ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಜನ ಸಂಚಾರ, ವಹಿವಾಟು ಮತ್ತೆ ಶುರು

ಲಾಕ್‌ಡೌನ್ ನಿಯಮಗಳ ಸಡಿಲಿಕೆ: ವಿವಿಧ ವಾಣಿಜ್ಯ ಚಟುವಟಿಕೆಗಳು ಆರಂಭ
Last Updated 4 ಮೇ 2020, 12:05 IST
ಅಕ್ಷರ ಗಾತ್ರ

ಕಾರವಾರ: ಲಾಕ್‌ಡೌನ್ ನಿಯಮಗಳನ್ನು ತುಸು ಸಡಿಲಿಸಿದಕಾರಣ ಜನಜೀವನ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ನಗರದಲ್ಲಿ ಸೋಮವಾರ ಜನರ ಸಂಚಾರ ಮೊದಲಿನಂತೆ ಕಂಡುಬಂದಿದ್ದು, ವಾಹನಗಳ ಸಂಖ್ಯೆಯೂ ಅಧಿಕವಾಗಿತ್ತು.

ಕಿರಾಣಿ ಅಂಗಡಿಗಳು, ಬೇಕರಿಗಳು, ಹೋಟೆಲ್‌ಗಳು, ಹಾಲಿನ ಬೂತ್, ಆಭರಣ ಮಳಿಗೆಗಳು, ಸ್ಟೇಷನರಿ ಅಂಗಡಿಗಳು ಸುಮಾರು ಎರಡು ತಿಂಗಳ ನಂತರ ಬಾಗಿಲು ತೆರೆದಿವೆ. ವಹಿವಾಟಿನ ಸ್ಥಳದಲ್ಲಿ ತುಂಬಿದ್ದ ದೂಳನ್ನುಹೊಡೆದು ಸ್ವಚ್ಛತೆ ಮಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಹೋಟೆಲ್‌ಗಳಲ್ಲಿ ಅಡುಗೆ ಕೋಣೆ, ಪಾರ್ಸೆಲ್ ನೀಡುವ ಜಾಗ,ನೆಲವನ್ನು ಕಾರ್ಮಿಕರು ಒರೆಸಿ ಶುಚಿಗೊಳಿಸಿದರು.ಗ್ರಾಹಕರ ನಡುವೆ ಅಂತರ ಕಾಯ್ದುಕೊಂಡು ವಹಿವಾಟು ನಡೆಸಬೇಕಾದ ಅನಿವಾರ್ಯತೆಯಿದೆ. ಆದ್ದರಿಂದ ಇದಕ್ಕೆ ಬೇಕಾದ ಸಿದ್ಧತೆಗಳನ್ನೂ ಮಾಡಿಕೊಂಡಿದ್ದು, ಮಂಗಳವಾರದಿಂದ ಬಹುತೇಕ ವಹಿವಾಟುಗಳು ನಡೆಯುವ ಸಾಧ್ಯತೆಯಿದೆ.ಹೋಟೆಲ್‌ಗಳಲ್ಲಿ ಪಾರ್ಸೆಲ್ ಒಯ್ಯಲು ಅವಕಾಶವಿದೆ. ಆದರೆ, ಅಲ್ಲೇ ಕುಳಿತು ಆಹಾರ ಸೇವಿಸುವುದನ್ನು ನಿಷೇಧಿಸಲಾಗಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಸೋಮವಾರ ವಾಹನಗಳದಟ್ಟಣೆಯಿತ್ತು. ಮುಖಗವಸು ಧರಿಸಿದ ಸಾರ್ವಜನಿಕರು ದ್ವಿಚಕ್ರ ವಾಹನಗಳಲ್ಲಿ ಸಂಚರಿಸಿದರು. ಪೊಲೀಸರೂ ಅಲ್ಲಲ್ಲಿ ನಿಂತಿದ್ದು, ನಿಯಮ ಮೀರಿದವರನ್ನು ಎಚ್ಚರಿಸುವ ಕಾರ್ಯ ಮಾಡಿದರು.

ಕಾರ್ಮಿಕರ ಸಾಲು

ನಗರದಲ್ಲಿ ಕೆಲಸಕ್ಕಾಗಿ ಬಂದ ಹೊರ ರಾಜ್ಯಗಳ ನೂರಾರು ಕಾರ್ಮಿಕರು, ತಮ್ಮ ರಾಜ್ಯಗಳಿಗೆ ಮರಳಲು ಇ–ಪಾಸ್ ಪಡೆಯುವ ಸಲುವಾಗಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಕಾರವಾರ ತಹಶೀಲ್ದಾರ್ ಕಚೇರಿಯ ಬಳಿ ಸೇರಿದ್ದರು. ಮಹಾತ್ಮ ಗಾಂಧಿ ರಸ್ತೆಯ ಬದಿಯಲ್ಲಿ ಸಾಲಾಗಿ ನಿಂತು ಊರಿಗೆ ಮರಳಲು ಹಂಬಲಿಸುತ್ತಿದ್ದುದು ಕಂಡುಬಂತು.

ಸರ್ಕಾರವು ಹೊರರಾಜ್ಯಗಳ ಕಾರ್ಮಿಕರಿಗೆ‘ಸೇವಾಸಿಂಧು’ ವೆಬ್‌ಸೈಟ್ ಮೂಲಕ ನೊಂದಾಯಿಸಿಕೊಂಡು ಪಾಸ್ ಪಡೆದು ತಮ್ಮ ಊರುಗಳಿಗೆ ಮರಳಲು ಅವಕಾಶ ನೀಡಿದೆ. ಆದ್ದರಿಂದ ನೂರಾರು ಕಾರ್ಮಿಕರು, ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಬೆಳಿಗ್ಗೆಯಿಂದಲೇ ಸಾಲಿನಲ್ಲಿ ನಿಂತಿದ್ದರು.

ಮದ್ಯ ಖರೀದಿಗೆ ಸಾಲು

ಕಿತ್ತಳೆ ವಲಯದಲ್ಲೂ ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದ ಕಾರಣಜಿಲ್ಲೆಯಲ್ಲೂ ಸೋಮವಾರ ಪಾನಪ್ರಿಯರು ಸಂಭ್ರಮಿಸಿದರು. ನಗರದ ಮದ್ಯ ಮಾರಾಟ ಮಳಿಗೆಗಳು ಬೆಳಿಗ್ಗೆ ಒಂಬತ್ತಕ್ಕೆ ಬಾಗಿಲು ತೆರೆಯುವ ಮೊದಲೇ ಮಳಿಗೆಗಳ ಎದುರುನೂರಾರು ಮಂದಿ ಸರದಿಯಲ್ಲಿ ನಿಂತಿದ್ದರು.

ಗ್ರಾಹಕರ ನಡುವೆ ಅಂತರ ಕಾಯ್ದುಕೊಳ್ಳುವ ಸಲುವಾಗಿ ಬರೆಯಲಾಗಿದ್ದ ವೃತ್ತಗಳಲ್ಲಿ ನಿಂತು ತಮ್ಮ ಸರದಿ ಬರುವವರೆಗೂ ಕಾಯುತ್ತ ನಿಂತಿದ್ದರು. ಅಬಕಾರಿ ಇಲಾಖೆ ಅಧಿಕಾರಿಗಳು, ಪೊಲೀಸರು‍ಪರಿಶೀಲಿಸಿ, ಮಳಿಗೆಗಳ ಮುಂದೆ ನಿಯಮ ಪಾಲನೆಗೆ ಕಟ್ಟುನಿಟ್ಟಾಗಿ ಸೂಚಿಸಿದರು.

ನೊಂದಣಿಗೆ ಸೂಚನೆ

ಕಾರ್ಮಿಕರು, ಪ್ರವಾಸಿಗರು, ಯಾತ್ರಿಕರು ಕಾರವಾರ ತಾಲ್ಲೂಕಿನಿಂದ ಜಿಲ್ಲೆಯ ಇತರ ತಾಲ್ಲೂಕುಗಳಿಗೆ (ಭಟ್ಕಳ ಹೊರತು ಪಡಿಸಿ) ಅಥವಾ ಬೇರೆ ಜಿಲ್ಲೆಗೆ ತೆರಳಲು ಅವಕಾಶ ನೀಡಲಾಗಿದೆ. ಆದರೆ, ಕಾರವಾರ ತಹಶೀಲ್ದಾರ್ ಕಾರ್ಯಾಲಯದ ಸಹಾಯವಾಣಿ ಸಂಖ್ಯೆ 08382 226331ಕ್ಕೆಸಂಪರ್ಕಿಸಿ ಹೆಸರುನೊಂದಾಯಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಆರ್.ವಿ.ಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೊಂದಾಯಿಸಿಕೊಂಡವರ ಪ್ರಯಾಣದ ದಿನಾಂಕವನ್ನು ಅವರ ಮೊಬೈಲ್ ಸಂಖ್ಯೆಗೆ ನಂತರ ತಿಳಿಸಲಾಗುವುದು. ಹೊರ ರಾಜ್ಯಕ್ಕೆ ಹೋಗಲು ಇಚ್ಚಿಸುವರು https://sevasindhu.karnataka. gov.in ವೆಬ್‌ಸೈಟ್‌ನಲ್ಲಿ ನೊಂದಣಿ ಮಾಡಿಕೊಳ್ಳಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗೆನೋಡಲ್ ಅಧಿಕಾರಿ ದಯಾನಂದ ಖಾರ್ಗಿ (ಮೊಬೈಲ್: 91130 33164 ಅಥವಾ 94817 36639) ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT