ಬುಧವಾರ, ಮೇ 25, 2022
22 °C
ನರೇಗಾದಲ್ಲಿ ಗುರಿ ಮೀರಿದ ಸಾಧನೆ; ಲಾಭ ಪಡೆದ ಗ್ರಾಮಸ್ಥರು

ಅಭಿವೃದ್ಧಿಗೆ ಮುಂದಡಿ ಇಟ್ಟ ಅಂಡಗಿ

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಅರೆಮಲೆನಾಡು ಪ್ರದೇಶವಾಗಿರುವ ತಾಲ್ಲೂಕಿನ ಅಂಡಗಿ ಗ್ರಾಮ ಪಂಚಾಯ್ತಿಯಲ್ಲಿ ಬೇಸಿಗೆ ಬಂದರೆ ಕುಡಿಯುವ ನೀರಿನ ಅಭಾವವೇ ದೊಡ್ಡ ಸಮಸ್ಯೆ.

ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಡ್ಡ ಗ್ರಾಮ ಕಲಕರಡಿಯಲ್ಲಿ 70ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿನ ಜನರಿಗೆ ಕುಡಿಯಲು ತೊಟ್ಟು ನೀರೂ ಸಿಗದ ಸ್ಥಿತಿ ಇದೆ.

‘ಬೇಸಿಗೆ ಬಂದರೆ ಊರನ್ನೇ ತೊರೆಯಬೇಕು ಅನ್ನಿಸುತ್ತದೆ. ಜಲಮೂಲಗಳೆಲ್ಲ ಬತ್ತಿ ಹೋಗುತ್ತವೆ. ಜಾನುವಾರುಗಳನ್ನು ಕೆರೆಯತ್ತ ಕಳಿಸುತ್ತೇವೆ. ಮನುಷ್ಯರು ಕುಡಿಯುವ ನೀರಿಗೆ ಅಕ್ಕಪಕ್ಕದ ಊರುಗಳಿಗೆ ತೆರಳಬೇಕಾಗುತ್ತದೆ’ ಎಂದು ಸಮಸ್ಯೆ ವಿವರಿಸಿದರು ಕಲಕರಡಿ ಗ್ರಾಮಸ್ಥ ನಾಗರಾಜ ನಾಯ್ಕ.

ಹೆಬ್ಬತ್ತಿ, ಕಲಕರಡಿ, ಕಿರವತ್ತಿ, ಅಂಡಗಿ, ಪಾರ್ಸಿ, ಕ್ಯಾದಗಿಕೊಪ್ಪದಂತಹ ಜನವಸತಿ ಗ್ರಾಮಗಳ ಜತೆಗೆ ಬೆರಳೆಣಿಕೆಯಷ್ಟು ಜನರಿರುವ ಮುಗಿಲಕೊಪ್ಪ, ತಡಗೊಪ್ಪ ಅಂಡಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿವೆ. 970 ಮನೆಗಳಿದ್ದು, ಜನಸಂಖ್ಯೆ 3,784 ರಷ್ಟಿದೆ.

‘ದಶಕಗಳ ಹಿಂದೆ ತಿರುಗಿ ನೋಡಿದರೆ ಅಂಡಗಿ ಕುಗ್ರಾಮದಂತಿತ್ತು. ಈಚಿನ ವರ್ಷಗಳಲ್ಲಿ ರಸ್ತೆ, ಬೀದಿದೀಪಗಳ ಅಳವಡಿಕೆಯಿಂದ ಸೌಕರ್ಯ ಕಂಡಿವೆ. ಗ್ರಾಮಸ್ಥರು ಒಗ್ಗಟ್ಟಾಗಿರುವುದು ಇಲ್ಲಿನ ಇನ್ನೊಂದು ವಿಶೇಷ’ ಎಂದು ಹೇಳಿದವರು ಹೆಬ್ಬತ್ತಿಯ ಸುಬ್ರಹ್ಮಣ್ಯ.

‘ಮಳೆ ಆಶ್ರಿತ ಬೆಳೆಗಳನ್ನು ಬೆಳೆಯುವ ರೈತ ಕುಟುಂಬಗಳು ಹೆಚ್ಚಿವೆ. 15ಕ್ಕೂ ಹೆಚ್ಚು ಕೆರೆಗಳೂ ಗ್ರಾಮದಲ್ಲಿವೆ. ನೀರಾವರಿಗೆ ಇವು ಆಧಾರವಾಗಿದೆ. ಕೆಲವಷ್ಟು ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿಪಡಿಸಿದರೆ ಬೇಸಿಗೆಯಲ್ಲೂ ಬೆಳೆ ತೆಗೆಯಬಹುದು. ಇದರಿಂದ ರೈತರ ಆರ್ಥಿಕಮಟ್ಟವೂ ಸುಧಾರಣೆ ಕಾಣಬಹುದು’ ಎಂಬುದು ಕಿರವತ್ತಿಯ ರಾಘವೇಂದ್ರ ನಾಯ್ಕ ಅಭಿಪ್ರಾಯ.

‘ನರೇಗಾ ಯೋಜನೆ ಸದ್ಬಳಕೆ ಮಾಡಿಕೊಂಡು ಗ್ರಾಮಸ್ಥರಿಗೆ ಅಗತ್ಯ ಸೌಕರ್ಯ ಒದಗಿಸುವ ಪ್ರಯತ್ನವಾಗಿದೆ. 10,500 ಮಾನವ ದಿನಗಳನ್ನು ಕಳೆದ ವರ್ಷ ನಿಡಲಾಗಿತ್ತಾದರೂ ಅದನ್ನೂ ಮೀರಿ 12,500 ಮಾನವ ದಿನಗಳಷ್ಟು ಕೆಲಸ ಮಾಡಲಾಗಿದೆ’ ಎಂದು ಪಿಡಿಒ ಪರಶುರಾಮ ಮಲವಳ್ಳಿ ನರೇಗಾ ಸಾಧನೆ ವಿವರಿಸಿದರು.

‘ಹೆಬ್ಬತ್ತಿಯ ಕ್ಯಾದಗಿ ಮುಂಡಿಗೆಕಟ್ಟೆ ಕೆರೆ ಹೂಳೆತ್ತಲಾಗಿದೆ. ಅದರಿಂದ ಸುತ್ತಮುತ್ತ ಜಲಮೂಲಗಳು ಅಭಿವೃದ್ಧಿ ಕಂಡಿವೆ. ಪ್ರತಿ ಗ್ರಾಮದಲ್ಲಿ ತಲಾ ಒಂದು ಕಾಂಕ್ರೀಟ್ ತೊಟ್ಟಿ ನಿರ್ಮಿಸಲಾಗಿದೆ. ಇದರಿಂದ ಬೇಸಿಗೆಯಲ್ಲಿ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಅನುಕೂಲವಾಗಿದೆ. ಹಲವು ಗ್ರಾಮಗಳಿಗೆ ರಸ್ತೆ ಅಭಿವೃದ್ಧಿಪಡಿಸಿಕೊಡಲಾಗಿದೆ’ ಎಂದು ವಿವರಿಸಿದರು.

ಏತ ನೀರಾವರಿ ಯೋಜನೆ ಬಳಕೆ:

‘ಕಲಕರಡಿ ಗ್ರಾಮಕ್ಕೆ ನೀರು ಒದಗಿಸಲು ನಾಲ್ಕಾರು ಕೊಳವೆ ಬಾವಿಯನ್ನೂ ಕೊರೆಯಿಸಲಾಗಿತ್ತು. ವರ್ಷದೊಳಗೆ ಅವು ಬತ್ತಿ ಹೋದವು. ಸಮೀಪದಲ್ಲಿ ಕಾರ್ಯಗತವಾಗಿರುವ ಏತನೀರಾವರಿ ಯೋಜನೆಯ ಒಡ್ಡಿನಿಂದ ಶುದ್ಧೀಕರಿಸಿದ ನೀರನ್ನು ಒದಗಿಸುವ ಪ್ರಸ್ತಾವ ಇಡಲಾಗಿದೆ’ ಎನ್ನುತ್ತಾರೆ ಪಿಡಿಒ ಪರಶುರಾಮ ಮಲವಳ್ಳಿ.

‘ಅಂಡಗಿ ಗ್ರಾಮ ಪಂಚಾಯ್ತಿಯನ್ನು ಅಭಿವೃದ್ಧಿಯಲ್ಲಿ ಮಾದರಿಯಾಗಿಸುವ ನಿಟ್ಟಿನಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಲಾಗುತ್ತಿದೆ. ಗ್ರಾಮದ ಮುಖ್ಯರಸ್ತೆಯುದ್ದಕ್ಕೂ ಅಲಂಕಾರಿಕ ಹೂವಿನ ಗಿಡಗಳನ್ನು ಬೆಳೆಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದ್ದೇವೆ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಸುದರ್ಶನ ನಾಯ್ಕ ಹೇಳಿದರು.

---------------

ನರೇಗಾ ಯೋಜನೆ ಮೂಲಕ ರಸ್ತೆ ಅಭಿವೃದ್ಧಿ, ಇಂಗುಗುಂಡಿ ನಿರ್ಮಾಣದಂತಹ ಸಣ್ಣಪುಟ್ಟ ಸೌಕರ್ಯ ಒದಗಿಸಲಾಗುತ್ತಿದೆ.

ಪರಶುರಾಮ ಮಲವಳ್ಳಿ, ಅಂಡಗಿ ಗ್ರಾ.ಪಂ. ಪಿಡಿಒ

---------------

ಗ್ರಾಮದಲ್ಲಿ ಬಡ ಕುಟುಂಬಗಳು ಸಾಕಷ್ಟಿದ್ದು, ಸರ್ಕಾರದ ವಸತಿ ಯೋಜನೆ ಅನುದಾನಕ್ಕೆ ಕಾಯುತ್ತಿವೆ. ಅನುದಾನ ದೊರೆತರೆ ಅನುಕೂಲವಾಗುತ್ತದೆ.

ಸುದರ್ಶನ ನಾಯ್ಕ, ಅಂಡಗಿ ಗ್ರಾ.ಪಂ ಸದಸ್ಯ

––––––––––––

ಅಂಕಿ–ಅಂಶ

8: ಗ್ರಾಮಗಳ ಸಂಖ್ಯೆ

970: ಒಟ್ಟೂ ಮನೆಗಳು

3784: ಅಂಡಗಿ ಗ್ರಾ.ಪಂ. ಜನಸಂಖ್ಯೆ

12,500: ನರೇಗಾ ಅಡಿ ಮಾನವ ದಿನಗಳ ಸಾಧನೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು