ಮಂಗಳವಾರ, ಜನವರಿ 25, 2022
28 °C

ಪ್ರಜಾವಾಣಿ ಸಾಧಕರು; ವಿಷ ಹೀರಿ ಚಿಕಿತ್ಸೆ ನೀಡುವ ದೇವಜ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಂಕೋಲಾ: ನಾಯಿ, ಹಾವು, ಬೆಕ್ಕು ಇತರ ವಿಷದ ಪ್ರಾಣಿಗಳು ಕಡಿದಾಗ ದೇಹದಲ್ಲಿ ಸೇರಿರುವ ವಿಷವನ್ನು ಅಪಾಯಕಾರಿ ರೀತಿಯಲ್ಲಿ ಬಾಯಿಂದ ಹೀರಿ ತೆಗೆಯುವ ಸಾಹಸಮಯ ವೃತ್ತಿಯಲ್ಲಿ ತೊಡಗಿಸಿಕೊಂಡವರು ದೇವಿ ರಾಕು ಗೌಡ. 35 ವರ್ಷಗಳಿಂದ 5 ಸಾವಿರಕ್ಕೂ ಅಧಿಕ ಜನರಿಗೆ ಇವರು ಚಿಕಿತ್ಸೆ ನೀಡಿದ್ದಾರೆ.

ಸ್ಥಳೀಯವಾಗಿ ‘ದೇವಜ್ಜಿ’ ಎಂದೇ ಪರಿಚಿತರು. ಅಂಕೋಲಾ ತಾಲ್ಲೂಕಿನ ಹಡವ ಗ್ರಾಮದವರು. 75ರ ವಯಸ್ಸಿನಲ್ಲೂ ತಮ್ಮನ್ನು ದೂರದ ಊರಿನಿಂದ ಹುಡುಕಿಕೊಂಡು ಬಂದವರಿಗೆ ಲವಲವಿಕೆಯಿಂದಲೇ ಚಿಕಿತ್ಸೆ ನೀಡುತ್ತಾರೆ. ಪ್ರಾಣಿಗಳ ಕಡಿತದ ಗಾಯದಿಂದ ವಿಷ ಹೀರುವುದಲ್ಲದೇ ಮಕ್ಕಳಾಗದವರಿಗೆ, ದನಗಳಲ್ಲಿ ಕಾಣಿಸಿಕೊಳ್ಳುವ ಗಂಟಲುಬೇನೆ ರೋಗಕ್ಕೆ, ಉಷ್ಣ, ವಾಯುವಿನಿಂದ ಉಂಟಾಗುವ ಹೊಟ್ಟೆಯ ನೋವಿಗೂ ನಾಟಿ ಔಷಧಿ ನೀಡುತ್ತಾರೆ.

ನಾಟಿ ಔಷಧಿ ಪದ್ಧತಿಯನ್ನು ತಂದೆಯಿಂದ ರೂಢಿಸಿಕೊಂಡಿದ್ದಾರೆ. ಅಗತ್ಯ ಗಿಡಮೂಲಿಕೆಗಳನ್ನು ಈ ಹಿಂದೆ ತಾಲ್ಲೂಕಿನ ಹೊನ್ನಳ್ಳಿ, ಕೊಡ್ಸಣಿ ಸೇರಿದಂತೆ ಹಲವೆಡೆಯಿಂದ ಸ್ವತಃ ತಾವೇ ಕಾಡಿಗೆ ಹೋಗಿ ಸಂಗ್ರಹಿಸುತ್ತಿದ್ದರು.

ನಾಯಿ ಮತ್ತು ಹಾವು ಕಡಿತಕ್ಕೊಳಗಾದವರು ದೇಹದಲ್ಲಿ ಸೇರಿಕೊಂಡಿರುವ ವಿಷ ಹೊರಹಾಕಲು ಇಲ್ಲಿಗೆ ಬರುವುದು ಸಾಮಾನ್ಯ. ದೇವಜ್ಜಿ ಮೊದಲಿಗೆ ಕಡಿತಕ್ಕೊಳಗಾದ ದೇಹದ ಭಾಗವನ್ನು ಗಾಜಿನ ಚೂರು ಬಳಸಿ ರಕ್ತ ಬರುವಂತೆ ಸಿದ್ಧಗೊಳಿಸುತ್ತಾರೆ. ರಕ್ತದೊಂದಿಗೆ ವಿಷವು ಮೇಲ್ಭಾಗಕ್ಕೆ ಬಂದಾಗ ಅತಿ ಚಿಕ್ಕ ಕೊಳವೆಯ ಮೂಲಕ ಬಾಯಿಯಿಂದ ಹೀರಿ ಹೊರಹಾಕುತ್ತಾರೆ. ಅಪಾಯಕಾರಿ ಹಾವು ಮತ್ತು ಹುಚ್ಚು ನಾಯಿ ಕಡಿತಕ್ಕೆ ಒಳಗಾದವರ ವಿಷ ಹೀರುವಾಗ ಅದು ದೇಹಕ್ಕೆ ಸೇರಿ ಪ್ರಾಣಕ್ಕೆ ಅಪಾಯವಾಗುವ ಸಂಭವವಿರುತ್ತದೆ.

‘ಚಿಕಿತ್ಸೆಗೆ ಬಂದವರು ಮೊದಲೇ ಈ ಬಗ್ಗೆ ತಿಳಿಸಿದರೆ ಮುನ್ನೆಚ್ಚರಿಕೆ ಕ್ರಮವಾಗಿ ತಾವೇ ತಯಾರಿಸಿದ ಔಷಧಿಯನ್ನು ಬಾಯಲ್ಲಿಟ್ಟುಕೊಂಡು ವಿಷ ಹೀರುತ್ತೇನೆ. ಒಮ್ಮೊಮ್ಮೆ ಹುಚ್ಚುನಾಯಿ ಕಡಿತದ ವಿಷಯವನ್ನು ಮುಚ್ಚಿಡುತ್ತಾರೆ. ಜೀವಕ್ಕೆ ಅಪಾಯ ಎದುರಾದ ಒಂದೆರಡು ಘಟನೆಗಳೂ ನಡೆದಿವೆ’ ಎನ್ನುತ್ತಾರೆ ದೇವಿ ಗೌಡ.

ಪ್ರತಿನಿತ್ಯ 10–15 ಜನ ಇವರಲ್ಲಿಗೆ ಚಿಕಿತ್ಸೆಗೆ ಬರುತ್ತಾರೆ. ಮುರುಡೇಶ್ವರ, ಭಟ್ಕಳ, ಗೇರುಸೊಪ್ಪ, ಬೈಂದೂರು, ಶಿರಸಿ, ಸಿದ್ದಾಪುರ, ಹೊನ್ನಾವರ ಸೇರಿದಂತೆ ಹಲವೆಡೆಯಿಂದ ಭೇಟಿ ನೀಡುವುದು ಸಾಮಾನ್ಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು