ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ-ಕುಮಟಾ ಗ್ರಾಮೀಣ ಭಾಗಗಳಿಗೆ ಪರ್ಯಾಯ ರಸ್ತೆ: ಅ.12ರಂದು ಸಭೆ

ಶಿರಸಿ–ಕುಮಟಾ ನಡುವೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ವಡ್ಡಿ ರಸ್ತೆ ಅಭಿವೃದ್ಧಿಗೆ ಒತ್ತಾಯ
Last Updated 10 ಅಕ್ಟೋಬರ್ 2020, 16:37 IST
ಅಕ್ಷರ ಗಾತ್ರ

ಕಾರವಾರ: ಕುಮಟಾ– ಶಿರಸಿ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ಈ ಮಾರ್ಗದಲ್ಲಿ ಅ.12ರಿಂದ ವಾಹನ ಸಂಚಾರವನ್ನು ಒಂದೂವರೆ ವರ್ಷದ ಅವಧಿಗೆ ನಿಷೇಧಿಸಲಾಗಿದೆ. ಈ ರಸ್ತೆಯ ಇಕ್ಕೆಲಗಳಲ್ಲಿರುವ ಗ್ರಾಮಗಳ ಜನರ ಸಂಚಾರಕ್ಕೆ ಪರ್ಯಾಯ ರಸ್ತೆಗಳ ಹುಡುಕಾಟ ಮುಂದುವರಿದಿದೆ.

ಈ ಬಗ್ಗೆ ಸ್ಪಷ್ಟ ನಿರ್ಣಯಕ್ಕೆ ಬರುವ ಸಲುವಾಗಿ ಕುಮಟಾ ಮತ್ತು ಶಿರಸಿಯ ಉಪ ವಿಭಾಗಾಧಿಕಾರಿಗಳು ಅ.12ರಂದು ಸಭೆ ನಡೆಸಲಿದ್ದಾರೆ. ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರ್ಯಾಯ ಮಾರ್ಗಗಳನ್ನು ಗುರುತಿಸಲಾಗುವುದು. ಬಳಿಕವೇ ರಸ್ತೆ ಕಾಮಗಾರಿ ಆರಂಭಿಸಲು ನಿರ್ದೇಶನ ನೀಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಕಾರವಾರಕ್ಕೆ ಯಲ್ಲಾಪುರದ ಮೂಲಕ ಸಾಗಿ ಬಾಳೆಗುಳಿ ಕ್ರಾಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 66ನ್ನು ಸಂಪರ್ಕಿಸಬಹುದು. ಆದರೆ, ಈ ರಸ್ತೆಯಲ್ಲಿ ಬಂದರೆ ಶಿರಸಿ ತಾಲ್ಲೂಕಿನ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಸಾಧ್ಯವಾಗುವುದಿಲ್ಲ. ಹಾಗಾಗಿ ಗ್ರಾಮೀಣ ಭಾಗದ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದೂ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಶಿರಸಿ ತಾಲ್ಲೂಕಿನ ಖೂರ್ಸೆ, ಮಂಜುಗುಣಿ, ದೇವನಹಳ್ಳಿ, ಮತ್ತಿಘಟ್ಟ ಮುಂತಾದ ಗ್ರಾಮಗಳಿಗೆ ಯಲ್ಲಾಪುರ ಮೂಲಕ ಸಂಚರಿಸುವುದು ಬಹಳ ದೂರವಾಗುತ್ತದೆ. ಹಾಗಾಗಿ, ಪ್ರಸಿದ್ಧ ಪ್ರವಾಸಿ ತಾಣ ಯಾಣದ ಮೂಲಕ ಸಾಗಿ ಹಿಲ್ಲೂರು, ಗೋಕರ್ಣ ಸಂಪರ್ಕಿಸುವ ರಾಜ್ಯ ಹೆದ್ದಾರಿ 143ಯನ್ನು ಅಭಿವೃದ್ಧಿಪಡಿಸಿದರೆ ಅನುಕೂಲವಾಗುತ್ತದೆ ಎಂದು ಈ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ರಸ್ತೆಯು ಹೆಸರಿಗೆ ಮಾತ್ರ ರಾಜ್ಯ ಹೆದ್ದಾರಿಯಾಗಿದ್ದು, ವಿವಿಧೆಡೆ ಸಂಪೂರ್ಣ ಹದಗೆಟ್ಟಿದೆ. ಲೋಕೋಪಯೋಗಿ ಇಲಾಖೆಯ ಕಾರವಾರ ವಿಭಾಗದ ಅಂಕೋಲಾ ಮತ್ತು ಶಿರಸಿ ತಾಲ್ಲೂಕುಗಳ ಗಡಿಯಲ್ಲಿ ಸುಮಾರು ಆರು ಕಿ.ಮೀ ರಸ್ತೆ ಅಭಿವೃದ್ಧಿ ಆಗಬೇಕಿದೆ. ಆ ಭಾಗದಲ್ಲಿ ಘಟ್ಟ ಹಾಗೂ ಅರಣ್ಯ ಪ್ರದೇಶವಿದ್ದು, ಬೃಹತ್ ವಾಹನಗಳ ಸಂಚಾರ ಸಾಧ್ಯವಿಲ್ಲ. ಅಲ್ಲದೇ ಕಾಡಿನಲ್ಲಿ ರಸ್ತೆ ವಿಸ್ತರಣೆಗೆ ಅವಕಾಶ ಸಿಗಲಾರದು ಎಂಬುದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಪಿಡಿಒಗಳಿಗೆ ಸೂಚನೆ:ಗ್ರಾಮಗಳಿಗೆ ಪರ್ಯಾಯ ರಸ್ತೆಗಳನ್ನು ಹುಡುಕುವಂತೆ ಶಿರಸಿ ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಶುಕ್ರವಾರ ಹಮ್ಮಿಕೊಂಡ ಸಭೆಯಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಶಿರಸಿಯಿಂದ ಕುಮಟಾ, ಕಾರವಾರ ಮಾರ್ಗದಲ್ಲಿ ದಿನವೂ ಸರಾಸರಿ 180 ಬಸ್‌ಗಳು ಸಂಚರಿಸುತ್ತವೆ. ವಡ್ಡಿ ಘಟ್ಟದ ಮೂಲಕ ಬಸ್ ಸಂಚಾರಕ್ಕೆ ಅವಕಾಶ ನೀಡಬಹುದು. ಉಳಿದಂತೆ ಗ್ರಾಮೀಣ ಭಾಗಕ್ಕೆ ಸ್ವಲ್ಪ ಅಡಚಣೆಯಾಗಲಿದೆ. ಆದಷ್ಟು ಹೆಚ್ಚು ಮಿನಿ ಬಸ್‌ಗಳನ್ನು ಗ್ರಾಮೀಣ ಭಾಗಕ್ಕೆ ಕಳುಹಿಸಬಹುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆಯ ಘಟಕ ವ್ಯವಸ್ಥಾಪಕ ಸಿದ್ಧು ಕಂಕನವಾಡಿ ಸಭೆಗೆ ಮಾಹಿತಿ ನೀಡಿದರು.

‘ಶಿರಸಿ– ಹೆಗಡೆಕಟ್ಟಾ, ಮಂಜುಗುಣಿ ಮಾರ್ಗಗಳ ಮೂಲಕ ಮತ್ತು ಶಿರಸಿ– ಕಾನಸೂರು ಮಾರ್ಗವಾಗಿ ಹೆರೂರು, ಗೋಳಿಮಕ್ಕಿ, ಹೆಗ್ಗರಣಿ, ಅಮ್ಮೀನಳ್ಳಿ, ಬಂಡಲ ಮುಂತಾದ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಬಹುದು’ ಎಂದರು.

* ವಡ್ಡಿ ಮೂಲಕ ಸಾಗುವ ರಸ್ತೆಯ ದುರಸ್ತಿ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಲಾಗಿದೆ. ಅದರ ಖರ್ಚು, ವೆಚ್ಚಗಳ ಅಂದಾಜು ಮಾಹಿತಿಯನ್ನೂ ಅವರಿಗೆ ತಿಳಿಸಿದ್ದೇವೆ.
– ಸತೀಶ ಜಹಗೀರದಾರ್, ಇ.ಇ, ಪಿ.ಡಬ್ಲ್ಯು.ಡಿ. ಕಾರವಾರ ವಿಭಾಗ

* ವಡ್ಡಿ ರಸ್ತೆಯಲ್ಲಿ 18 ಕಿ.ಮೀ ಅಭಿವೃದ್ಧಿಗೆ ಬಾಕಿಯಿತ್ತು. 14 ಕಿ.ಮೀ ಕಾಮಗಾರಿ ಪೂರ್ಣಗೊಂಡಿದ್ದು, ನಾಲ್ಕು ಕಿ.ಮೀ ಅಭಿವೃದ್ಧಿಗೆ ಬಾಕಿಯಿದೆ.
– ಕೃಷ್ಣ ರೆಡ್ಡಿ, ಇ.ಇ. ಪಿ.ಡಬ್ಲ್ಯು.ಡಿ. ಶಿರಸಿ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT