ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವಕರ್ಮ‌ ಜಯಂತಿ ಆಚರಣೆ: ಪಂಚ ಸಾಧಕರಿಗೆ ಸನ್ಮಾನ

Published : 18 ಸೆಪ್ಟೆಂಬರ್ 2024, 7:40 IST
Last Updated : 18 ಸೆಪ್ಟೆಂಬರ್ 2024, 7:40 IST
ಫಾಲೋ ಮಾಡಿ
Comments

ಉಡುಪಿ: ಸತ್ಯ ನಿಷ್ಠೆಯನ್ನು ಪಾಲಿಸುವ ವಿಶ್ವಕರ್ಮ ಜನಾಂಗವು ಪ್ರತಿಭಾವಂತರಿಂದ ಕೂಡಿದೆ. ಈ ಜನಾಂಗಕ್ಕೆ‌ ಸರಿಸಾಟಿಯಾದ ಮತ್ತೊಂದು ಜನಾಂಗ ಇಲ್ಲ. ವಿಶ್ವಕರ್ಮರನ್ನು ಸಮಾಜ ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ ಎಂದು ಕಾಪು ಶಾಸಕ ಗುರ್ಮೆ‌ ಸುರೇಶ್‌ ಶೆಟ್ಟಿ ಅಭಿಪ್ರಾಯಪಟ್ಟರು.

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿಶ್ವಕರ್ಮ ಸಮಾಜ ಸೇವಾ ಸಂಘಗಳ ಒಕ್ಕೂಟ ಹಾಗೂ ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸಮಾಜ ಸೇವಾಸಂಘ ಆಶ್ರಯದಲ್ಲಿ ನಗರದ ಕುಂಜಿಬೆಟ್ಟು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವಕರ್ಮ‌ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮರ, ಕಬ್ಬಿಣ, ಚಿನ್ನ-ಬೆಳ್ಳಿ, ಕಂಚು-ಹಿತ್ತಾಳೆ, ಶಿಲಾ‌ಶಿಲ್ಪ ಮೊದಲಾದ ಪಂಚ ಕಸುಬುನಿರತರ ಮೂಲ ಪುರುಷ ವಿಶ್ವಕರ್ಮ. ಕುಶಲ ಕರ್ಮಿಗಳಿಗೆ ಸಾಲದ ನೆರವು ನೀಡುವ ಪ್ರಧಾನಿ ಮಂತ್ರಿ ವಿಶ್ವಕರ್ಮ‌ ಯೋಜನೆಯನ್ನು ಕೇಂದ್ರ‌ ಸರ್ಕಾರ‌ ಜಾರಿಗೊಳಿಸಿದೆ.‌ ತಮ್ಮ ಕೌಶಲ ಹಾಗೂ ಜೀವನೋಪಾಯ ವೃದ್ಧಿಗಾಗಿ ವಿಶ್ವಕರ್ಮರು ಇದರ ಸದುಪಯೋಗಪಡೆಯಬೇಕು  ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ವಿಶ್ವಕರ್ಮರ ಸಾಧನೆ ಹಾಗೂ ಅವರು ಸಮಾಜಕ್ಕೆ ನೀಡಿದ ಕೊಡುಗೆ ಮಹತ್ವದ್ದು.‌ ಈ ಸಮಾಜದವರು ನಿರ್ಮಿಸಿದ ಶಿಲ್ಪಕಲೆಗಳು ಈಗಲೂ ಕಣ್ಮನ ಸೆಳೆಯುತ್ತಿದೆ. ಶಿಲ್ಪ ಕಲೆ ಮಾತ್ರ ಅಲ್ಲ, ಬಂಗಾರದ ಕುಸುರಿ, ಕಬ್ಬಿಣದ ಕೆಲಸಕ್ಕೂ ಇವರು ಎತ್ತಿದ ಕೈ. ಕೆಲಸದಲ್ಲಿ ಇವರಿಗೆ ಇರುವ ತನ್ಮಯತೆ ಸೂಕ್ಷ್ಮತೆ ಬೇರೆ ಯಾರಿಗೂ ಸಿದ್ಧಿಸದು. ಮೂರ್ತಿ ಕೆತ್ತುವಾಗ ತಲ್ಲೀನತೆ ಬಹಳ ಮುಖ್ಯ.‌ ಸ್ವಲ್ಪ‌ ಎಚ್ಚರ‌ ತಪ್ಪಿದರೂ ಕಲಾಕೃತಿ ಓರೆ ಕೋರೆ ಆದೀತು. ಈ ಕಲಾವಂತಿಕೆ ವಿಶ್ವಕರ್ಮರಿಗೆ ದೇವರ ಕೊಡುಗೆ ಎಂದರು.

ವಿಶ್ವಕರ್ಮ‌ ಜಯಂತಿ ನೆಲೆ ಹಿನ್ನೆಲೆ ಕುರಿತು ಮಾತನಾಡಿದ ಮಾಹೆಯ ಗ್ರಂಥಪಾಲನಾಧಿಕಾರಿ ಪ್ರತಿಮಾ ಜೆ.ಆಚಾರ್ಯ, ವಿಶ್ವಕರ್ಮರಿಲ್ಲದೇ ಸಮಾಜವಿಲ್ಲ. ಜಗತ್ತಿನಲ್ಲಿ ಏನೇನು ಆಗಿದೆಯೊ, ಏನೆಲ್ಲ ಆಗಲಿಕ್ಕೆದೆಯೋ ಎಲ್ಲದರ ಕರ್ತೃ ವಿಶ್ವಕರ್ಮ. ವಿಶ್ವಕರ್ಮ‌ ಪರಂಪರೆ ಒಂದು ಜಾತಿಗೆ ಸೀಮಿತವಲ್ಲ. ಪಂಚ ವೇದ, ಪಂಚ ಶಿಲ್ಪ, ಪಂಚ ಶಕ್ತಿ, ಪಂಚ ವಿಜ್ಞಾನ ಪರಂಪರೆಯ ಅಗತ್ಯ ಸಮಾಜಕ್ಕಿದೆ ಎಂದರು.

ಕೌಶಲವನ್ನು, ಕಾರ್ಮಿಕರ‌ ಕೊಡುಗೆಯನ್ನು ಗೌರವಿಸಲು ವಿಶ್ವಕರ್ಮ‌ ಜಯಂತಿಯನ್ನು ಆಚರಿಸಲಾಗುತ್ತದೆ ಎಂದರು.

ಕಬ್ಬಿಣದ ಕೆಲಸದ ಹೆಬ್ರಿ ನಾರಾಯಣ ಆಚಾರ್ಯ, ಕಾಷ್ಠ ಶಿಲ್ಪಿ ಬಾಬು ಆಚಾರ್ಯ ಮಟ್ಟಾರು, ಶಿಲಾ ಶಿಲ್ಪಿ ಅತ್ತೂರು ಗಣಪತಿ ಆಚಾರ್ಯ, ಚಿನ್ನ- ಬೆಳ್ಳಿ ಕೆಲಸದ‌ ಬೈಂದೂರು ಆರೂರಿನ ರಾಘವ ಆಚಾರ್ಯ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ದಾಸ ಆಚಾರ್ಯ, ಹೇರೂರು ಅವರನ್ನು ಸನ್ಮಾನಿಸಲಾಯಿತು.

ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ವೆಂಕಟೇಶ‌ ಅಚಾರ್ಯ, ದಕ್ಷಿಣ ಕನ್ನಡ - ಉಡುಪಿ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು.

ರತ್ನಾಕರ ಆಚಾರ್ಯ ವಂದಿಸಿದರು. ಬಿ.ಎ.ಆಚಾರ್ಯ ಕಾರ್ಯಕ್ರಮ‌ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT