ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್‌ನಲ್ಲಿ ಕೈತೊಳೆಯುವ ನಲ್ಲಿಗಳು ಬಂದ್

ಹೋಟೆಲ್ ಉದ್ಯಮಕ್ಕೆ ಹೊಡೆತ; ಅಗತ್ಯ ಪ್ರಮಾಣದ ಟ್ಯಾಂಕರ್ ನೀರು ಸಿಗುತ್ತಿಲ್ಲ
Last Updated 27 ಮೇ 2019, 19:45 IST
ಅಕ್ಷರ ಗಾತ್ರ

ಉಡುಪಿ: ಉಡುಪಿಯ ಹೋಟೆಲ್‌ ಉದ್ಯಮಕ್ಕೆ ನೀರಿನ ಬಿಸಿ ಜೋರಾಗಿ ತಟ್ಟಿದೆ. ಹಣಕೊಟ್ಟರೂ ಬೇಡಿಕೆಯಷ್ಟು ಟ್ಯಾಂಕರ್ ನೀರು ಸಿಗದೆ ಹೋಟೆಲ್‌ಗಳು ಮುಚ್ಚುವ ಹಂತ ತಲುಪಿವೆ. ಈಗಾಗಲೇ ಸಣ್ಣ–ಪುಟ್ಟ ಹೋಟೆಲ್‌ಗಳು ಬಾಗಿಲು ಎಳೆದುಕೊಂಡಿವೆ. ವಾರದೊಳಗೆ ಮಳೆ ಬಾರದಿದ್ದರೆ ಪರಿಸ್ಥಿತಿ ಬಿಗಡಾಯಿಸಲಿದೆ ಎನ್ನುತ್ತಿದ್ದಾರೆ ಹೋಟೆಲ್‌ ಮಾಲೀಕರು.

ಕೈ ತೊಳೆಯಲು ಬಕೆಟ್‌ ನೀರು:

ನಗರದ ಬಹುತೇಕ ಹೋಟೆಲ್‌ಗಳಲ್ಲಿ ಕೈತೊಳೆಯುವ ನಲ್ಲಿಗಳನ್ನು ಬಂದ್ ಮಾಡಲಾಗಿದೆ. ಬದಲಾಗಿ, ಒಂದು ಬಕೆಟ್‌ ಹಾಗೂ ಪ್ಲಾಸ್ಟಿಕ್ ಲೋಟವನ್ನು ಇಡಲಾಗಿದೆ. ಊಟ ಮಾಡಿದವರು ಕೈತೊಳೆಯಲಷ್ಟೇ ನೀರು ಬಳಸಬೇಕು. ಜತೆಗೆ, ನೀರನ್ನು ಮಿತವಾಗಿ ಬಳಸಿ ಎಂಬ ಬೋರ್ಡ್‌ ನೇತು ಹಾಕಲಾಗಿದೆ.

ನೀರಿನ ಸಮಸ್ಯೆ ಕುರಿತು ಪ್ರತಿಕ್ರಿಯೆ ನೀಡಿದ ಹೋಟೆಲ್‌ ಸಿಬ್ಬಂದಿ ರಾಘವೇಂದ್ರ ಶೆಟ್ಟಿ, ನಿತ್ಯದ ಅಡುಗೆಗೆ ನೀರು ಹೊಂದಿಸುವುದು ಕಷ್ಟವಾಗಿದೆ. ಹಾಗಾಗಿ, ಕೈತೊಳೆಯುವ ನಲ್ಲಿಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಅರ್ಧದಷ್ಟು ನೀರು ಉಳಿತಾಯವಾಗಲಿದೆ ಎಂದು ವಿವರಿಸಿದರು.

ಪಾತ್ರೆಗಳ ಸ್ವಚ್ಛತೆಗೂ ಹೆಚ್ಚು ನೀರು ವ್ಯಯವಾಗುವ ಕಾರಣಕ್ಕೆ ಕೆಲವು ಹೋಟೆಲ್‌ಗಳಲ್ಲಿ ಸ್ಟೀಲ್‌ ತಟ್ಟೆ ಹಾಗೂ ಲೋಟದ ಬದಲಾಗಿ ಬಳಸಿ ಬಿಸಾಡುವ ಪೇಪರ್ ತಟ್ಟೆ ಹಾಗೂ ಲೋಟಗಳನ್ನು ಬಳಸಲಾಗುತ್ತಿದೆ ಎಂದು ಅವರು ನೀರಿನ ಸಮಸ್ಯೆಯನ್ನು ಬಿಚ್ಚಿಟ್ಟರು.

ಉಡುಪಿ, ಮಣಿಪಾಲ್ ಸುತ್ತಮುತ್ತ 600ಕ್ಕೂ ಹೆಚ್ಚು ಹೋಟೆಲ್‌ಗಳಿದ್ದು, ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿರುವ ಕಾರಣ ಹೋಟೆಲ್‌ ಉದ್ಯಮ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ. ದುಡಿಮೆಯ ಬಹುಪಾಲನ್ನು ಟ್ಯಾಂಕರ್ ನೀರು ಖರೀದಿಗೆ ಮೀಸಲಿಡಬೇಕಾಗಿದೆ ಎನ್ನುತ್ತಿದ್ದಾರೆ ಹೋಟೆಲ್ ಮಾಲೀಕರು.

ಕುಡಿಯಲು, ಕೈ ತೊಳೆಯಲು, ಶೌಚಾಲಯ ಬಳಕೆ, ಸ್ವಚ್ಛತೆಗಾಗಿ ಪ್ರತಿದಿನ 1ರಿಂದ 2 ಟ್ಯಾಂಕರ್ ನೀರು ಬೇಕಾಗುತ್ತದೆ. ಒಂದು ಟ್ಯಾಂಕರ್‌ಗೆ ಕನಿಷ್ಠ ₹ 3 ರಿಂದ ₹ 5 ಸಾವಿರ ಭರಿಸಬೇಕು. ಲಾಭ ಪೂರ್ತಿ ನೀರಿಗೆ ವ್ಯಯವಾಗುತ್ತಿದೆ ಎಂದು ಅಳಲು ತೋಡಿಕೊಂಡರು ಹೋಟೆಲ್ ಮಾಲೀಕ ವಿಶ್ವನಾಥ್ ಶೆಟ್ಟಿ.

ಉಡುಪಿಯ ಹೋಟೆಲ್ ಉದ್ಯಮ ಬಹುಪಾಲು ಪ್ರವಾಸಿಗರನ್ನು ನೆಚ್ಚಿಕೊಂಡಿದೆ. ಈ ಬಾರಿಯ ಬೇಸಗೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದರೂ, ಅವರಿಗೆ ಅಗತ್ಯದಷ್ಟು ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಬೇರೆ ಊರುಗಳಿಂದ ಹೋಟೆಲ್‌ಗೆ ಬಂದವರು ಶೌಚಾಲಯ, ಮುಖ ತೊಳೆಯಲು ನೀರು ಕೇಳುತ್ತಾರೆ. ಹೋಟೆಲ್‌ನಲ್ಲಿ ನೀರಿನ ಸಮಸ್ಯೆ ಕೇಳಿ ಬೇರೆಡೆಗೆ ತೆರಳುತ್ತಿದ್ದಾರೆ ಎಂದು ನೋವು ಹಂಚಿಕೊಂಡರು ಮಾಲೀಕರಾದ ಗಣಪತಿ ಭಟ್‌.

ವಸತಿ ಗೃಹಗಳಲ್ಲೂ ನೀರಿನ ಸಮಸ್ಯೆ:

ಬೇಸಗೆ ರಜೆಯಾಗಿರುವ ಕಾರಣ ಉಡುಪಿಯ ಪ್ರಸಿದ್ಧ ಧಾರ್ಮಿಕ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದು, ವಸತಿ ಗೃಹಗಳಲ್ಲೂ ನೀರಿನ ಸಮಸ್ಯೆ ಹೆಚ್ಚಾಗಿದೆ. ಕೆಲವು ಲಾಡ್ಜ್‌ಗಳಲ್ಲಿ ಪ್ರವಾಸಿಗರ ಸ್ನಾನಕ್ಕೆ ಅಗತ್ಯ ನೀರು ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT