ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಅರಣ್ಯ ಕಾಲೇಜಿನಲ್ಲಿ ಅಗ್ರಿ ವಾರ್‌ರೂಮ್

ಕೋವಿಡ್-19 ಸಂದರ್ಭದಲ್ಲಿ ರೈತರಿಗೆ ಕೃಷಿ ಮಾರ್ಗದರ್ಶನ ಮಾಡುವ ವ್ಯವಸ್ಥೆ
Last Updated 8 ಮೇ 2020, 2:26 IST
ಅಕ್ಷರ ಗಾತ್ರ

ಶಿರಸಿ: ಕೋವಿಡ್ 19 ಸಂದರ್ಭದಲ್ಲಿ ರೈತರಿಗೆ ಮಾರ್ಗದರ್ಶನ ಮಾಡಲು ಇಲ್ಲಿನ ಅರಣ್ಯ ಕಾಲೇಜಿನಲ್ಲಿ ‘ಅಗ್ರಿ ವಾರ್‌ರೂಮ್’ ಕಾರ್ಯಾರಂಭ ಮಾಡಿದೆ. ದಿನದ 11 ತಾಸು ಕಾರ್ಯನಿರ್ವಹಿಸುವ ವಾರ್‌ರೂಮ್ ರೈತರ ಅನುಮಾನಗಳನ್ನು ಬಗೆಹರಿಸಿ, ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡುತ್ತದೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮೂಲಕ ಸರ್ಕಾರ ಪ್ರಾರಂಭಿಸಿರುವ ಜಿಲ್ಲೆಯ ಏಕೈಕ ಅಗ್ರಿ ವಾರ್‌ರೂಮ್ ಇದಾಗಿದೆ. ಅರಣ್ಯ ಕಾಲೇಜಿನ 20 ಪ್ರಾಧ್ಯಾಪಕರು, ಕೃಷಿ ವಿಜ್ಞಾನ ಕೇಂದ್ರದ ಎಂಟು ವಿಜ್ಞಾನಿಗಳು ಸರದಿ ಪ್ರಕಾರ ಇಲ್ಲಿ ಕಾರ್ಯನಿರ್ವಹಿಸುತ್ತಾರೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಯಾವ ಹೊತ್ತಿನಲ್ಲೂ ರೈತರು ಇಲ್ಲಿಗೆ ಕರೆ ಮಾಡಿ, ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

‘ಸಾಮಾನ್ಯ ದಿನಗಳಲ್ಲಿ ರೈತರು ತಮ್ಮ ನಿಗದಿತ ನೆಟ್‌ವರ್ಕ್‌ಗಳ ಮೂಲಕ ಕೃಷಿ ಉತ್ಪನ್ನಗಳ ವಹಿವಾಟು ನಡೆಸುತ್ತಿದ್ದರು. ಕೋವಿಡ್ 19 ಸಾಂಕ್ರಾಮಿಕ ಕಾಯಿಲೆಯ ಪ್ರಸ್ತುತ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರು, ಬೆಳೆದಿರುವ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಗೊಂದಲಕ್ಕೊಳಗಾಗಿದ್ದಾರೆ. ರೈತರ ಈ ಗೊಂದಲಕ್ಕೆ ಪರಿಹಾರ ಸೂಚಿಸಲು ಅಗ್ರಿ ವಾರ್‌ರೂಮ್ ಪ್ರಾರಂಭಿಸಲಾಗಿದೆ. ಟೋಲ್ ಫ್ರೀ ನಂಬರ್ +91 18005998515 ಈ ಸಹಾಯವಾಣಿಗೆ ರೈತರು ಕರೆ ಮಾಡಬಹುದು’ ಎನ್ನುತ್ತಾರೆ ಅರಣ್ಯ ಕಾಲೇಜಿನ ಡೀನ್ ಡಾ. ಐ.ಎಸ್.ಕಟಗೇರಿ.

‘ಕಟಾವಿಗೆ ಬಂದಿರುವ ಹಣ್ಣು, ಅವುಗಳ ಮಾರುಕಟ್ಟೆ, ಮುಂಗಾರಿನ ಬೀಜ ಸಂಗ್ರಹ ಮತ್ತು ಮಾರಾಟ ವ್ಯವಸ್ಥೆ, ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿರುವ ಬೀಜ, ಗೊಬ್ಬರಗಳು, ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಇಂತಹ ಅಗತ್ಯ ಮಾಹಿತಿಯನ್ನು ರೈತರಿಗೆ ತಲುಪಿಸುತ್ತೇವೆ. ವಾಟ್ಸ್‌ಆ್ಯಪ್‌ ಗ್ರೂಪ್‌ಗಳ ಮೂಲಕ ರೈತರನ್ನು ತಲುಪಿಸಲು ಪ್ರಯತ್ನಿಸಲಾಗಿದೆ. ಆದರೆ, ಈ ವ್ಯವಸ್ಥೆ ಇನ್ನಷ್ಟು ಹೆಚ್ಚು ಜನರನ್ನು ತಲುಪಬೇಕಾಗಿದೆ. ನಾಲ್ಕು ದಿನಗಳಲ್ಲಿ 20ರಷ್ಟು ಕರೆಗಳು ಮಾತ್ರ ಬಂದಿವೆ. ದೂರವಾಣಿ ಕರೆ ಮಾಡುವ ರೈತರ ವಿಳಾಸ, ಸಂಪರ್ಕ ಸಂಖ್ಯೆ ಸಂಗ್ರಹಿಸುವ ಕಾಲೇಜು, ಮುಂದಿನ ದಿನಗಳಲ್ಲಿ, ವಿಜ್ಞಾನಿಗಳು ಕೈಗೊಳ್ಳುವ ಸಂಶೋಧನೆಗಳನ್ನು ಅವರಿಗೆ ತಲುಪಿಸುವ ಯೋಜನೆ ಹೊಂದಿದೆ’ ಎಂದು ಅವರು ವಿವರಿಸಿದರು.

‘ಪ್ರತಿ ಮೂರು ತಾಸು ಒಬ್ಬ ಪ್ರಾಧ್ಯಾಪಕ ಅಥವಾ ವಿಜ್ಞಾನಿ ಕಾರ್ಯನಿರ್ವಹಿಸುತ್ತಾರೆ. ಅವರಿಗೆ ತಿಳಿದಿಲ್ಲದ ವಿಷಯವನ್ನು ರೈತರು ಕೇಳಿದರೆ, ಮಾಹಿತಿ ಸಂಗ್ರಹಿಸಿ, ಆ ರೈತನಿಗೆ ಪುನಃ ಕರೆ ಮಾಡಿ ತಿಳಿಸುತ್ತಾರೆ. ಕೃಷಿಕರು ಹೆಚ್ಚು ಬಳಕೆ ಮಾಡಿಕೊಂಡರೆ, ಈ ಕೇಂದ್ರ ಮುಂದುವರಿಯುತ್ತದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT