್ಕೆ ಹರಿದು, ಗಂಗೊಳ್ಳಿ ಸಮೀಪ ಅರಬ್ಬಿ ಸಮುದ್ರವನ್ನು ಸೇರುವ ವಾರಾಹಿ ನದಿ ಪಾತ್ರದಲ್ಲಿ ದೊರಕುವ ನೀರನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಸೌಕೂರು ಏತ ನೀರಾವರಿ ಯೋಜನೆಗೂ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ.

ಕುಂದಾಪುರ ಸಮೀಪದ ಬಳ್ಕೂರು ಎಂಬಲ್ಲಿ ವಾರಾಹಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಉಪ್ಪು ನೀರು ತಡೆ ಅಣೆಕಟ್ಟಿನ ಮೇಲ್ಭಾಗದಲ್ಲಿ ಸೌಕೂರು ಗ್ರಾಮದ ಹತ್ತಿರ ಜಾಕ್‌ವೆಲ್ ನಿರ್ಮಿಸಿ 0.589 ಟಿಎಂಸಿ ಅಡಿ ನೀರನ್ನು ಏರು ಕೊಳವೆ ಮುಖಾಂತರ ಹರಿಸಿ 1,350 ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ಸೌಕೂರು ಏತ ನೀರಾವರಿ ಯೋಜನೆಗೆ 2019 ರಲ್ಲಿ ತಾಂತ್ರಿಕ ಅನುಮೋದನೆ ಸಿಕ್ಕಿದ್ದು, ಟರ್ನ್ ಕೀ ಆಧಾರದ ಮೇಲೆ ಗುತ್ತಿಗೆ ನೀಡಲಾಗಿದೆ. ಈ ಕಾಮಗಾರಿಯ ವೆಚ್ಚ ₹ 73.71ಕೋಟಿ.

ಮಳೆಗಾಲ ಸೇರಿ 18 ತಿಂಗಳ ಗುತ್ತಿಗೆ ಅವಧಿಯ ಕಾಮಗಾರಿಗೆ 5 ವರ್ಷಗಳ ನಿರ್ವಹಣಾ ಅವಧಿ ಇದೆ. ಆಧುನಿಕ ಮಾದರಿಯ ತಾಂತ್ರಿಕ ಕೌಶಲಗಳನ್ನು ಬಳಸಿಕೊಂಡು ಕಾಮಗಾರಿ ನಡೆಯುತ್ತಿದ್ದು, ಪ್ರಸ್ತುತ ಡೆಲವರಿ ಚೇಂಬರ್, ಜಾಕ್ ವೆಲ್ ಕಂ ಪಂಪ್ ಹೌಸ್ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಚೆಕ್ ಡ್ಯಾಂ ನಿರ್ಮಾಣ, ರೈಸಿಂಗ್ ಮೇನ್, ಗ್ರ್ಯಾವಿಟಿ ಮೇನ್ ಹಾಗೂ ಸಬ್ ಸ್ಟೇಷನ್ ಕಾಮಗಾರಿ ಪ್ರಗತಿಯಲ್ಲಿದೆ ಎನ್ನುತ್ತಾರೆ ಅಧಿಕಾರಿಗಳು.

ಒಟ್ಟಾರೆ ವಾರಾಹಿ ಕಾಮಗಾರಿ ಪೂರ್ಣಗೊಂಡು ನೀರು ಹರಿದರೆ ರೈತರ ಬದುಕು ಹಸನಾಗಲಿದೆ. ಕಾಮಗಾರಿ ಮತ್ತಷ್ಟು ವಿಳಂಬವಾದರೆ, ಕರಾವಳಿಯ ಕೃಷಿ ಕ್ಷೇತ್ರ ಮತ್ತಷ್ಟು ಸೊರಗಲಿದೆ.

‘ಪರಿಷ್ಕೃತ ಅಂದಾಜು ಪಟ್ಟಿ ಸಲ್ಲಿಕೆ’
ಕರ್ನಾಟಕ ನೀರಾವರಿ ನಿಗಮಕ್ಕೆ ಕಾಮಗಾರಿ ಹಸ್ತಾಂತರಗೊಂಡ ನಂತರ ಅಂದಿನ ದರಪಟ್ಟಿಗೆ ಅನುಗುಣವಾಗಿ ಯೋಜನೆಯ ಪರಿಷ್ಕೃತ ಅಂದಾಜು ಪಟ್ಟಿಯನ್ನು ₹ 569.53 ಕೋಟಿ ಮೊತ್ತಕ್ಕೆ ಹೆಚ್ಚಿಸಲಾಯಿತು. ಈ ಪ್ರಸ್ತಾವಕ್ಕೆ 2006ರಲ್ಲಿ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆಯನ್ನೂ ಪಡೆಯಲಾಯಿತು. ಪ್ರಸ್ತುತ 2014-15ನೇ ಸಾಲಿನ ದರಪಟ್ಟಿಯಂತೆ ₹ 1,789.50 ಕೋಟಿಗೆ ಮರು-ಪರಿಷ್ಕೃತ ಅಂದಾಜುಪಟ್ಟಿಯನ್ನು ತಯಾರಿಸಿ, ಸಕ್ಷಮ ಪ್ರಾಧಿಕಾರಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗಿದ್ದು, ಸರ್ಕಾರದ ಮಟ್ಟದಲ್ಲಿ ಪರಿಶೀಲನೆ ಹಂತದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT