ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಪ ಹೇಳದೇ ಸಂತ್ರಸ್ತರಿಗೆ ಪರಿಹಾರ ನೀಡಿ: ಸಿ.ಎಂ ಬೊಮ್ಮಾಯಿ ಸೂಚನೆ

ಅಂಕೋಲಾದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ
Last Updated 29 ಜುಲೈ 2021, 15:53 IST
ಅಕ್ಷರ ಗಾತ್ರ

ಕಾರವಾರ: ‘ಅರಣ್ಯ ಕಾಯ್ದೆಗೆ ಒಳಪಡುವ ಪ್ರದೇಶಗಳಲ್ಲಿ ನೆರೆಯಿಂದ ಹಾನಿಗೀಡಾದ ಮನೆಗಳಿಗೆ 2019ರ ಮಾದರಿಯಲ್ಲೇ ಪರಿಹಾರ ನೀಡಬೇಕು. ಇದಕ್ಕೆ ಅಧಿಕಾರಿಗಳು ಯಾವುದೇ ನೆಪ ಹೇಳಬಾರದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

ಯಲ್ಲಾಪುರ ಮತ್ತು ಅಂಕೋಲಾ ತಾಲ್ಲೂಕುಗಳ ವಿವಿಧೆಡೆ ಮಳೆ, ಭೂಕುಸಿತದಿಂದ ಹಾನಿಗೀಡಾದ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಅಂಕೋಲಾದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.

‘ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ ನಿಯಮದಂತೆ ಸಂತ್ರಸ್ತರಿಗೆ ತಕ್ಷಣದ ಪರಿಹಾರವಾಗಿ ₹ 3,800 ಕೊಡಲಾಗುತ್ತಿತ್ತು. ಆದರೆ, ಅದನ್ನು ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದ ತೀರ್ಮಾನದಂತೆ ₹ 10 ಸಾವಿರಕ್ಕೆ ಏರಿಕೆ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಂಪೂರ್ಣವಾಗಿ ಕುಸಿದ ಮನೆಗಳಿಗೆ ₹ 5 ಲಕ್ಷ, ತೀವ್ರ ಹಾನಿಗೀಡಾದ ಮನೆಗಳಿಗೆ ₹ 3 ಲಕ್ಷ ಹಾಗೂ ಭಾಗಶಃ ಹಾನಿಗೀಡಾದವುಗಳಿಗೆ ₹ 50 ಸಾವಿರ ಪರಿಹಾರ ನೀಡಲಾಗುವುದು’ ಎಂದು ತಿಳಿಸಿದರು.

ಸಮನ್ವಯ ಸಾಧಿಸಲು ಸೂಚನೆ:

‘ಜಲಾಶಯಗಳಿಂದ ಏಕಾಏಕಿ ನೀರನ್ನು ನದಿಗಳಿಗೆ ಹರಿಸಲಾಗುತ್ತದೆ ಎಂಬ ದೂರುಗಳಿವೆ. ಈ ಬಗ್ಗೆ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿಕೊಳ್ಳಬೇಕು. ಈ ಬಗ್ಗೆ ಎರಡು, ಮೂರು ದಿನಗಳಲ್ಲಿ ಸಭೆ ನಡೆಸಿ ಸೂಕ್ತ ಮಾರ್ಗಸೂಚಿ ಸಿದ್ಧಪಡಿಸಲಾಗುವುದು. ಅಧಿಕಾರಿಗಳು ಸಾಕಷ್ಟು ಮುಂಚಿತವಾಗಿ ಮಾಹಿತ ನೀಡಿ ನದಿಗೆ ನೀರು ಹರಿಸಬೇಕು’ ಎಂದು ಸೂಚಿಸಿದರು.

ಮೀನುಗಾರರಿಗೆ ಲಸಿಕೆ:

‘ಕರಾವಳಿ ಭಾಗದ ಶಾಸಕರ ಮನವಿಯಂತೆ ಮೀನುಗಾರರಿಗೆ ಕೋವಿಡ್ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಮೂರು ಸಾವಿರ ಲಸಿಕೆಗಳನ್ನು ಮೀನುಗಾರರ ಸಮುದಾಯದವರಿಗೆ ಹಂಚಿಕೆ ಮಾಡಲು ಆರೋಗ್ಯಾಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶಾಸಕರಾದ ಶಿವರಾಮ ಹೆಬ್ಬಾರ, ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಸುನೀಲ ನಾಯ್ಕ, ವಿಧಾನಪರಿಷತ್ ಸದಸ್ಯ ಶಾಂತರಾಮ ಸಿದ್ದಿ, ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ, ಆಡಳಿತ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾದ್ಯಕ್ಷ ಪ್ರಮೋದ ಹೆಗಡೆ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾನ್ ಬಿಸ್ವಾಸ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎ.ಡಿ.ಜಿ.ಪಿ ದಯಾನಂದ, ವಿವಿಧ ಅಧಿಕಾರಿಗಳು ವೇದಿಕೆಯಲ್ಲಿದ್ದರು.

ಮುಖ್ಯಮಂತ್ರಿ ಸೂಚನೆಗಳು:

* ಕೃಷಿ, ತೋಟಗಾರಿಕೆ ಹಾನಿಯ ಸಂಪೂರ್ಣ ಮಾಹಿತಿ ಸಂಗ್ರಹಿಸಿ

* ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ಷೇತ್ರದಲ್ಲಿ ಇರಬೇಕು

* ಕಾಳಜಿ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ, ಪೂರಕ ಔಷಧ ನೀಡಿ

* ಹೆಚ್ಚಿನ ದೋಣಿಗಳಿಗೆ ಬೇಡಿಕೆಯಿದ್ದು, ಎಸ್.ಡಿ.ಆರ್.ಎಫ್‌ನಲ್ಲಿ ಪರಿಶೀಲಿಸಿ

* ಹೆಸ್ಕಾಂ ಸಲಕರಣೆಗಳ ದುರಸ್ತಿಗೆ ಎನ್.ಡಿ.ಆರ್.ಎಫ್‌.ಗೆ ಪ್ರಸ್ತಾವ ಸಲ್ಲಿಕೆ

–––––––

* ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಆಗಿರುವ ಹಾನಿಯ ಸಮೀಕ್ಷೆಯು ಒಂದು ವಾರದಲ್ಲಿ ಪೂರ್ಣಗೊಳ್ಳಬಹುದು. ನಾನು ಸೂಚಿಸಿದಂತೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು.

– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT