ಮಂಗಳವಾರ, ಆಗಸ್ಟ್ 20, 2019
22 °C

ಪ್ರಿಯಾಂಕಾ ಗಾಂಧಿ ಬಂಧನ: ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Published:
Updated:
Prajavani

ಶಿರಸಿ: ಉತ್ತರ ಪ್ರದೇಶದ ಘೋರವಾಲ ಹಳ್ಳಿಯಲ್ಲಿ ಆಸ್ತಿ ವಿವಾದದ ಕುರಿತು ನಡೆದ ಗಲಭೆಯಲ್ಲಿ ಗುಂಡೇಟಿನಿಂದ ಮರಣಹೊಂದಿದವರ ಕುಟುಂಬಸ್ಥರನ್ನು ಭೇಟಿ ಮಾಡಿ, ಸಾಂತ್ವಲು ಹೇಳಲು ಹೊರಟಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಅಲ್ಲಿನ ಸರ್ಕಾರ ಬಂಧಿಸಿದ್ದು ಖಂಡನೀಯ ಕಾಂಗ್ರೆಸ್ ಜಿಲ್ಲಾ ಘಟಕ ಹೇಳಿದೆ.

ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ಶನಿವಾರ ಇಲ್ಲಿ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಬಿಜೆಪಿ ಸರ್ಕಾರ, ಉತ್ತರ ಪ್ರದೇಶ ಸರ್ಕಾರ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ‘ಕಾಂಗ್ರೆಸ್ ನಾಯಕರಿಗೆ ತೊಂದರೆ ಕೊಡುವುದು, ಅವರ ಏಳ್ಗೆ ಸಹಿಸದೇ ಇರುವುದು ಹಾಗೂ ಅವರು ರಾಜಕಾರದಲ್ಲಿ ಮುಂದುವರಿಯಬಾರದು ಎಂಬ ಉದ್ದೇಶದಿಂದ ಕೇಂದ್ರದ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಸಾಂತ್ವಾನ ಹೇಳಲು ತೆರಳಿದವರನ್ನು ಬಂಧಿಸುವುದು ಸರಿಯೇ ? ಎಂದು ದೇಶವೇ ಇಂದು ಪ್ರಶ್ನಿಸುತ್ತಿದೆ’ ಎಂದರು.

 ಬಿಜೆಪಿ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದು, ಇದರ ವಿರುದ್ಧ ಸಾಂಕೇತಿಕ ಪ್ರತಿಭಟನೆ ಮಾಡಲಾಗಿದೆ. ಇಂತಹ ಕೃತ್ಯ ಮುಂದುವರಿದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರಮುಖರಾದ ಎಸ್.ಕೆ.ಭಾಗವತ, ಕೆ.ಜಿ. ನಾಗರಾಜ, ಸಂತೋಷ ಶೆಟ್ಟಿ, ಸಂತೋಷ ನಾಯ್ಕ ಭಟ್ಕಳ, ಗೋವಿಂದ ನಾಯ್ಕ ಮಂಕಿ, ಜಗದೀಪ ತೆಂಗೇರಿ, ಜಗದೀಶ ಗೌಡ ಶಿರಸಿ, ಶ್ರೀಪಾದ ಹೆಗಡೆ, ಅಬ್ದುಲ್ ಮಜೀದ್ ಭಟ್ಕಳ, ವಿಷ್ಣು ದೇವಾಡಿಗ, ದೀಪಕ ದೊಡ್ಡೂರು, ಶ್ರೀಲತಾ ಕಾಳೇರಮನೆ, ರತ್ನಾಶೆಟ್ಟಿ, ರುಬೆಕಾ ಫರ್ನಾಂಡಿಸ್ ಸತೀಶ್ ನಾಯ್ಕ ಇದ್ದರು.

Post Comments (+)