ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕದ ಹಿಂದಿನ ಭೀಕರ ಬರ ನೆನೆ‍ಪಿಸುತ್ತಿದೆ ಬೇಸಿಗೆ: ದುಡ್ಡು ಕೊಟ್ಟರೂ ಸಿಗದ ಜೀವಜಲ

Last Updated 13 ಮೇ 2019, 19:45 IST
ಅಕ್ಷರ ಗಾತ್ರ

ಭಟ್ಕಳ:2009ರಲ್ಲಿ ನೀರಿಗಾಗಿ ಉಂಟಾಗಿದ್ದ ಭೀಕರ ಹಾಹಾಕಾರ, ತಾಲ್ಲೂಕಿನಲ್ಲಿ ಈ ವರ್ಷ ಮರುಕಳಿಸುತ್ತಿರುವ ಆತಂಕ ಮೂಡಿದೆ. ಆ ವರ್ಷ ಜೂನ್ ತಿಂಗಳ ಅಂತ್ಯದವರೆಗೂ ಮಳೆಯಾಗಿರಲಿಲ್ಲ. ಈಗಿನ ಬಿಸಿಲಿನ ಪ್ರಮಾಣಕ್ಕೆ ಜಲಮೂಲಗಳು ಸಂಪೂರ್ಣವಾಗಿ ಒಣಗುತ್ತಿದ್ದು, ಪ್ರಾಣಿ, ಪಕ್ಷಿಗಳೂ ನೀರಿಗೆ ಹುಡುಕಾಟ ನಡೆಸುತ್ತಿವೆ.

ಪಟ್ಟಣದಲ್ಲಿ ಸೋಮವಾರದ ಉಷ್ಣಾಂಶ 36 ಡಿಗ್ರಿ ಸೆಲ್ಷಿಯಸ್ ದಾಖಲಾಗಿತ್ತು. ಮನೆಯೊಳಗೆ ಕುಳಿತರೆ ಬಿಸಿಗಾಳಿ, ಹೊರಗೆ ಬಂದರೆ ಮೈಸುಡುವ ಬಿಸಿಲು. ಧಗೆಯಿಂದ ಬಸವಳಿದ ಜನ, ಸಂಜೆಯ ನಂತರವೇ ಹೆಚ್ಚು ಓಡಾಟ ನಡೆಸುತ್ತಿದ್ದಾರೆ. ಜಲಮೂಲಗಳುಶೇ 70ರಷ್ಟು ಬತ್ತಿಹೋಗಿದ್ದು, ಜನರೊಂದಿಗೆ ಪ್ರಾಣಿ, ಪಕ್ಷಿಗಳು ನೀರಿಗಾಗಿ ಅಲೆದಾಡಲು ಶುರುಮಾಡಿವೆ. ತಳದಲ್ಲಿ ನೀರು ಉಳಿದಿರುವ ಕೆರೆ, ನದಿ, ಬಾವಿಗಳ ಸುತ್ತಮುತ್ತ ಪ್ರಾಣಿ, ಪಕ್ಷಿಗಳು ತಿರುಗಾಡುತ್ತಿವೆ.

ಬತ್ತಿದ ಜಲಮೂಲ

ತಾಲ್ಲೂಕಿನಾದ್ಯಂತ ಇರುವ ಕಡವಿನಕಟ್ಟೆ, ಚೌಥನಿಯ ಶರಾಬಿ ನದಿಗಳು, ಐತಿಹಾಸಿಕ ಕೋಗ್ತಿಕೆರೆ ಒಣಗಿವೆ. ಅವುಗಳ ಹಲವು ಉಪನದಿಗಳು ಬತ್ತಿಹೋಗಿ ಹೂಳು, ಕಲ್ಲುಮಣ್ಣು ಕಾಣುತ್ತಿವೆ. ಉತ್ತರಕನ್ನಡ ಜಿಲ್ಲೆಯ ಚಿರಾಪುಂಜಿ ಎಂದೇ ಹೆಸರಾಗಿರುವ ಭಟ್ಕಳ ತಾಲ್ಲೂಕಿನಲ್ಲಿ ಮಳೆ ಸಾಕಷ್ಟು ಬೀಳುತ್ತದೆ. ಆದರೆ, ‌ಅದನ್ನು ಹಿಡಿದಿಟ್ಟುಕೊಳ್ಳುವ ಯೋಜನೆಯನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ರೂಪಿಸಿಲ್ಲ ಎಂದು ಸಮಾಜ ಸೇವಕ ಇನಾಯತ್ ಗವಾಯ್ಅವರ ಆರೋಪವಾಗಿದೆ.

ಭಟ್ಕಳ ಪಟ್ಟಣದ ಹಲವೆಡೆ ಮುಸ್ಲಿಮ್ ಯೂಥ್ ಫೆಡರೇಶನ್ ವತಿಯಿಂದ ಉಚಿತ ನೀರು ಸರಬರಾಜು ಮಾಡುತ್ತಿರುವುದು.
ಭಟ್ಕಳ ಪಟ್ಟಣದ ಹಲವೆಡೆ ಮುಸ್ಲಿಮ್ ಯೂಥ್ ಫೆಡರೇಶನ್ ವತಿಯಿಂದ ಉಚಿತ ನೀರು ಸರಬರಾಜು ಮಾಡುತ್ತಿರುವುದು.

‘ಇಲ್ಲಿ ಇರುವ ಚಿಕ್ಕ ನೀರಾವರಿ ಇಲಾಖೆ ಕಚೇರಿ ಅಧಿಕಾರಿಗಳೂ ಅಂತರ್ಜಲ ಮಟ್ಟ ಹೆಚ್ಚಿಸುವ ಕೆಲಸ ಮಾಡಿಲ್ಲ. ಕೆರೆಗಳ ನಿರ್ಮಾಣ, ಹೂಳೆತ್ತುವ ಕಾರ್ಯಕ್ಕೆ ಮುಂದಾಗಿಲ್ಲ. ಇಲ್ಲಿ ಇಲಾಖೆಯ ಅಧಿಕಾರಿ ಯಾರು ಎಂದೂ ಗೊತ್ತಾಗುತ್ತಿಲ್ಲ. ಕಡವಿನಕಟ್ಟೆಯ ಅಣೆಕಟ್ಟೆ ಎತ್ತರಿಸಬೇಕು ಎಂಬು ಕೂಗು ಬಹಳ ವರ್ಷಗಳಿಂದ ಕೇಳಿ ಬರುತ್ತಿದೆ. ಆ ಕೆಲಸ ಇನ್ನೂ ಆಗಿಲ್ಲ’ ಎಂ‌ಬ ಬೇಸರವೂ ಹಲವರದ್ದಾಗಿದೆ.

ಬೇಸಿಗೆ ಬಂದಾಗಷ್ಟೇ ನೀರಿನ ಸಮಸ್ಯೆಯ ಬಗ್ಗೆ ನೆನಪಾಗುತ್ತದೆ. ಆದರೆ,ಮಳೆ ಶುರುವಾದೊಡನೆ ಎಲ್ಲರೂ ಮರೆಯತ್ತಾರೆ. ಮತ್ತೆಸಮಸ್ಯೆನೆನಪಾಗುವುದು ಮುಂದಿನ ಬೇಸಿಗೆಯಲ್ಲೇ ಎಂದು ಇನಾಯತ್ ಅಸಮಾಧಾನ ವ್ಯಕ್ತಪಡಿಸಿದರು.

ಜಾನುವಾರಿಗೆ ಟ್ಯಾಂಕರ್ ನೀರು

ಬಿಸಿಲಿಗೆ ಜೊಲ್ಲು ಸುರಿಸುತ್ತ ಬಸವಳಿದ ಶ್ವಾನಗಳು, ಸಮುದ್ರ ತೀರಕ್ಕೆ ತೆರಳಿ ಉಪ್ಪುನೀರಿಗೆ ಮೈಯೊಡ್ಡಿ ತಂಪು ಮಾಡಿಕೊಳ್ಳುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ನೀರಿನ ಅಭಾವದಿಂದ ಸಾಕಿದ ಜಾನುವಾರಿಗೆ ನೀರುಣಿಸಲು ದುಡ್ಡು ಕೊಟ್ಟು ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಿಕೊಳ್ಳಲಾಗುತ್ತಿದೆ.

‘750 ಲೀಟರ್ ಟ್ಯಾಂಕರ್ ನೀರಿಗೆ ₹ 300 ಕೊಡಬೇಕಾಗಿದೆ. ಅದು ಒಂದು ದಿನಕ್ಕೂ ಸಾಕಾಗುವುದಿಲ್ಲ. ಅಲ್ಲದೇ ನಾವು ಕೇಳಿದ ವೇಳೆಗೆ ನೀರು ಸಿಗುವುದಿಲ್ಲ. ಇನ್ನು ಸ್ವಲ್ಪ ದಿನದಲ್ಲಿ ಮಳೆ ಬಾರದೇ ಇದ್ದರೆ ದುಡ್ಡು ಕೊಟ್ಟರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಲಿದೆ’ ಎಂದು ಹೈನುಗಾರ ಮಂಜುನಾಥ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT