ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಮಳಿಗೆ ತೆರೆದರೆ ಕಾನೂನು ಹೋರಾಟ: ಆರ್.ಜಿ.ನಾಯ್ಕ ಎಚ್ಚರಿಕೆ

ಕುಮಟಾ ತಾಲ್ಲೂಕಿನ ಹುಬ್ಬಣಗೇರಿ: ಶಾಲೆಯಿಂದ ಕೇವಲ 60 ಮೀಟರ್ ಅಂತರ
Last Updated 31 ಮಾರ್ಚ್ 2022, 12:23 IST
ಅಕ್ಷರ ಗಾತ್ರ

ಕಾರವಾರ: ‘ಕುಮಟಾ ತಾಲ್ಲೂಕಿನ ಬಾಡ ಗ್ರಾಮದ ಹುಬ್ಬಣಗೇರಿಯಲ್ಲಿ ಎಂ.ಎಸ್.ಐ.ಎಲ್ ಮದ್ಯ ಮಾರಾಟ ಮಳಿಗೆ ನಿರ್ಮಿಸಲು ‍ಅಬಕಾರಿ ಇಲಾಖೆಗೆ ಪ್ರಸ್ತಾವ ಸಲ್ಲಿಕೆಯಾಗಿದೆ. ಸಮೀಪದಲ್ಲೇ ಶಾಲೆಯಿರುವ ಕಾರಣ ಇದು ನಿಯಮಕ್ಕೆ ವಿರುದ್ಧವಾಗಿದೆ. ಒಂದುವೇಳೆ, ಮಳಿಗೆ ನಿರ್ಮಾಣಕ್ಕೆ ಮುಂದಾದರೆ ಕಾನೂನು ಹೋರಾಟ ನಡೆಸಲಾಗುವುದು’ ಎಂದು ಕುಮಟಾದ ವಕೀಲರ ಸಂಘದ ಅಧ್ಯಕ್ಷ ಆರ್.ಜಿ.ನಾಯ್ಕ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉದ್ದೇಶಿತ ಮಳಿಗೆಯು ಬಾಡ– ಕಾಗಾಲ ಜನತಾ ವಿದ್ಯಾಲಯ ಪ್ರೌಢಶಾಲೆಯ ಆವರಣದಿಂದ ಕೇವಲ 60 ಮೀಟರ್‌ ಅಂತರದಲ್ಲಿದೆ. ಈ ಬಗ್ಗೆ ಸ್ಥಳೀಯರು ಅಬಕಾರಿ ಇಲಾಖೆಯ ಉಪ ಆಯುಕ್ತರಿಗೆ ಕಳೆದ ವರ್ಷ ಸೆ.3ರಂದು ತಕರಾರು ಅರ್ಜಿ ಸಲ್ಲಿಸಿದ್ದರು. ಬಳಿಕ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು’ ಎಂದು ತಿಳಿಸಿದರು.

‘ಆಗ ಉದ್ದೇಶಿತ ಮಳಿಗೆ ಹಾಗೂ ಶಾಲೆಯ ನಡುವಿನ ಅಂತರವನ್ನು ಟೇಪ್ ಮೂಲಕ ಅಳೆಯಲಾಗಿತ್ತು. ಎರಡೂ ಕಟ್ಟಡಗಳ ನಡುವೆ ಅಂತರವು ಹೆಚ್ಚು ಇದೆ ಎಂದು ತೋರಿಸುವ ಉದ್ದೇಶದಿಂದ, ಖಾಸಗಿ ರಸ್ತೆಯಲ್ಲಿ ಅಳತೆ ಮಾಡಲು ಮುಂದಾಗಿದ್ದರು. ಅದಕ್ಕೆ ಸ್ಥಳೀಯರು ಆಕ್ಷೇಪಿಸಿದ್ದರು. ಬಳಿಕ ಇಲಾಖೆಯ ಹಿರಿಯ ಅಧಿಕಾರಿಗಳು ಗ್ರಾಮ ಪಂಚಾಯಿತಿಯಿಂದ ಮಾಹಿತಿ ಪಡದಾಗ, ಈ ಭಾಗದಲ್ಲಿ ಸಾರ್ವಜನಿಕ ರಸ್ತೆಯಿಲ್ಲ ಎಂದು ಖಚಿತವಾಗಿತ್ತು’ ಎಂದರು.

‘2021ರ ಡಿ.21ರಂದು ತಹಶೀಲ್ದಾರ್ ಈ ರಸ್ತೆಯನ್ನು ಸಾರ್ವಜನಿಕ ರಸ್ತೆ ಎಂದು ದೋಷ ಪೂರಿತ ವರದಿ ನೀಡಿದ್ದು ಗೊಂದಲಕ್ಕೆ ಕಾರಣವಾಯಿತು. ಇದರ ಬಗ್ಗೆ ಮರುಪರಿಶೀಲನೆಗೆ ಮತ್ತು ಕ್ರಮಕ್ಕೆ ಒತ್ತಾಯಿಸಿ ದೂರು ನೀಡಿದಾಗ, ತಮ್ಮ ವರದಿಗೆ ಅವರು ಮೌಖಿಕವಾಗಿ ವಿಷಾದ ವ್ಯಕ್ತಪಡಿಸಿದರು. ಬಳಿಕ ಈ ವರ್ಷ ಜ.27ರಂದು, ರಸ್ತೆಯು ಖಾಸಗಿಯಾಗಿದೆ ಎಂದು ಅಬಕಾರಿ ಇಲಾಖೆಗೆ ಪರಿಷ್ಕೃತ ವರದಿ ಸಲ್ಲಿಸಿದ್ದಾರೆ’ ಎಂದು ತಿಳಿಸಿದರು.

‘ಶಾಸಕ ದಿನಕರ ಶೆಟ್ಟಿ ಅವರು, ಮದ್ಯ ಮಾರಾಟ ಮಳಿಗೆ ಸ್ಥಾಪನೆಗೆ ನಿಯಮಾನುಸಾರ ಪರಿಶೀಲನೆ ಮಾಡಿ ಅನುಮತಿ ಕೊಡುವಂತೆ ಅಬಕಾರಿ ಸಚಿವರಿಗೆ ಶಿಫಾರಸು ಪತ್ರವನ್ನೂ ನೀಡಿದ್ದಾರೆ. ಮಳಿಗೆ ಬೇಕು ಎಂದು ವಾದಿಸುವವರು ಸುಳ್ಳು ನಕ್ಷೆಯನ್ನು ಸಿದ್ಧಪಡಿಸಿದ್ದಾರೆ’ ಎಂದೂ ದೂರಿದರು.

‘100 ಮೀಟರ್ ಇರಬೇಕು’:‘ಈ ನಡುವೆ ತಹಶೀಲ್ದಾರ್ ನೀಡಿದ ಮೊದಲ ವರದಿಯನ್ನೇ ಮುಂದಿಟ್ಟುಕೊಂಡು ಎಂ.ಎಸ್.ಐ.ಎಲ್ ಸಂಸ್ಥೆಯು ಮಳಿಗೆ ಸ್ಥಾಪನೆಗೆ ಅಧಿಕೃತ ಪ್ರಸ್ತಾವ ಸಲ್ಲಿಸಿದೆ. ಅಬಕಾರಿ ಉಪ ಆಯುಕ್ತರ ತಂಡವು ಸ್ಥಳಕ್ಕೆ ಭೇಟಿ ನೀಡಿ ಮಹಜರು ಮಾಡಿ ಶಾಲೆ ಮತ್ತು ಉದ್ದೇಶಿತ ಮಳಿಗೆಯ ಅಂತರ 97 ಮೀಟರ್ ಎಂದು ದಾಖಲಿಸಿದೆ. ಕರ್ನಾಟಕ ಮದ್ಯ ಮಾರಾಟ ಕಾಯ್ದೆಯ ನಿಯಮ 5ರ ಪ್ರಕಾರ, ಶಿಕ್ಷಣ ಸಂಸ್ಥೆ ಮತ್ತು ಧಾರ್ಮಿಕ ಕಟ್ಟಡಗಳಿಂದ ಮದ್ಯ ಮಾರಾಟ ಮಳಿಗೆಯು ಕನಿಷ್ಠ 100 ಮೀಟರ್ ಅಂತರದಲ್ಲಿ ಇರಬೇಕು’ ಎಂದು ಆರ್.ಜಿ.ನಾಯ್ಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT