ಸೋಮವಾರ, ಮಾರ್ಚ್ 8, 2021
29 °C
ನಡೆಯ ಕುರಿತು ಕಾಂಗ್ರೆಸ್‌ಗಿಂತ ಬಿಜೆಪಿಯಲ್ಲೇ ಜೋರು ಚರ್ಚೆ

ಕುಟುಂಬ ಸೇರಲಿರುವ ನಾಯಕ ಶಿವರಾಮ ಹೆಬ್ಬಾರ್‌ಗೆ ಮನೆಯಲ್ಲೇ ವಿರೋಧ !

ಸಂಧ್ಯಾ ಹೆಗಡೆ ಆಲ್ಮನೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಯಲ್ಲಾಪುರ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ ರಾಜೀನಾಮೆ ನೀಡಿರುವುದು ಕ್ಷೇತ್ರದ ಜನರಿಗೆ ಅಚ್ಚರಿಯೇನು ಮೂಡಿಸಿಲ್ಲ. ನಾಲ್ಕಾರು ತಿಂಗಳುಗಳಿಂದ ಹರಿದಾಡುತ್ತಿದ್ದ ಗುಸುಗುಸು ಸುದ್ದಿಗೆ ಪೂರ್ಣವಿರಾಮ ಬಿದ್ದಿದೆಯಷ್ಟೆ.

ಹೆಬ್ಬಾರ್ ರಾಜೀನಾಮೆ, ಕಾಂಗ್ರೆಸ್‌ಗಿಂತ ಬಿಜೆಪಿ ಪಾಳೆಯದಲ್ಲೇ ಹೆಚ್ಚು ಆತಂಕ ಮೂಡಿಸಿದೆ. ಆಪರೇಷನ್ ಕಮಲದ ಪ್ರತಿ ಬಾರಿ ವಿಫಲಗೊಂಡಾಗ ನಿರಾಳರಾಗುತ್ತಿದ್ದವರು ಬಿಜೆಪಿ ಕಾರ್ಯಕರ್ತರು. ಹೆಬ್ಬಾರ್ ಸದ್ಯ ಬಿಜೆಪಿಗೆ ಬರುವುದಿಲ್ಲವೆಂಬುದು ಅವರ ನಿರಾಳತೆಗೆ ಕಾರಣವಾಗಿತ್ತು. ಆದರೆ, ಈಗ ಅವರು ಪಕ್ಷಕ್ಕೆ ಬರುವುದು ನಿಷ್ಠಾವಂತ ಕಾರ್ಯಕರ್ತರಿಗೆ ನುಂಗಲಾರದ ತುತ್ತಾಗಿದೆ. ಹೆಬ್ಬಾರ್ ಮೇಲಿನ ಮುನಿಸಿನಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡವರು, ಈಗ ಗೊಂದಲಕ್ಕೆ ಸಿಲುಕಿದ್ದಾರೆ.

ಹಿಂದಿನ ಅವಧಿಯಲ್ಲಿ  ಐವರು ಶಾಸಕರನ್ನು ಹೊಂದಿದ್ದ ಕಾಂಗ್ರೆಸ್, ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಲ್ಲಾಪುರ, ಹಳಿಯಾಳ ಈ ಎರಡು ಕ್ಷೇತ್ರಗಳನ್ನು ಮಾತ್ರ ಉಳಿಸಿಕೊಳ್ಳಲು ಸಫಲವಾಗಿತ್ತು. ಹೀಗಾಗಿ, ಆಪರೇಷನ್ ಕಮಲದ ಪ್ರಯತ್ನ ಮೊದಲ ಬಾರಿ ನಡೆದಾಗ ಮತ್ತು ಅದರಲ್ಲಿ ಶಿವರಾಮ ಹೆಬ್ಬಾರ್ ಹೆಸರು ಪ್ರಸ್ತಾಪವಾದಾಗ, ಇರುವ ಎರಡರಲ್ಲಿ ಒಂದು ಸ್ಥಾನವನ್ನು ಕಳೆದುಕೊಳ್ಳುವ ಭಯದಿಂದ ಜಿಲ್ಲೆಯ ಕಾಂಗ್ರೆಸ್ ನಾಯಕರು ವಿಚಲಿತಗೊಂಡಿದ್ದರು. ಪುನರಪಿ ಅವರ ಹೆಸರು ಚಾಲ್ತಿಯಲ್ಲಿದ್ದ ಕಾರಣ, ಕಾಂಗ್ರೆಸ್‌ ಪಕ್ಷ ಹೆಬ್ಬಾರ್ ಪಕ್ಷಾಂತರದ ನಿರೀಕ್ಷೆಯಲ್ಲಿತ್ತು.

ಯಲ್ಲಾಪುರ ಮತ್ತು ಮುಂಡಗೋಡ ತಾಲ್ಲೂಕುಗಳು, ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿಯನ್ನು ಒಳಗೊಂಡಿರುವ ವಿಧಾನಸಭಾ ಕ್ಷೇತ್ರ ಯಲ್ಲಾಪುರ. ಕಳೆದ ಅವಧಿಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ್ದ ಹೆಬ್ಬಾರ್ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರೆ, 2018ರಲ್ಲಿ ನಡೆದ ಚುನಾವಣೆಯಲ್ಲಿ ಪ್ರಯಾಸದ ಗೆಲುವು ಪಡೆದಿದ್ದರು. ಯಲ್ಲಾಪುರ ಮತ್ತು ಮುಂಡಗೋಡ ಭಾಗದಲ್ಲಿ ಹೆಬ್ಬಾರ್ ವಿರೋಧಿ ಗುಂಪು ಸಕ್ರಿಯವಾಗಿದ್ದರೆ, ಅವರನ್ನು ಸದಾ ಬೆಂಬಲಿತ್ತ ಬಂದವರು ಬನವಾಸಿ ಹೋಬಳಿಯ ಜನರು. ಆದರೆ, ಹೆಬ್ಬಾರ್ ಈಗಿನ ನಡೆಯ ಬಗ್ಗೆ ಬನವಾಸಿ ಭಾಗದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಮ್ಮಿಶ್ರ ಅಭಿಪ್ರಾಯಗಳಿವೆ. ಕೆಲವರು ಸಮರ್ಥಿಸಿಕೊಂಡರೆ, ಇನ್ನು ಕೆಲವರು ಅಸಮಾಧಾನವನ್ನು ಬಹಿರಂಗವಾಗಿ ಹೊರ ಹಾಕಲು ಹಿಂದೇಟು ಹಾಕುತ್ತಿದ್ದಾರೆ.

ಬಿಜೆಪಿಯಲ್ಲಿ ಅಸಮಾಧಾನ:

ಹೆಬ್ಬಾರ್ ಜೊತೆ ಹೊಂದಾಣಿಕೆ ಸಾಧ್ಯವಿಲ್ಲವೆಂದು ಬಹಿರಂಗವಾಗಿ ಹೇಳಿದ್ದ ಮುಂಡಗೋಡಿನ ಎಲ್‌.ಟಿ.‍ಪಾಟೀಲ್, ವಿಧಾನ ಸಭೆ ಚುನಾವಣೆ ವೇಳೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಪ್ರಮೋದ ಹೆಗಡೆ ಮತ್ತು ಹೆಬ್ಬಾರ್ ನಡುವಿನ ಆಂತರಿಕ ಮುನಿಸು ಕ್ಷೇತ್ರದ ಜನರಿಗೆ ಹೊಸ ವಿಷಯವೇನಲ್ಲ. ಒಮ್ಮೆ ಶಾಸಕರಾಗಿ, ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ವಿ.ಎಸ್.ಪಾಟೀಲ್ ಪ‍ಕ್ಷದಲ್ಲಿ ಗುರುತಿಸಿಕೊಂಡಿದ್ದರು. ಈ ಎಲ್ಲ ನಾಯಕರು, ಅವರ ಬೆಂಬಲಿಗರಿಗೆ ಹೆಬ್ಬಾರ್ ಸೇರ್ಪಡೆ ಅಸಮಾಧಾನ ಮೂಡಿಸಿದೆ.

‘ಈ ಹಿಂದೆಯೇ ಹೆಬ್ಬಾರ್ ಬಿಜೆಪಿ ಸೇರ್ಪಡೆ ಪ್ರಸ್ತಾಪವಾದಾಗ ಪಕ್ಷದ ಆಂತರಿಕ ಸಭೆಯಲ್ಲಿ ಕಾರ್ಯಕರ್ತರು ವಿರೋಧಿಸಿದ್ದರು. ಹೆಬ್ಬಾರ್ ಮೂಲತಃ ಬಿಜೆಪಿಯವರೇ ಆಗಿದ್ದರೂ, ಅವರು ಪಕ್ಷಕ್ಕೆ ಬರುವುದು ಹೆಚ್ಚಿನವರಿಗೆ ಇಷ್ಟವಿಲ್ಲ. ವರಿಷ್ಠರ ನಿರ್ಣಯಕ್ಕೆ ನಾವು ಸುಮ್ಮನಿರಬೇಕಾಗಿದೆ’ ಎನ್ನುತ್ತಾರೆ ಬಿಜೆಪಿ ಕಾರ್ಯಕರ್ತರೊಬ್ಬರು.

ಹೆಬ್ಬಾರ್ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಆದರೆ, ಅವರ ಕುಟುಂಬ ಮೂಲಗಳು ಅವರು ಬಿಜೆಪಿ ಸೇರುವುದನ್ನು ಖಚಿತಪಡಿಸಿವೆ.

‘ಯಾರು ಬರಲಿ, ಹೋಗಲಿ ಪಕ್ಷ ಸದೃಢ’

ಶಿವರಾಮ ಹೆಬ್ಬಾರ್ ರಾಜೀನಾಮೆ ನೀಡಿರುವ ಸಂಗತಿ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ವೈಯಕ್ತಿಕ ಸಂಪರ್ಕ ಮಾಡಿಲ್ಲ. ರಾಜೀನಾಮೆ ಅಂಗೀಕಾರವಾದರೆ, ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಯಾರು ಬರಲಿ, ಹೋಗಲಿ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಸದೃಢವಾಗಿದೆ. ಯಾರು ಬಿಟ್ಟು ಹೋದಾಗಲೂ ಪಕ್ಷಕ್ಕೆ ಬರುವ ಮತಗಳ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಪ್ರತಿಕ್ರಿಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು