ಸೋಮವಾರ, ಜನವರಿ 20, 2020
29 °C
‘ಮೂಲ ಬುಡಕಟ್ಟು ಜನಾಂಗ’ವೆಂದು ಘೋಷಿಸಲು ಸಿದ್ದಿ ಸಮುದಾಯದವರ ಆಗ್ರಹ

‘ಉತ್ತರ ಕನ್ನಡ ಬುಡಕಟ್ಟು ಜಿಲ್ಲೆಯಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಉತ್ತರ ಕನ್ನಡ ಜಿಲ್ಲೆಯನ್ನು ಬುಡಕಟ್ಟು ಜಿಲ್ಲೆ ಎಂದು ಘೋಷಿಸಬೇಕು. ಸಿದ್ದಿ ಸಮುದಾಯವನ್ನು ಗುಜರಾತ್ ಮಾದರಿಯಲ್ಲಿ ಮೂಲ ಬುಡಕಟ್ಟು ಜನಾಂಗ ಎಂದು ಗುರುತಿಸಬೇಕು’ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸಿದ್ದಿ ಸಮುದಾಯದವರು ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡರು.

ಅಖಿಲ ಕರ್ನಾಟಕ ಸಿದ್ದಿ ಸಮಾಜ ಪ್ರತಿಷ್ಠಾನ ಟ್ರಸ್ಟ್‌ ನೇತೃತ್ವದಲ್ಲಿ ಸಮುದಾಯದ ಸದಸ್ಯರು ಮಾಲಾದೇವಿ ಮೈದಾನದಲ್ಲಿ ಸಭೆ ಸೇರಿದರು. ಬಳಿಕ ಘೋಷಣೆ ಕೂಗುತ್ತ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ಸಾಗಿಬಂದರು.

ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ದಿಯೋಗ ಬಿ.ಸಿದ್ದಿ, ‘ಮೋಸದಿಂದ ಬೇರೆಯವರು ಪಡೆದಿರುವ ಸಮುದಾಯದ ಜಮೀನನ್ನು ವಾಪಸ್ ಕೊಡಿಸಬೇಕು. ಉತ್ತರ ಕನ್ನಡ ಜಿಲ್ಲೆಯ ಮಾದರಿಯಲ್ಲೇ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ ಸಮುದಾಯದ ಸದಸ್ಯರನ್ನು ಪರಿಶಿಷ್ಟ ಸಮುದಾಯಕ್ಕೆ ಸೇರಿಸಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ಆದರೆ, ಇದಕ್ಕೆ ರಾಷ್ಟ್ರಪತಿ ಅಂಕಿತ ಇನ್ನೂ ಬಾಕಿಯಿದೆ. ಆದಷ್ಟು ಬೇಗ ಈ ಕಾರ್ಯ ಆಗಬೇಕು’ ಎಂದು ಒತ್ತಾಯಿಸಿದರು. 

‘ಅರಣ್ಯ ಹಕ್ಕು ಕಾಯ್ದೆ 2006 ಹಾಗೂ ತಿದ್ದುಪಡಿ 2012 ಸಿದ್ದಿ ಸಮುದಾಯದವರಿಗೆ ಹಕ್ಕುಪತ್ರ ಮಾನ್ಯ ಮಾಡಬೇಕು. ನಮ್ಮ ಸಮುದಾಯದ ಯುವಕ, ಯುವತಿಯರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ವಿಶೇಷ ಮೀಸಲಾತಿ ನೀಡಬೇಕು. ಸಮುದಾಯದವರಿಗೆ ಸ್ವ ಉದ್ಯೋಗಕ್ಕೆ ಅವಕಾಶ ಕಲ್ಪಿಸಬೇಕು. ಸಿದ್ದಿ ಬುಡಕಟ್ಟು ಸಮುದಾಯದವರಿಗೆ ವಿವಿಧ ಇಲಾಖೆಗಳಲ್ಲಿ ಕ್ರೋಡೀಕರಿಸಿದ ಅನುದಾನದ ಸದ್ಬಳಕೆಯಾಗಬೇಕು’ ಎಂದು ಅವರು ಒತ್ತಾಯಿಸಿದರು.

‘ಸಿದ್ದಿ ಮಹಿಳೆಯರಿಗೆ ಸ್ವ ಉದ್ಯೋಗ ಆರಂಭಿಸಲು ಸರ್ಕಾರದ ಇಲಾಖೆಗಳಿಂದ ಸಹಾಯ ಧನ ನೀಡಬೇಕು. ಸಮುದಾಯಕ್ಕೆ ಅನುಕೂಲವಾಗುವಂತೆ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳನ್ನು ನೇಮಿಸಬೇಕು. ಸಮುದಾಯಕ್ಕೆ ಪೌಷ್ಟಿಕ ಆಹಾರವನ್ನು ಸಮರ್ಪಕವಾಗಿ ವಿತರಿಸಬೇಕು’ ಎಂದು ಮನವಿ ಮಾಡಿದರು. 

‘ಸಿದ್ದಿ ಬುಡಕಟ್ಟು ಸಮುದಾಯಕ್ಕೆ ಸೇರಿರುವ ಎರಡು ಲ್ಯಾಂಪ್ಸ್ ಸಹಕಾರ ಸಂಘಗಳ ಮೂಲಕ ಸಮುದಾಯದ ಅಭಿವೃದ್ಧಿ ಕಾರ್ಯವಾಗಬೇಕು. ಅಲ್ಲದೇ ನಮ್ಮ ಸಮುದಾಯದ ಹೆಸರಿನಲ್ಲಿ ಮಂಜೂರಾದ ಆರೋಗ್ಯ ಸಂಚಾರ ವಾಹನದ ಯೋಜನೆಯನ್ನು ಸಿದ್ದಿಗಳಿರುವ ಎಲ್ಲ ಹಳ್ಳಿಗಳಿಗೂ ವಿಸ್ತರಿಸಬೇಕು. ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡದ ದೌರ್ಜನ್ಯ ಕಾಯ್ದೆಯಡಿ ದಾಖಲಾದ ಪ್ರಕರಣಗಳನ್ನು ಸಮರ್ಪಕವಾಗಿ ತನಿಖೆ ಮಾಡಬೇಕು’ ಎಂದು ಆಗ್ರಹಿಸಿದರು.

‘ದುರ್ಬಳಕೆ ತಡೆಯಿರಿ’: ‘ಸಿದ್ದಿ ಸಮುದಾಯದ ಹೆಸರಿನಲ್ಲಿ ವಿವಿಧ ಸರ್ಕಾರೇತರ ಸಂಘ ಸಂಸ್ಥೆಗಳು ಪಡೆಯುತ್ತಿರುವ ಅನುದಾನದ ದುರ್ಬಳಕೆಯನ್ನು ತಡೆಯಬೇಕು. ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿ ಹಳಿಯಾಳ, ಯಲ್ಲಾಪುರ, ಮುಂಡಗೋಡ ಹಾಗೂ ಅಂಕೋಲಾ ತಾಲ್ಲೂಕುಗಳಲ್ಲಿ ಅಧಿಕಾರಿಗಳನ್ನು ನೇಮಿಸಬೇಕು’ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ತಹಶೀಲ್ದಾರ್ ಆರ್.ವಿ.ಕಟ್ಟಿ ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಹಳಿಯಾಳ, ಯಲ್ಲಾಪುರ, ಅಂಕೋಲಾ, ಶಿರಸಿ, ಜೊಯಿಡಾ ತಾಲ್ಲೂಕುಗಳ ಸಿದ್ದಿ ಸಮುದಾಯದ ಸದಸ್ಯರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು