ಶನಿವಾರ, ಜೂನ್ 6, 2020
27 °C
ಸೋಂಕು ಮುಕ್ತರಾಗಿ ಕೋವಿಡ್ 19 ಆಸ್ಪತ್ರೆಯಿಂದ ಬಿಡುಗಡೆಯಾದ 20 ಮಂದಿಯ ಸಂತಸ

ಕಾರವಾರ | ‘ಕೋವಿಡ್‌ಗೆ ಹೆದರಬೇಕಿಲ್ಲ, ಚೆನ್ನಾಗಿದ್ದೇವೆ...’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ನಮಗೆ ಯಾವುದೇ ರೋಗ ಲಕ್ಷಣ ಇರಲಿಲ್ಲ. ಆದರೆ, ಕೋವಿಡ್ 19 ಪರೀಕ್ಷೆ ಫಲಿತಾಂಶ ಪಾಸಿಟಿವ್ ಬಂದ ಕಾರಣ ನಾವು ಚಿಕಿತ್ಸೆ ಪಡೆದಿದ್ದೇವೆ. ವೈರಸ್‌ ಬಗ್ಗೆ ವಿನಾಕಾರಣ ಆತಂಕ ಪಡಬೇಕಿಲ್ಲ. ನಮ್ಮನ್ನು ವೈದ್ಯರು, ಅಧಿಕಾರಿಗಳು ಬಹಳ ಚೆನ್ನಾಗಿ ನೋಡಿಕೊಂಡಿದ್ದಾರೆ...’

ಕೋವಿಡ್ 19 ಸೋಂಕಿನಿಂದ ಗುಣಮುಖರಾಗಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಕೋವಿಡ್ ವಾರ್ಡ್‌ನಿಂದ ಶನಿವಾರ ಬಿಡುಗಡೆಯಾದ 65 ವರ್ಷದ ಹಿರಿಯರು ಹೀಗೆ ಹೇಳುತ್ತ, ಕೈ ಮುಗಿದರು.

ಇದೇ ರೀತಿಯ ಸಂಭ್ರಮ, ಸಂತೃಪ್ತಿ ಬಿಡುಗಡೆಯಾದ ಎಲ್ಲರಲ್ಲೂ ಕಂಡುಬಂತು. ಚಿಕಿತ್ಸೆ ನೀಡಿದ ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸುತ್ತ ಆಂಬುಲೆನ್ಸ್‌ನಲ್ಲಿ ಕುಳಿತು ಭಟ್ಕಳದ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಕ್ಕೆ ತೆರಳಿದರು.

16 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ 20 ಮಂದಿ ಗುಣಮುಖರಾಗಿದ್ದು, ಅವರನ್ನು ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಕ್ರಿಮ್ಸ್ ಆವರಣದಲ್ಲಿ ಅವರನ್ನು ಚಪ್ಪಾಳೆ ತಟ್ಟಿ ಸ್ವಾಗತಿಸಿ, ಹೂಗುಚ್ಛ, ಲಡ್ಡು ಹಾಗೂ ಸೋಂಕು ಮುಕ್ತರಾದ ಬಗ್ಗೆ ಪ್ರಮಾಣಪತ್ರವನ್ನು ಅಧಿಕಾರಿಗಳು ನೀಡಿದರು. 

ಗುಣಮುಖರಾದವರ ಪೈಕಿ 83 ವರ್ಷದ ಹಿರಿಯರು, ಒಂದು, ಎರಡು ಮತ್ತು ಮೂರು ವರ್ಷಗಳ ಮಕ್ಕಳೂ ಸೇರಿರುವುದು ಗಮನಾರ್ಹವಾಗಿದೆ. 11 ವರ್ಷದ ಬಾಲಕಿ, 15 ಮತ್ತು 17 ವರ್ಷದ ಬಾಲಕರು ಗುಣಮುಖರಾಗಿದ್ದಾರೆ. ಉಳಿದಂತೆ, ಒಟ್ಟು ಎಂಟು ಮಂದಿ ಯುವತಿಯರು ಹಾಗೂ ಮಹಿಳೆಯರು, ಐವರು ಪುರುಷರು ಆಸ್ಪತ್ರೆಯಿಂದ ಬಿಡುಗಡೆಯಾದರು. 

ಇದಕ್ಕೂ ಮೊದಲು ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಚಿಕಿತ್ಸೆ ನೀಡಿದ ಮಕ್ಕಳ ತಜ್ಞ ಡಾ.ರಾಜು, ‘ಗುಣಮುಖರಾದ ಹಲವು ಹಿರಿಯರಿಗೆ ಹೃದ್ರೋಗ ಸಮಸ್ಯೆ, ಅಧಿಕ ರಕ್ತದೊತ್ತಡ, ಮಧುಮೇಹ ಮುಂತಾದ ಆರೋಗ್ಯ ಸಮಸ್ಯೆಗಳಿದ್ದವು. ಎಲ್ಲರಿಗೂ ಸರ್ಕಾರದ ನಿರ್ದೇಶನದಂತೆಯೇ ಚಿಕಿತ್ಸೆ ನೀಡಲಾಗಿದೆ’ ಎಂದು ತಿಳಿಸಿದರು.

ಚಿಕಿತ್ಸೆ ನೀಡಿದ ಮತ್ತೊಬ್ಬ ವೈದ್ಯ ಡಾ.ವಿಶ್ವನಾಥ್ ಮಾತನಾಡಿ, ‘ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ನಾವು ಮಾರ್ಚ್‌ನಿಂದಲೇ ಮಾನಸಿಕವಾಗಿ ಸಿದ್ಧವಾಗಿದ್ದೆವು. ವೈಯಕ್ತಿಕ ಸುರಕ್ಷತಾ ಸಲಕರಣೆಗಳನ್ನು ಧರಿಸಿ ಚಿಕಿತ್ಸೆ ನೀಡಿದ್ದೇವೆ. ಜೊತೆಗೇ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿದ್ದೇವೆ’ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕಕುಮಾರ್, ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಶಿವಾನಂದ ಕುಡ್ತಲಕರ್, ‘ಕ್ರಿಮ್ಸ್’ ನಿರ್ದೇಶಕ ಡಾ.ಗಜಾನನ ನಾಯಕ ಇದ್ದರು.

ಮತ್ತಿಬ್ಬರಿಗೆ ಕೋವಿಡ್ ದೃಢ
ಜಿಲ್ಲೆಯಲ್ಲಿ ಮತ್ತಿಬ್ಬರಿಗೆ ಶನಿವಾರ ಕೋವಿಡ್ 19 ದೃಢಪಟ್ಟಿದೆ. ಹೊನ್ನಾವರದ 34 ವರ್ಷದ ಮಹಿಳೆ (ರೋಗಿ ಸಂಖ್ಯೆ 1911), ಯಲ್ಲಾಪುರದ 23 ವರ್ಷದ ಯುವಕನಿಗೆ (ರೋಗಿ ಸಂಖ್ಯೆ 1912) ಸೋಂಕು ಖಚಿತವಾಗಿದೆ.

ಈಗ ಜಿಲ್ಲೆಯಲ್ಲಿ ಒಟ್ಟು 22 ಸಕ್ರಿಯ ಪ್ರಕರಣಗಳಿದ್ದು, 32 ಮಂದಿ ಗುಣಮುಖರಾಗಿದ್ದಾರೆ.

**
ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿದ ಬಳಿಕ ನಾವೂ ನಮ್ಮ ಸಂಸಾರವನ್ನು ಬಿಟ್ಟು ಒಂದು ವಾರ ಕ್ವಾರಂಟೈನ್ ಆಗಿದ್ದೇವೆ. ಮುಂದೆಯೂ ಅಗತ್ಯವಿದ್ದರೆ ಸೇವೆಗೆ ಸಿದ್ಧವಿದ್ದೇವೆ.
– ಡಾ.ರಾಜು, ಮಕ್ಕಳ ತಜ್ಞ.

*
ಕೋವಿಡ್ 19 ರೋಗಿಗಳು ಗುಣಮುಖರಾಗಲು ನಮಗೆ ವಹಿಸಿದ ಕೆಲಸವನ್ನು ನಾವು ಮಾಡಿದ್ದೇವೆ. ಇಂತಹ ಸಂಕಷ್ಟದಲ್ಲಿ ದೇಶ ಸೇವೆಗೆ ಸಿಕ್ಕಿದ ಅವಕಾಶ ಇದು ಭಾವಿಸಿದ್ದೇನೆ.
– ಡಾ.ವಿಶ್ವನಾಥ್, ಚಿಕಿತ್ಸೆ ನೀಡಿದ ವೈದ್ಯರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು