ಬುಧವಾರ, ಜುಲೈ 15, 2020
27 °C
ಕಾರವಾರ ಜಿಲ್ಲೆಯಲ್ಲಿ ಸಾರಿಗೆ ಸೌಕರ್ಯದ ಕೊರತೆಯಿಂದ ಗೈರು ಹಾಜರಾಗದಂತೆ ಕ್ರಮ

ಉತ್ತರ ಕನ್ನಡ | ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ

ಸದಾಶಿವ ಎಂ.ಎಸ್. Updated:

ಅಕ್ಷರ ಗಾತ್ರ : | |

ಕಾರವಾರ: ರಾಜ್ಯದಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮಳೆಗಾಲದ ಮಧ್ಯದಲ್ಲೇ ನಡೆಯಲಿವೆ. ಹಳ್ಳ ಕೊಳ್ಳಗಳು ಉಕ್ಕಿ ಹರಿಯುವ ಪ್ರದೇಶದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಲುಪುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಆದರೆ, ಅದಕ್ಕೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ, ಆತಂಕ ಬೇಡ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಜಾರಿಯಾದ ಲಾಕ್‌ಡೌನ್‌ನಿಂದಾಗಿ ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನೂ ಮುಂದೂಡಲಾಗಿತ್ತು. ಪರಿಷ್ಕೃತ ದಿನಾಂಕದ ಪ್ರಕಾರ ಜೂನ್ 25ರಿಂದ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆದುಕೊಂಡು ಬರಲು ಬಸ್‌ಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ಹರೀಶ ಗಾಂವಕರ್ ತಿಳಿಸಿದ್ದಾರೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಕೆ.ಎಸ್.ಆರ್.ಟಿ.ಸಿ ತನ್ನ ಎಲ್ಲ ಮಾರ್ಗಗಳಲ್ಲಿ ಬಸ್ ಸಂಚಾರವನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಿಲ್ಲ. ಹಾಗಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಿಲ್ಲೆಯ ಖಾಸಗಿ ಶಾಲೆಗಳ ಬಸ್‌ಗಳನ್ನು ಬಳಸಿಕೊಳ್ಳಲಾಗುವುದು. ಈ ಸಂಬಂಧ ಶಾಲೆಗಳ ಆಡಳಿತ ಮಂಡಳಿಗಳಿಗೆ ಪತ್ರ ಬರೆಯಲಾಗಿದೆ. ಸರ್ಕಾರಿ ಸಾರಿಗೆ ವ್ಯವಸ್ಥೆಯಿಲ್ಲದ ಮಾರ್ಗಗಳಲ್ಲಿ ಆ ವಾಹನಗಳು ಸಂಚರಿಸಲಿವೆ’ ಎಂದು ಮಾಹಿತಿ ನೀಡಿದರು. 

‘ಉದಾಹರಣೆಗೆ ಅಂಕೋಲಾ ತಾಲ್ಲೂಕಿನ ಕಮ್ಮಾಣಿಯಂತಹ ಕುಗ್ರಾಮಗಳಿಂದ ಬರುವ ವಿದ್ಯಾರ್ಥಿಗಳು ಹಿಂದಿನ ವರ್ಷಗಳಲ್ಲಿ  ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡು ಪರೀಕ್ಷೆ ಬರೆಯುತ್ತಿದ್ದರು. ಈಗಲೂ ಅಂತಹ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಲಾಗುತ್ತದೆ. ಕಮ್ಮಾಣಿಯಿಂದ ಅಚವೆ, ಅಂಗಡಿಬೈಲ್, ಹಿಲ್ಲೂರು, ಮೊಗಟಾ, ಮೊರಳ್ಳಿ ಈ ರೀತಿ ಒಂದೇ ಮಾರ್ಗದಲ್ಲಿ ಹಲವು ಹಳ್ಳಿಗಳಿವೆ. ಅಂತಹ ಮಾರ್ಗಗಳನ್ನೂ ಪಟ್ಟಿ ಮಾಡಲಾಗಿದೆ’ ಎಂದು ವಿವರಿಸಿದರು.

ಪರೀಕ್ಷಾ ಕೇಂದ್ರಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರ ಜೊತೆ ಚರ್ಚಿಸಲಾಗಿದೆ. ವಾಹನಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆ ಗೈರು ಹಾಜರಾಗುವುದನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಮಾರ್ಗದರ್ಶಿ ಶಿಕ್ಷಕ: ‘ಲಾಕ್‌ಡೌನ್ ಅವಧಿಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಅರಿತುಕೊಳ್ಳಲು ಪ್ರತಿ ಶಾಲೆಯಲ್ಲೂ ‘ಮಾರ್ಗದರ್ಶಿ ಶಿಕ್ಷಕ’ ಎಂದು ನೇಮಿಸಲಾಗಿದೆ. ಸುಮಾರು 10 ವಿದ್ಯಾರ್ಥಿಗಳ ಸಂಪೂರ್ಣ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ. ಮಕ್ಕಳ ಅಧ್ಯಯನ, ಅಗತ್ಯ ಮಾರ್ಗದರ್ಶನ, ಪರೀಕ್ಷಾ ಕೇಂದ್ರಕ್ಕೆ ಬರುವ ವ್ಯವಸ್ಥೆ ಅಥವಾ ವಾಸ್ತವ್ಯದ ಸೌಕರ್ಯದ ‌ಬಗ್ಗೆ ಗಮನ ಹರಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು. 

‘ಗೋವಾದಲ್ಲಿ ಪರೀಕ್ಷಾ ಕೇಂದ್ರವಿಲ್ಲ’: ‘ಕೇಂದ್ರ ಗೃಹ ಇಲಾಖೆಯು ಲಾಕ್‌ಡೌನ್ ನಿಯಮಗಳಲ್ಲಿ ಸಡಿಲಿಕೆ ತಂದು ಅಂತರರಾಜ್ಯ ಪ್ರಯಾಣಕ್ಕೆ ಅವಕಾಶ ನೀಡಿದೆ. ಆದ್ದರಿಂದ ಗೋವಾದ‌ಲ್ಲಿ ಪರೀಕ್ಷಾ ಕೇಂದ್ರ ತೆರೆಯುವುದಿಲ್ಲ’ ಎಂದು ಡಿ.ಡಿ.ಪಿ.ಐ ಹರೀಶ ಗಾಂವ್ಕರ್ ತಿಳಿಸಿದರು.

‘ಅಲ್ಲಿರುವ ವಿದ್ಯಾರ್ಥಿಗಳಿಗೆ ಅಗತ್ಯವಿದ್ದರೆ ಇಲ್ಲಿ ಹಾಸ್ಟೆಲ್ ವ್ಯವಸ್ಥೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಅವರು ಕಾರವಾರ ತಾಲ್ಲೂಕಿನ ಉಳಗಾದ ಕೇಂದ್ರಕ್ಕೆ ಹಾಜರಾಗಬೇಕಿತ್ತು. ಅದರ ಬದಲು ಹತ್ತಿರದ ಕೇಂದ್ರಗಳಾದ ಚಿತ್ತಾಕುಲಾ ಅಥವಾ ಸದಾಶಿವಗಡದಲ್ಲಿ ಪರೀಕ್ಷೆ ಬರೆಬಹುದು. ಅದೇರೀತಿ, ಗೋವಾ ಗಡಿ ಪೋಳೆಂವರೆಗೆ ಅಲ್ಲಿನ ಶಾಲಾ ಬಸ್‌ಗಳಲ್ಲಿ ಬಂದರೆ, ಈಚೆಗೆ ಬರಲು ನಾವು ಬಸ್ ವ್ಯವಸ್ಥೆ ಮಾಡುತ್ತೇವೆ’ ಎಂದರು.

**
ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು

9,580: ಲಾಕ್‌ಡೌನ್ ಮೊದಲು
263: ಬೇರೆ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯುವರು
72: ಬೇರೆ ಜಿಲ್ಲೆಗಳಿಂದ ಕಾರವಾರ ಜಿಲ್ಲೆಗೆ ಬಂದವರು
9,389: ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವವರ ಒಟ್ಟು ಸಂಖ್ಯೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು