ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೇವಾಸಿಂಧು’ ಮೂಲಕ ಅರ್ಜಿ ಸಲ್ಲಿಕೆ ಕಡ್ಡಾಯ: ಗೋವಾದಿಂದ ಬರುವವರ ಆರೋಗ್ಯ ತಪಾಸಣೆ

ಮಾಜಾಳಿ ಚೆಕ್‌ಪೋಸ್ಟ್‌ ಮೂಲಕ ಗೋವಾದಿಂದ ಬರುವವರ ಪರಿಶೀಲನೆ ಆರಂಭ
Last Updated 7 ಮೇ 2020, 5:25 IST
ಅಕ್ಷರ ಗಾತ್ರ

ಕಾರವಾರ: ‘ಮಾಜಾಳಿ ಚೆಕ್‌ಪೋಸ್ಟ್ ಮೂಲಕ ಗೋವಾದಿಂದ ಕರ್ನಾಟಕದ ಒಳಗೆ ಬರಲು ಎಲ್ಲರೂ ಸೇವಾಸಿಂಧು ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಲೇಬೇಕು. ಉತ್ತರ ಕನ್ನಡ ಜಿಲ್ಲೆಯವರಿಗಾಗಿ ಗಡಿಯಲ್ಲಿ ಸೇವಾಸಿಂಧು ಕೌಂಟರ್ ತೆರೆಯಲಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ತಿಳಿಸಿದ್ದಾರೆ.

‘ಗೋವಾದಿಂದ ಕರ್ನಾಟಕಕ್ಕೆ ಬರುವವರಲ್ಲಿ ಉತ್ತರ ಕನ್ನಡದವರು, ರಾಜ್ಯದ ಇತರ ಜಿಲ್ಲೆಗಳವರು ಹಾಗೂ ಹೊರರಾಜ್ಯದವರು ಎಂಬ ಮೂರು ರೀತಿಯ ಜನರಿದ್ದಾರೆ. ಅವರಲ್ಲಿ ಬೇರೆ ಜಿಲ್ಲೆಯವರು ಕಡ್ಡಾಯವಾಗಿ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಲೇಬೇಕು. ಅಲ್ಲದೇ ಅವರ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆ ಅರ್ಜಿಗಳನ್ನು ತಂತ್ರಾಂಶದಲ್ಲಿ ಸ್ವೀಕರಿಸಬೇಕು. ಇಲ್ಲದಿದ್ದರೆ ಅವರನ್ನು ರಾಜ್ಯದ ಗಡಿಯೊಳಗೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಜಿಲ್ಲೆಗೆ ಇಡೀ ರಾಜ್ಯದ ಜನರನ್ನು ಸೇರಿಸಿಕೊಳ್ಳುವ ಸಾಮರ್ಥ್ಯವಿಲ್ಲ. ಈ ನಿಟ್ಟಿಯಲ್ಲಿ ತಕ್ಷಣವೇ ಅನುಮತಿ ನೀಡಲು ಇತರ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.

‘ಹೊರ ರಾಜ್ಯಗಳಿಗೆ ಹೋಗುವವರುಅವರ ರಾಜ್ಯಗಳ ಯಾವುದೇ ಅನುಮತಿಹೊಂದಿದ್ದರೂಒಂದು ಕಡೆಯ ಸಂಚಾರಕ್ಕೆ ಒಂದು ಸಲದ ಪಾಸ್ ಕೊಡಲಾಗುತ್ತದೆ. ಅವರು ನಮ್ಮ ಜಿಲ್ಲೆಯಲ್ಲಿ ಎಲ್ಲೂ ನಿಲ್ಲುವಂತಿಲ್ಲ. ಅವರು ನಿಗದಿತಅವಧಿಯಲ್ಲಿ ಜಿಲ್ಲೆಯ ಗಡಿ ದಾಟಬೇಕು. ಈ ಬಗ್ಗೆ ನಮ್ಮ ನಿಯಂತ್ರಣ ಕೊಠಡಿಯ ಮೂಲಕ ಎಲ್ಲ ಚೆಕ್‌ಪೋಸ್ಟ್‌ಗಳಿಗೆ ಮಾಹಿತಿ ನೀಡಲಾಗಿದೆ.ಒಂದುವೇಳೆ, ನಿಯಮ ಉಲ್ಲಂಘನೆಯಾದರೆ ಪೊಲೀಸ್ ತನಿಖೆ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.

‘ಗೋವಾದಿಂದ ನಮ್ಮ ರಾಜ್ಯಕ್ಕೆ ಬರಲು ಸಿದ್ಧವಾಗಿರುವವರ 5 ಸಾವಿರ ಜನರ ಪಟ್ಟಿ ಅಲ್ಲಿನ ನೋಡಲ್ ಅಧಿಕಾರಿಯ ಬಳಿಯಿದೆ. ಅವರಲ್ಲಿ ಒಂದು ಸಾವಿರ ಜನ ಮಾತ್ರ ಸೇವಾಸಿಂಧುವಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಒಂದು ದಿನಕ್ಕೆ 200ರಿಂದ 300 ಜನರನ್ನು ಐದು ದಿವಸಗಡಿಯಲ್ಲಿ ಸ್ವೀಕರಿಸುವುದಾಗಿ ಗೋವಾಕ್ಕೆ ತಿಳಿಸಲಾಗಿದೆ.ಒಂದುವೇಳೆ ಹೆಚ್ಚು ಜನರು ಸೇವಾ ಸಿಂಧುದಲ್ಲಿ ಅರ್ಜಿ ಸಲ್ಲಿಸಿದರೂನಮ್ಮಲ್ಲಿಬೇಕಾದ ವ್ಯವಸ್ಥೆಯಿದ್ದು, ಸಮಸ್ಯೆಯಿಲ್ಲ’ ಎಂದು ಮಾಹಿತಿ ನೀಡಿದರು.

‘ಕಿಟ್‌ಗಳ ಕೊರತೆಯಿಲ್ಲ’:ಜಿಲ್ಲೆಗೆ ರಾಜ್ಯ ಸರ್ಕಾರವು ಮಂಗಳವಾರ ರಾತ್ರಿ 2,300 ವಿ.ಟಿ.ಎಂ ಕಿಟ್‌ಗಳನ್ನು ಕಳುಹಿಸಿದೆ. ಹಾಗಾಗಿ ಒಂದೇ ಸಲಕ್ಕೆ ಇಷ್ಟು ಸಂಖ್ಯೆಯ ಜನರ ಗಂಟಲುದ್ರವದ ಮಾದರಿಯನ್ನು ತೆಗೆದು ಪರೀಕ್ಷೆಗೆ ಕಳುಹಿಸಲು ಸಾಧ್ಯವಿದೆ. ಜಿಲ್ಲೆಯಲ್ಲಿ ಕಿಟ್‌ಗಳ ಕೊರತೆಯಿಲ್ಲ ಎಂದು ರೋಶನ್ಸ್ಪಷ್ಟಪಡಿಸಿದ್ದಾರೆ.

ಮಾಜಾಳಿ ಮೂಲಕ ಬುಧವಾರ ಸುಮಾರು 200 ಮಂದಿ ರಾಜ್ಯವನ್ನು ಪ್ರವೇಶಿಸಿದ್ದಾರೆ. ಅವರಿಗೆ ಊಟ, ತಿಂಡಿ, ನೀರು, ಎಂಟು ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯವರಿಗಾಗಿ ವಿಶೇಷ ಕೌಂಟರ್:ಗೋವಾದಲ್ಲಿರುವ ಉತ್ತರ ಕನ್ನಡದವರುಸೇವಾಸಿಂಧುವಿನಲ್ಲಿ ಅರ್ಜಿ ಸಲ್ಲಿಸದೇ ಇದ್ದರೂ ಅವರಿಗೆ ತೊಂದರೆಯಾಗದಂತೆ ಗಡಿಯಲ್ಲಿ ಮೂರು ಕೌಂಟರ್‌ಗಳನ್ನು ತೆರೆಯಲಾಗಿದೆ. ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಮೊಹಮ್ಮದ್ ರೋಶನ್ ಸ್ಪಷ್ಟಪಡಿಸಿದ್ದಾರೆ.

ಅವರ ಪ್ರವೇಶ, ವೈದ್ಯಕೀಯ ತಪಾಸಣೆ, ನಂತರ ಬಸ್ ಹತ್ತಿಸಿ ಅವರ ತಾಲ್ಲೂಕು ಆಸ್ಪತ್ರೆಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲೂ ಅವರಿಗೆ ಪುನಃ ಆರೋಗ್ಯ ತಪಾಸಣೆ ಮಾಡಿ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಉಳಿದಂತೆ, ಮಾಜಾಳಿಯಲ್ಲಿ 150 ಅಡಿ ಉದ್ದದ ಟೆಂಟ್ ಅಳವಡಿಸಲಾಗಿದ್ದು, ಸಿಬ್ಬಂದಿಯ ಆರು ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ತಂಡವೂ ತಾಸಿಗೆ 20 ಜನರನ್ನು ಪರಿಶೀಲಿಸುವ ಸಾಮರ್ಥ್ಯ ಹೊಂದಿದೆ. ಐದರಿಂದ ಆರು ತಾಸುಗಳಲ್ಲಿ 600 ಜನರ ತಪಾಸಣೆ ಮಾಡಲು ಸಾಧ್ಯವಿದೆ ಎಂದು ತಿಳಿಸಿದರು.

ಅಧಿಕಾರಿಗಳು ಗಡಿಯಲ್ಲೇ ಮೊಕ್ಕಾಂ: ಜಿಲ್ಲೆಗೆ ಬರಲು ಸಿದ್ಧವಾಗಿರುವ ಜನರನ್ನು ಸೇರಿಸಿಕೊಳ್ಳಲು ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ಉಪ ವಿಭಾಗಾಧಿಕಾರಿಪ್ರಿಯಾಂಗಾ, ತಹಶೀಲ್ದಾರ್ ವಿ.ಆರ್.ಕಟ್ಟಿಸೇರಿದಂತೆ ವಿವಿಧ ಅಧಿಕಾರಿಗಳು ಮಂಗಳವಾರ ರಾತ್ರಿ ಅಲ್ಲೇ ಉಳಿದುಕೊಂಡು ಉಸ್ತುವಾರಿ ನೋಡಿಕೊಂಡರು.

ಗೋವಾದಿಂದ ಕರ್ನಾಟಕಕ್ಕೆ ಬರಲು ಬಯಸುವವರು ‘ಸೇವಾಸಿಂಧು’ವಿನಲ್ಲಿ ಅರ್ಜಿ ಸಲ್ಲಿಸಿದ್ದರೆ ಪ್ರಕ್ರಿಯೆ ಸುಲಭವಾಗುತ್ತದೆ. ಇಲ್ಲದಿದ್ದರೆ ಬಹಳ ಉದ್ದದ ಸರದಿಯಲ್ಲಿ ನಿಲ್ಲಬೇಕಾಗುತ್ತದೆ ಎಂದು ಜಿ.ಪಂ. ಸಿಇಒಮೊಹಮ್ಮದ್ ರೋಶನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT