ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: 24ಕ್ಕೇರಿದ ಕೋವಿಡ್ ಪೀಡಿತರ ಸಂಖ್ಯೆ

ಭಟ್ಕಳದಲ್ಲಿ ಒಂದೇ ದಿನ 12 ಪ್ರಕರಣಗಳು ದೃಢ: ಜಿಲ್ಲೆಯ ಇತರೆಡೆ ವಿನಾಯಿತಿ ಯಥಾಸ್ಥಿತಿ ಮುಂದುವರಿಕೆ
Last Updated 8 ಮೇ 2020, 12:12 IST
ಅಕ್ಷರ ಗಾತ್ರ

ಕಾರವಾರ: ಭಟ್ಕಳದಲ್ಲಿ ಕೋವಿಡ್ 19ನ ಮತ್ತಷ್ಟು ಪ್ರಕರಣಗಳು ದೃಢಪಡುತ್ತಿದ್ದು, ಶುಕ್ರವಾರ ಒಂದೇ ದಿನ 12 ಮಂದಿಗೆ ಖಚಿತವಾಗಿದೆ. ಅವರಲ್ಲಿ ಐದು ತಿಂಗಳ ಹಸುಗೂಸು ಹಾಗೂ ಮೂರು ವರ್ಷದ ಮಗುಕೂಡ ಸೇರಿದ್ದಾರೆ.

ಎಲ್ಲರೂ ಕಂಟೈನ್‌ಮೆಂಟ್ ವಲಯದ ಒಳಗೇವಾಸವಿದ್ದ ಕಾರಣ ಇತರ ಪ್ರದೇಶಗಳ ಜನರಿಗೆ ಆತಂಕದ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಈ 12 ಮಂದಿ ಎಲ್ಲರೂ ಮೇ 5ರಂದು ಕೋವಿಡ್ 19 ಖಚಿತವಾಗಿದ್ದ 18ರ ಯುವತಿಯ (ರೋಗಿ ಸಂಖ್ಯೆ 659) ಸಂಪರ್ಕಕ್ಕೆ ಬಂದವರಾಗಿದ್ದಾರೆ. 10 ಮಂದಿ ಒಂದೇ ಕುಟುಂಬದವರಾಗಿದ್ದು, ಆ ಯುವತಿಯ ಗೆಳತಿ ಮತ್ತು ಪಕ್ಕದ ಮನೆಯ ಒಬ್ಬರು ಸೋಂಕಿತರಾಗಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಏಪ್ರಿಲ್ ತಿಂಗಳಲ್ಲಿ ಭಟ್ಕಳದ ಮೂರು ಕುಟುಂಬಗಳು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಹೋಗಿರುವುದು ತಿಳಿದುಬಂದಿದೆ.ಈ ಯುವತಿಯ ಕುಟುಂಬದವರು ಏ.20ರಂದು ಚಿಕಿತ್ಸೆ ಪಡೆದು ವಾಪಸಾಗಿದ್ದರು. ಈ ರೀತಿ ಎರಡನೇ ಸಂಪರ್ಕ ಹೊಂದಿರುವಸುಮಾರು 50ಕ್ಕೂ ಹೆಚ್ಚು ಜನರ ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ತಿಳಿಸಿದರು.

ತಿಳಿಸದ ಕಾರಣ ಪ್ರಕರಣ ಹೆಚ್ಚು: ‘ಐದು ತಿಂಗಳ ಮಗುವಿಗೆ ಅಪಸ್ಮಾರದ ಲಕ್ಷಣಗಳಿದ್ದವು. ಜಿಲ್ಲಾಡಳಿತದಿಂದ ಪಾಸ್ ಪಡೆದು ಅವರು ಪ್ರಯಾಣಿಸಿದ್ದರು. ಆದರೆ, ಫಸ್ಟ್ ನ್ಯೂರೊ ಆಸ್ಪತ್ರೆಗೆ ಹೋಗಿದ್ದ ವಿಚಾರವನ್ನು ಅವರು ತಿಳಿಸಿರಲಿಲ್ಲ. ಅಲ್ಲಿಗೆ ಹೋಗಿ ಬಂದು 17 ದಿನಗಳಾದ ಕಾರಣ ಸೋಂಕಿತರ ಸಂಖ್ಯೆ ಏರಿಕೆ ಕಂಡಿದೆ’ ಎಂದು ವಿವರಿಸಿದರು.

‘ಫಸ್ಟ್‌ನ್ಯೂರೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಉತ್ತರ ಕನ್ನಡ ಜಿಲ್ಲೆಯವರ ಮಾಹಿತಿಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತಈಗಾಗಲೇ ನಮ್ಮೊಂದಿಗೆ ಹಂಚಿಕೊಂಡಿದೆ.ಈ ರೀತಿ ಯಾರಾದರೂ ಹೊರ ಜಿಲ್ಲೆಗಳ ಆಸ್ಪತ್ರೆಗಳಿಗೆ ಹೋದವರಿದ್ದರೆ ತಪ್ಪದೇ ತಿಳಿಸಬೇಕು. ರೋಗ ಲಕ್ಷಣಗಳಿದ್ದು ಮುಚ್ಚಿಟ್ಟು, ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವುದನ್ನು ಇನ್ನುಮುಂದೆ ಸಹಿಸಲಾಗದು’ ಎಂದು ಎಚ್ಚರಿಕೆ ನೀಡಿದರು.

‘ಕೋವಿಡ್ 19 ಪೀಡಿತರ ಸಂಖ್ಯೆ ಎಷ್ಟಾಯ್ತು ಎಂಬುದು ಮುಖ್ಯವಲ್ಲ. ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವುದು ಅಗತ್ಯ. ಅಲ್ಲದೇ ಸೋಂಕಿನ ಮೂಲವನ್ನು ಪತ್ತೆ ಹಚ್ಚಬೇಕು. ಇದೆರಡೂ ನಮ್ಮ ಜಿಲ್ಲೆಯಲ್ಲಿ ಸಮರ್ಪಕ ರೀತಿಯಿಂದ ಆಗುತ್ತಿದೆ. ಎಲ್ಲ ಸೋಂಕಿತರಿಗೂ ಉತ್ತಮ ರೀತಿಯಿಂದ ಚಿಕಿತ್ಸೆ ನೀಡಲಾಗುತ್ತದೆ. ಅವರು ಸಂಪೂರ್ಣವಾಗಿ ಗುಣಮುಖರಾಗುವ ವಿಶ್ವಾಸವಿದೆ’ ಎಂದು ಹೇಳಿದರು.

ಕೋವಿಡ್ 19 ಪೀಡಿತರ ಚಿಕಿತ್ಸೆ ವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ಹಣಾಧಿಕಾರಿ ಮೊಹಮ್ಮದ್ ರೋಶನ್ ಮಾತನಾಡಿ, ‘ಕೋವಿಡ್ ವಾರ್ಡ್‌ನಲ್ಲಿ ರೋಗಿಗಳಿಗೆ ಎಲ್ಲ ಸೌಕರ್ಯಗಳು ಇವೆ. ವೈ ಫೈ, ಟಿ.ವಿ, ಫ್ರಿಜ್, ವಾಶಿಂಗ್ ಮಷಿನ್ ಅಳವಡಿಸಲಾಗಿದೆ. ಅವರಿಗೆ ಬೇಕಾದ ಆಹಾರದ ವ್ಯವಸ್ಥೆಯೂ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಭಟ್ಕಳದಲ್ಲಿ ಯಾವುದೇ ವಿನಾಯಿತಿಯಿಲ್ಲ’:‘ಭಟ್ಕಳದಕಂಟೈನ್‌ಮೆಂಟ್ ವಲಯದಲ್ಲಿ ಇಷ್ಟುದಿನ ಮಾನವೀಯ ನೆಲೆಯಿಂದ ಕೆಲವು ಚಟುವಟಿಕೆಗಳಿಗೆ ಅವಕಾಶ ನೀಡಲಾಗಿತ್ತು. ಆದರೆ, ಇನ್ನುಮುಂದೆ ಯಾವುದೇ ರೀತಿಯ ವಿನಾಯಿತಿಗಳನ್ನು ನೀಡುವುದಿಲ್ಲ’ ಎಂದು ಡಾ.ಹರಿಶಕುಮಾರ್ ಸ್ಪಷ್ಟಪಡಿಸಿದರು.

‘ಪಟ್ಟಣದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಆಗಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಪಟ್ಟಣದಲ್ಲೇ ಇದ್ದುಕೊಂಡು ಮಾರ್ಗದರ್ಶನ ನೀಡುತ್ತಿದ್ದಾರೆ. ಡ್ರೋಣ್ ಕಣ್ಗಾವಲು, ಅಗತ್ಯ ವಸ್ತುಗಳು, ಔಷಧಿಯನ್ನು ಮನೆ ಬಾಗಿಲಿಗೇ ತಲುಪಿಸುವುದು, ಎಲ್ಲ ರಸ್ತೆಗಳನ್ನೂ ಮುಚ್ಚುವುದು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಇತರೆಡೆ ಸಡಿಲಿಕೆ ಮುಂದುವರಿಕೆ:‘ಕೋವಿಡ್ 19 ಪ್ರಕರಣಗಳು ಕೇವಲ ಭಟ್ಕಳದಲ್ಲಿ ವರದಿಯಾಗಿವೆ. ಹಾಗಾಗಿ ಜಿಲ್ಲೆಯ ಇತರೆಡೆಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಮುಂದುವರಿಸುವುದರಲ್ಲಿ ರಾಜಿಯಿಲ್ಲ. ಕೇಂದ್ರ ಸರ್ಕಾರ ತಿಳಿಸಿರುವ ವಿನಾಯಿತಿಗಳನ್ನು ಭಟ್ಕಳ ಹೊರತು ಪಡಿಸಿ ಜಿಲ್ಲೆಯಇತರೆಡೆ ಯಥಾವತ್ ಪಾಲನೆ ಮಾಡಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಕಂಟೈನ್‌ಮೆಂಟ್ ವಲಯದಲ್ಲಿಇನ್ನಷ್ಟು ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗುತ್ತದೆ ಎಂದೂ ಇದೇವೇಳೆ ಹೇಳಿದರು.

------

12 ಕೋವಿಡ್ ಪೀಡಿತರು

ರೋಗಿ ಸಂಖ್ಯೆ;ವಯಸ್ಸು;ಲಿಂಗ

739;25;ಹೆಣ್ಣು

740;18;ಹೆಣ್ಣು

741;11;ಹೆಣ್ಣು

742;39;ಹೆಣ್ಣು

743;33;ಗಂಡು

744;75;ಹೆಣ್ಣು

745;12;ಹೆಣ್ಣು

746;83;ಗಂಡು

747;5 ತಿಂಗಳು;ಹೆಣ್ಣು

748;3;ಹೆಣ್ಣು

749;60;ಗಂಡು

750;22;ಹೆಣ್ಣು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT