ಶುಕ್ರವಾರ, ಮೇ 27, 2022
22 °C
ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಗುರುರಾಜ ಕರ್ಜಗಿ

ಜೇನು ಹುಳದಂತೆ ಬದುಕಿ; ನೊಣವಾಗಬೇಡಿ–ಗುರುರಾಜ ಕರ್ಜಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಬದುಕಿದರೆ ಜೇನು ಹುಳದಂತೆ ಬದುಕಬೇಕು, ತನಗೆ ಬೇಕಾದ ಮಕರಂದ ಮಾತ್ರ ಹೀರಿ, ಹೂವಿನ ಸೌಂದರ್ಯ, ಮಾಧುರ್ಯಕ್ಕೆ ಇನಿತೂ ಹಾನಿ ಮಾಡುವುದಿಲ್ಲ. ಮನುಷ್ಯ ಕೂಡ ಸಮಾಜದಲ್ಲಿ ಒಳ್ಳೆಯದನ್ನು ಮಾತ್ರ ಪಡೆದುಕೊಂಡು ಉಳಿದೆಲ್ಲವನ್ನೂ ಬಿಡಬೇಕು ಎಂದು ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಹೇಳಿದರು.

ಮಂಗಳವಾರ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಅದಮಾರು ಮಠದ ಪರ್ಯಾಯ ಸಮಾಪನ ಕಾರ್ಯಕ್ರಮ ‘ವಿಶ್ವಾರ್ಪಣಂ’ನಲ್ಲಿ ಮಾತನಾಡಿದ ಅವರು, ಜೇನುಹುಳಕ್ಕೆ ತದ್ವಿರುದ್ಧವಾಗಿ ನೊಣವು ಹೂವಿನ ರಾಶಿ ಇದ್ದರೂ ಸತ್ತ ಪ್ರಾಣಿಯ ಮೇಲೆ ಕೂರುತ್ತದೆ. ಮನುಷ್ಯ ಜೇನಾಗಿ ಬದುಕಬೇಕೇ ಹೊರತು, ನೊಣವಾಗಿ ಬದುಕಬಾರದು ಎಂದು ದುಷ್ಠಾಂತಗಳ ಮೂಲಕ ವಿವರಿಸಿದರು.

ಒಳ್ಳೆಯ ಗ್ರಂಥಗಳು, ಚಿಂತನೆಗಳು, ಸ್ನೇಹಿತರು ಜಗತ್ತಿನ ಯಾವುದೇ ಮೂಲೆಯಲ್ಲಿ ಸಿಕ್ಕರೂ ಆರಿಸಿಕೊಳ್ಳಿ. ಮನೆ ಸ್ವಚ್ಛವಾಗಿಟ್ಟುಕೊಳ್ಳುವಂತೆ ಜೀವನವನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಹತ್ತಿ ಎಳೆಗಳು ಹುರಿಗಟ್ಟಿ ಹಗ್ಗವಾದಂತೆ ಮನುಷ್ಯ ಕೂಡ ಕೂಡಿ ಬಾಳುವುದನ್ನು ಕಲಿಯಬೇಕು ಎಂದು ಕಿವಿಮಾತು ಹೇಳಿದರು.

ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಕ್ಕರೆ ಸುಸಂಸ್ಕೃತರಾಗುತ್ತಾರೆ, ಇಲ್ಲವಾದರೆ ವಿಕೃತರಾಗುತ್ತಾರೆ. ಮನೆಯಲ್ಲಿ ಸಂಸ್ಕಾರ ಇದ್ದರೆ ಮಕ್ಕಳಿಗೆ ತಾನಾಗಿಯೇ ಬಳುವಳಿಯಾಗಿ ಬರುತ್ತದೆ. ನಿಜವಾದ ಸಂಸ್ಕಾರ ಕೊಡಬೇಕಾದವರು ಪೋಷಕರು ಎಂದರು.

ಹೆಚ್ಚಾಗಿರುವುದನ್ನು ಕೊಟ್ಟರೆ ದಾನ ಎನಿಸಿಕೊಳ್ಳುವುದಿಲ್ಲ; ಬದಲಾಗಿ ನಮಗಾಗಿ ಇಟ್ಟಿಕೊಂಡಿದ್ದನ್ನು ಮತ್ತೊಬ್ಬರಿಗೆ ಹಂಚುವುದೇ ನಿಜವಾದ ದಾನ. ಕಿರಿಯರಿಗೆ ಹಿರಿಯರು ಸದಾ ಪ್ರೋತ್ಸಾಹದಾಯಕವಾಗಿರಬೇಕು, ಉತ್ತೇಜಕವಾಗಿರಬೇಕು. ಮಕ್ಕಳ ಪ್ರಯತ್ನಗಳನ್ನು ವಿಫಲಗೊಳಿಸಬಾರದು ಎಂದರು.

ಪರ್ಯಾಯ ಪೀಠಾಧೀಶರಾದ ಈಶಪ್ರಿಯ ತೀರ್ಥ ಸ್ವಾಮೀಜಿ, ವಿದ್ವಾಂಸರಾದ ಗುರುರಾಜ ಜೋಶಿ, ಇತಿಹಾಸ ತಜ್ಞರಾದ ಡಾ.ಜಗದೀಶ್ ಶೆಟ್ಟಿ, ಮಣಿಪಾಲದ ಡಾ.ಟಿ.ಎಂ.ಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಶಶಿಕಿರಣ ಉಮಾಕಾಂತ್, ದಂತವೈದ್ಯ ಡಾ.ವಿಜಯೇಂದ್ರ ವಸಂತ್ ಅವರನ್ನು ಸನ್ಮಾನಿಸಿದರು.

ಬಳಿಕ ಮಾತನಾಡಿ, ‘ಜ್ಞಾನ ಪಡೆಯುವುದು ಮನುಷ್ಯನ ಆದ್ಯ ಕರ್ತವ್ಯವಾಗಬೇಕು, ಸಜ್ಜನರ ಸಂಗದಿಂದಲೇ ಜ್ಞಾನ ಸಂಪಾದನೆ ಸಾಧ್ಯವಾಗುತ್ತದೆ. ನಮ್ಮ ಸುತ್ತಲೂ ಉದಾಸೀನತೆ ಇರುವವರು, ಹೊಗಳುವವರು, ತೆಗಳುವವರು ಇರುತ್ತಾರೆ. ಆದರೆ, ಮನುಷ್ಯ ಕರ್ತವ್ಯಕ್ಕೆ ಮಾತ್ರ ಮಹತ್ವ ಕೊಡಬೇಕು. ರಾಷ್ಟ್ರ ಕಟ್ಟುವಲ್ಲಿ ಟೊಂಕಕಟ್ಟಿ ನಿಲ್ಲಬೇಕು ಎಂದು ಅನುಗ್ರಹಿಸಿದರು.

ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಗುರುಪರಂಪರೆಯ ಸ್ಮರಣೆ ನಿರಂತರವಾಗಿರಬೇಕು. ಸಂವಹನ, ಮಾಧ್ಯಮ, ಸಾರಿಗೆ ಕ್ಷೇತ್ರದಲ್ಲಿ ಅಭಿವೃದ್ಧಿಯಾದರೂ ಇಂದು ನೆಮ್ಮದಿ ಸಿಗುತ್ತಿಲ್ಲ. ಧಾರ್ಮಿಕ ಮೌಲ್ಯಗಳಿಂದ ವಂಚಿತರಾಗುತ್ತಿದ್ದೇವೆ. ಅತಿಯಾದ ನಿರೀಕ್ಷೆಗಳು ದುಃಖಕ್ಕೆ ಕಾರಣವಾಗುತ್ತಿವೆ ಎಂದರು.

ಮಠದ ವ್ಯವಸ್ಥಾಪಕರಾದ ಗೋವಿಂದರಾಜ್ ಸ್ವಾಗತಿಸಿದರು. ಮಠದ ಆಸ್ಥಾನ ವಿದ್ವಾಂಸರಾದ ಕೃಷ್ಣರಾಜ ಭಟ್ ಕುತ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.