ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆದಾರರಿಂದ ಪ್ರತಿಭಟನೆ 23ರಂದು

ಕಾಮಗಾರಿಯ ಕೋಟ್ಯಂತರ ರೂಪಾಯಿ ಸರ್ಕಾರದಿಂದ ಪಾವತಿಗೆ ಬಾಕಿ
Last Updated 11 ಫೆಬ್ರುವರಿ 2021, 16:00 IST
ಅಕ್ಷರ ಗಾತ್ರ

ಕಾರವಾರ: ‘ಜಿಲ್ಲೆಯಲ್ಲಿ ಗುತ್ತಿಗೆದಾರರಿಗೆ ಎರಡು ವರ್ಷಗಳಿಂದ ಕೋಟ್ಯಂತರ ರೂಪಾಯಿ ಪಾವತಿಯಾಗಲು ಬಾಕಿಯಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಫೆ.23ರಂದು ಬೆಳಿಗ್ಗೆ 11ಕ್ಕೆ ನಗರದಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ತಾಲ್ಲೂಕು ನೋಂದಾಯಿತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಇತರ ಜಿಲ್ಲೆಗಳಲ್ಲಿ ಗುತ್ತಿಗೆದಾರರಿಗೆ ಕಾಮಗಾರಿಯ ಹಣವನ್ನು ಸೂಕ್ತ ಸಮಯಕ್ಕೆ ಪಾವತಿಸಲಾಗುತ್ತಿದೆ. ಆದರೆ, ಉತ್ತರ ಕನ್ನಡದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಬಿಲ್ ಮೊತ್ತ ಬಾಕಿಯಾಗುತ್ತಿದೆ. ಜಿಲ್ಲೆಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಹಾಗೂ ಜನಪ್ರತಿನಿಧಿಗಳಿಗೆ ಚುರುಕು ಮುಟ್ಟಿಸಲು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ’ ಎಂದರು.

‘ಯಾವುದೇ ಸರ್ಕಾರವಿದ್ದರೂ ಅಭಿವೃದ್ಧಿ ಕಾಮಗಾರಿಗಳಲ್ಲಿ ಗುತ್ತಿಗೆದಾರ ಪಾತ್ರ ದೊಡ್ಡದು. ಕಾಮಗಾರಿಗಳ ಟೆಂಡರ್ ಆದ ಕೂಡಲೇ ಗುತ್ತಿಗೆದಾರರು ಸಾಲ ಮಾಡಿ ಹಣ ವ್ಯಯಿಸುತ್ತಾರೆ. ಆದರೆ, ಸರ್ಕಾರದಿಂದ ಹಣ ವಾಪಸ್ ಸಿಗುವಷ್ಟರಲ್ಲಿ ಹೈರಾಣಾಗುತ್ತಾರೆ. ನಗರಸಭೆಯಲ್ಲಿ 10 ವರ್ಷಗಳ ಹಿಂದಿನ ದರಪಟ್ಟಿಯಲ್ಲೇ ಟೆಂಡರ್ ಕರೆಯುತ್ತಾರೆ. ಆದರೆ, ಈಗ ಸಿಮೆಂಟ್, ಸ್ಟೀಲ್, ಕಾರ್ಮಿಕರ ವೇತನ ಎಲ್ಲವೂ ದುಪ್ಪಟ್ಟಾಗಿವೆ. ಜೊತೆಗೇ ವ್ಯವಸ್ಥೆಗಳ ನಡುವೆ ಇರುವ ಕಾಟಗಳನ್ನೂ ಸಹಿಸಿಕೊಳ್ಳಬೇಕು. ಹೀಗಿದ್ದಾಗ ಕೆಲಸ ಹೇಗೆ ಮಾಡಲು ಸಾಧ್ಯ’ ಎಂದು ಪ್ರಶ್ನಿಸಿದರು.

ಪ್ಯಾಕೇಜ್ ಪದ್ಧತಿ ಬೇಡ

‘₹ 5 ಲಕ್ಷ, ₹ 10 ಲಕ್ಷದ ಒಳಗಿನ ಕೆಲವು ಕಾಮಗಾರಿಗಳನ್ನು ಒಂದೇ ಪ್ಯಾಕೇಜ್ ಮಾಡಿ ಕೋಟ್ಯಂತರ ರೂಪಾಯಿಗೆ ಟೆಂಡರ್ ಕರೆಯಲಾಗುತ್ತಿದೆ. ಇದರಿಂದ ಸಣ್ಣ ಗುತ್ತಿಗೆದಾರರಿಗೆ ಸಮಸ್ಯೆಯಾಗುತ್ತಿದೆ. ರಾಜ್ಯದ ಹೊರಗಿನವರೂ ಟೆಂಡರ್‌ ಪಡೆದುಕೊಳ್ಳುತ್ತಿದ್ದಾರೆ. ಈ ಪದ್ಧತಿ ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಕಾರ್ಮಿಕರ ಸಮಸ್ಯ ಬಹಳ ಹೆಚ್ಚಾಗಿದೆ. ಹೊರ ಜಿಲ್ಲೆಗಳಿಂದ ಬಂದವರೇ ಕೆಲಸ ಮಾಡುತ್ತಿದ್ದಾರೆ. ಕೌಶಲ ಇಲ್ಲದವರೂ ಸಾವಿರಾರು ರೂಪಾಯಿಗಳ ಕೂಲಿ ಕೇಳುತ್ತಾರೆ. ಕಾರವಾರ ಒಂದು ರೀತಿಯಲ್ಲಿ ಕರ್ನಾಟಕದ ದುಬೈ ಆಗಿದೆ. ಹಾಗಾಗಿ ಸಮಯಕ್ಕೆ ಸರಿಯಾಗಿ ಟೆಂಡರ್ ಮೊತ್ತ ಸರ್ಕಾರದಿಂದ ಮಂಜೂರಾಗಿದ್ದರೆ ಗುತ್ತಿಗೆದಾರ ಕಂಗಾಲಾಗುತ್ತಾರೆ’ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಸಂತೋಷ್ ಸೈಲ್, ಸುಮಿತ್ ಅಸ್ನೋಟಿಕರ್, ಅನಿಲ್ ಮಾಳ್ಸೇಕರ್, ರೋಲೆಂಡ್ ಫರ್ನಾಂಡಿಸ್, ರಾಜೇಶ ಶೇಟ್, ಭೋಜರಾಜ್ ಇದ್ದರು.

ನೂತನ ಪದಾಧಿಕಾರಿಗಳು

ನೋಂದಾಯಿತ ಗುತ್ತಿಗೆದಾರರ ಸಂಘದಲ್ಲಿ 74 ಸದಸ್ಯರಿದ್ದಾರೆ. 17 ಕಾರ್ಯಕಾರಿ ಸದಸ್ಯರು ಇರುವ ಸಂಘದ ನೂತನ ಪದಾಧಿಕಾರಿಗಳನ್ನು ಬುಧವಾರ ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಅಶೋಕ ಮಾಳ್ಸೇಸಕರ್, ಮಾಧವ ನಾಯಕ ಅಧ್ಯಕ್ಷರಾಗಿ ಆಯ್ಕೆಯಾದರು. ಸಂತೋಷ ಸೈಲ್ (ಉಪಾಧ್ಯಕ್ಷ), ಅನಿಲ್ ಮಾಳ್ಸೇಕರ್ (ಕಾರ್ಯದರ್ಶಿ), ಸುಮಿತ್ ಅಸ್ನೋಟಿಕರ್ (ಸಹ ಕಾರ್ಯದರ್ಶಿ) ಹಾಗೂ ರಾಜೇಶ ಶೇಟ್ (ಖಜಾಂಚಿ) ನೇಮಕವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT