ಶುಕ್ರವಾರ, ಸೆಪ್ಟೆಂಬರ್ 17, 2021
23 °C
ಮಲಪ್ರಭಾ, ಘಟಪ್ರಭಾ ನದಿಗಳಿಗೆ ನೀರು ಹರಿಸುವ ಪ್ರಸ್ತಾವಕ್ಕೆ ಭಾರಿ ವಿರೋಧ

ಕಾಳಿ ನದಿ ನೀರು ಹರಿಸುವ ಖಾಸಗಿ ಪ್ರಸ್ತಾವ: ‘ಮೊದಲು ನಮಗೆ, ನಂತರ ಬೇರೆಯವರಿಗೆ’

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕಾಳಿನದಿಯನ್ನು ಘಟಪ್ರಭಾ ಮತ್ತು ಮಲಪ್ರಭಾ ನದಿಗೆ ಜೋಡಿಸಲು ನಿರಾಣಿ ಫೌಂಡೇಷನ್ ಸಿದ್ಧಪಡಿಸಿರುವ ಪ್ರಾಥಮಿಕ ವರದಿಗೆ ಜಿಲ್ಲೆಯಲ್ಲಿ ಮತ್ತಷ್ಟು ವಿರೋಧ ವ್ಯಕ್ತವಾಗುತ್ತಿದೆ. ಒಂದುವೇಳೆ ಸರ್ಕಾರವು ಯೋಜನೆ ಜಾರಿಗೆ ಮುಂದಾದರೆ ಹೋರಾಟ ನಡೆಸುವುದಾಗಿ ಸಂಘಟನೆಗಳು, ಪರಿಸರಪ್ರಿಯರು ಎಚ್ಚರಿಕೆ ನೀಡಿದ್ದಾರೆ.

ನಿರಾಣಿ ಫೌಂಡೇಷನ್‌ನ ನಿರ್ದೇಶಕ ಸಂಗಮೇಶ ನಿರಾಣಿ ನೇತೃತ್ವದಲ್ಲಿ ಸಿದ್ಧಪಡಿಸಲಾಗಿರುವ ‘ಅಮೃತಧಾರೆ’ ಯೋಜನೆಯ ವರದಿಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಈಗಾಗಲೇ ನೀಡಲಾಗಿದೆ. ಸುಮಾರು ₹ 5,400 ಕೋಟಿ ವೆಚ್ಚದಲ್ಲಿ ಇದನ್ನು ಅನುಷ್ಠಾನ ಮಾಡಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಆದರೆ, ಈ ಯೋಜನೆಯನ್ನು ಹೇಗೆ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂಬುದು ಪರಿಸರ ಬರಹಗಾರ ಶಿವಾನಂದ ಕಳವೆ ಅವರ ಅನಿಸಿಕೆ.

‘ಕಾಳಿ ನದಿಗೆ ಐದು ಅಣೆಕಟ್ಟೆಗಳಿದ್ದು, ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಕೈಗಾ ಅಣು ವಿದ್ಯುತ್ ಸ್ಥಾವರವೂ ಇದನ್ನೇ ಅವಲಂಬಿಸಿದೆ. ಕಾಳಿ ಹುಲಿ ಸಂರಕ್ಷಿತ ವಲಯ, ವನ್ಯಜೀವಿ ವಲಯವೂ ಇಲ್ಲಿವೆ. 184 ಕಿ.ಮೀ ಉದ್ದದ ಕಾಳಿ ನದಿಯು ಈಗ ಅಡೆತಡೆಯಿಲ್ಲದೇ ಕೇವಲ 40 ಕಿ.ಮೀ ಹರಿಯುತ್ತಿದೆ. ಹೀಗಿರುವಾಗ ಎಲ್ಲಿಂದ ನೀರು ತೆಗೆದುಕೊಂಡು ಹೋಗುತ್ತಾರೆ’ ಎಂದು ಅವರು ಪ್ರಶ್ನಿಸುತ್ತಾರೆ.

‘ಕಾಳಿ ನದಿಯ ಪಕ್ಕದಲ್ಲೇ ಇರುವ ಜೊಯಿಡಾ ತಾಲ್ಲೂಕಿನಲ್ಲಿ ಕುಣಬಿ ಜನಾಂಗದ 40 ಸಾವಿರ ಜನರು ಇಂದಿಗೂ ತಮ್ಮ ದೈನಂದಿನ ಬದುಕಿಗೆ ಹೋರಾಡುತ್ತಿದ್ದಾರೆ. ಅವರ ಜಮೀನು, ವನ್ಯಜೀವಿ ವಲಯದಲ್ಲೇ ಪೈಪ್‌ಲೈನ್ ಸಾಗಬೇಕು. ದೂರದ ನದಿಯ ನೀರನ್ನು ನೋಡಿಕೊಂಡು ಈ ರೀತಿ ಏನೇನೋ ಮಾತುಗಳನ್ನಾಡುವುದು ಹೊಸದಲ್ಲ. ನೀರಿನ ನಿಜವಾದ ಸತ್ಯಗಳನ್ನು ಅರ್ಥ ಮಾಡಿಕೊಳ್ಳದವರಿಂದ ಇಂಥ ಮಾತುಗಳು ಬರುತ್ತವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಇತ್ತ ಕರಾವಳಿಯಲ್ಲೇ ನೀರಿನ ಸಮಸ್ಯೆಯಿದೆ. ಮಲ್ಲಾಪುರದ ಸಮೀಪದವರೆಗೂ ಜಲಮೂಲಗಳಲ್ಲಿ ಉಪ್ಪು ನೀರು ಬರುತ್ತದೆ. ನೀರಿನ ಸಮರ್ಥ ಬಳಕೆಯೇ ಸಮಸ್ಯೆಗೆ ಪರಿಹಾರ. ಹೆಚ್ಚು ನೀರು ಬಯಸುವ ಬೆಳೆಗಳನ್ನು ಬೆಳೆಯುವ ಬದಲು ಮಿಶ್ರ ಬೆಳೆಗಳತ್ತ ಗಮನಹರಿಸಬೇಕು. ಅವರು ತಮ್ಮ ಹತ್ತಿರದ ಕೆರೆಗಳನ್ನು ಅಭಿವೃದ್ಧಿ ಮಾಡಲಿ’ ಎಂದು ಸಲಹೆ ನೀಡಿದ್ದಾರೆ.

ಜೊಯಿಡಾದ ಕಾಳಿ ಬ್ರಿಗೇಡ್‌ನ ಸಂಚಾಲಕ ರವಿ ರೇಡ್ಕರ್ ಕೂಡ ಇದೊಂದು ಅವೈಜ್ಞಾನಿಕ ಯೋಜನೆ ಎನ್ನುತ್ತಾರೆ.

‘ಕಾಳಿ ನದಿಯ ನೀರನ್ನು ಬೇರೆಡೆಗೆ ಹರಿಸಿದರೆ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಲವು ಬೃಹತ್ ಯೋಜನೆಗಳನ್ನು ತಂದು ಇಡೀ ತಾಲ್ಲೂಕನ್ನೇ ಲೂಟಿ ಮಾಡಿದ್ದಾಯ್ತು. ಹಳಿಯಾಳ ಬಿಟ್ಟರೆ ದಾಂಡೇಲಿ, ರಾಮನಗರ, ಜೊಯಿಡಾ ಭಾಗದ ಹಳ್ಳಿಗಳಲ್ಲಿ ನೀರಿಲ್ಲ. ಬೇರೆ ಜಿಲ್ಲೆಗಳಿಗೆ ಕೊಡುವ ಮೊದಲು ನಮ್ಮವರಿಗೇ ನೀರು ಕೊಡಲಿ. ಒಂದುವೇಳೆ, ಯೋಜನೆಯನ್ನು ಸರ್ಕಾರ ಮುಂದುವರಿಸಲು ಮುಂದಾದರೆ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಒಂದು ವಾರದಲ್ಲಿ ಸಂಪೂರ್ಣ ವರದಿ’: ‘ಕಾಳಿ ನದಿಯ ಸಂಪೂರ್ಣ ನೀರನ್ನು ನಾವು ಕೇಳುತ್ತಿಲ್ಲ. ಮಳೆಗಾಲದಲ್ಲಿ ತುಂಬಿ ಹರಿಯುವ ಸಂದರ್ಭದಲ್ಲಿ, ಬೇಸಿಗೆಯಲ್ಲಿ ವಿದ್ಯುತ್ ಉತ್ಪಾದನೆ ಮಾಡಿ ಹೊರಬಿಟ್ಟ ನೀರನ್ನು ಕುಡಿಯಲು ಮತ್ತು ಕೆರೆ ತುಂಬಲು ಕೇಳುತ್ತಿದ್ದೇವೆ’ ಎಂದು ಸಂಗಮೇಶ ನಿರಾಣಿ ಪ್ರತಿಪಾದಿಸಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಇನ್ನೊಂದು ವಾರದಲ್ಲಿ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಧಾರವಾಡ ಮತ್ತು ಗದಗ ಜಿಲ್ಲೆಗಳು, ಭಾಗಶಃ ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಬೇಕಿದೆ’ ಎಂದರು.

‘20–25 ಟಿಎಂಸಿ ಅಡಿ ನೀರು ಸಾಗಿಸಲಾಗುತ್ತದೆ. ದಾಂಡೇಲಿಯಿಂದ ನೀರನ್ನು 26 ಮೆಗಾವಾಟ್ ವಿದ್ಯುತ್ ಬಳಸಿ ಅಳ್ನಾವರಕ್ಕೆ ಸಾಗಿಸಬೇಕು. ಅಲ್ಲಿನ ಜಲಾಗಾರದಿಂದ ಸುಮಾರು 70 ಮೆಗಾವಾಟ್ ವಿದ್ಯುತ್ ಬಳಸಿ ವಿವಿಧೆಡೆಗೆ ಪೂರೈಸಲಾಗುತ್ತದೆ’ ಎಂದು ತಮ್ಮ ಯೋಜನೆಯನ್ನು ವಿವರಿಸಿದರು.

ಸೂಪಾ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ (ಏ.30ರಂದು)

ಗರಿಷ್ಠ ಮಟ್ಟ: 564 ಮೀಟರ್, 147 ಟಿಎಂಸಿ ಅಡಿ

ವರ್ಷ; ಮೀಟರ್‌ಗಳಲ್ಲಿ; ಟಿಎಂಸಿ ಅಡಿ

2015; 538.76; 61.26

2016; 527.07; 35.0

2017; 534.08; 49.85

2018; 536.20; 54.93

2019; 537.20; 57.38

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು