ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನೆಗೆಟಿವ್ ವರದಿ: ಆಕ್ಷೇಪದ ಬಳಿಕ ಬಗೆಹರಿದ ಗೊಂದಲ

₹ 270 ಪಾವತಿಸಿ ಆರ್.ಎ.ಟಿ. ಮಾಡಿಸಿಕೊಳ್ಳಲು ಗೋವಾ ಸರ್ಕಾರದ ಸೂಚನೆ
Last Updated 29 ಜೂನ್ 2021, 12:44 IST
ಅಕ್ಷರ ಗಾತ್ರ

ಕಾರವಾರ: ಉದ್ಯೋಗ ನಿಮಿತ್ತ ಬರುವವರು ಪ್ರತಿ ದಿನ ಕೋವಿಡ್ ನೆಗೆಟಿವ್ ವರದಿ ತರಬೇಕು. ಗಡಿಯಲ್ಲಿರುವ ತಪಾಸಣಾ ಕೇಂದ್ರದಲ್ಲಿ ₹ 270 ಪಾವತಿಸಿ ರ‍್ಯಾಪಿಡ್ ಟೆಸ್ಟ್ (ಆರ್.ಎ.ಟಿ) ಮಾಡಿಸಿಕೊಳ್ಳಬೇಕು ಎಂಬ ಗೋವಾದ ನಿಯಮಕ್ಕೆ ಕಾರವಾರ ಭಾಗದ ಉದ್ಯೋಗಿಗಳಿಂದ ಮಂಗಳವಾರ ತೀವ್ರ ಆಕ್ಷೇಪ ವ್ಯಕ್ತವಾಯಿತು.

ತಾಲ್ಲೂಕಿನ ವಿವಿಧೆಡೆಯಿಂದ ನೂರಾರು ಯುವಕರು ಎಂದಿನಂತೆ ಬೆಳಿಗ್ಗೆ ಕೆಲಸಕ್ಕಾಗಿ ಗೋವಾದತ್ತ ಹೊರಟಿದ್ದರು. ಆದರೆ, ಅವರನ್ನು ಗಡಿಯಲ್ಲಿ ತಡೆದ ಗೋವಾ ಪೊಲೀಸ್ ಸಿಬ್ಬಂದಿ, ಅಲ್ಲಿನ ಸರ್ಕಾರದ ಆದೇಶವನ್ನು ತಿಳಿಸಿದರು. ಇದರಿಂದ ಕಂಗೆಟ್ಟ ಉದ್ಯೋಗಿಗಳು ಕಾಂಗ್ರೆಸ್ ಮುಖಂಡ ಸತೀಶ ಸೈಲ್ ಗಮನಕ್ಕೆ ತಂದರು. ಅವರು ಸ್ಥಳಕ್ಕೆ ತೆರಳಿ ಅಲ್ಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

‘ಅತ್ಯಲ್ಪ ವೇತನಕ್ಕೆ ದುಡಿಯುವ ಮಂದಿ ಪ್ರತಿದಿನ ₹ 270 ಹೇಗೆ ಪಾವತಿಸುತ್ತಾರೆ? ಅಲ್ಲದೇ ಅವರು ಕೆಲಸ ಮಾಡುವ ಸಂಸ್ಥೆಯವರು ಕೋವಿಡ್ ನೆಗೆಟಿವ್ ಪರೀಕ್ಷೆ ಮಾಡಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ಈ ಸಂಬಂಧ ಗೋವಾದ ಅಧಿಕಾರಿಗಳು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಉದ್ಯೋಗಿಗಳಿಗೆ ಎಂದಿನಂತೆ ಹೋಗಲು ಅವಕಾಶ ಮಾಡಿಕೊಟ್ಟರು. ತಮ್ಮ ಗುರುತಿನ ಚೀಟಿ ಮತ್ತು ಸಂಸ್ಥೆಯವರು ಮಾಡಿದ ಕೋವಿಡ್ ಪರೀಕ್ಷಾ ಪ್ರಮಾಣ ಪತ್ರವನ್ನು ಜೊತೆಗಿಟ್ಟುಕೊಳ್ಳಲು ಸೂಚಿಸಿದರು. ಉಳಿದಂತೆ, ಗೋವಾಕ್ಕೆ ಪ್ರಯಾಣಿಸುವ ಎಲ್ಲರೂ 72 ಗಂಟೆಗಳ ಒಳಗೆ ಪಡೆದಿರುವ ಆರ್.ಟಿ.ಪಿ.ಆರ್ ನೆಗೆಟಿವ್ ವರದಿ ಹಾಜರುಪಡಿಸಬೇಕು. ಇಲ್ಲದಿದ್ದರೆ, ₹ 270 ಪಾವತಿಸಿ ಆರ್.ಎ.ಟಿ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ಗೋವಾ ಸರ್ಕಾರ ಕಡ್ಡಾಯಗೊಳಿಸಿದೆ.

14 ದಿನ ಕ್ವಾರಂಟೈನ್: ಗೋವಾ ಮೂಲಕ ಉತ್ತರ ಕನ್ನಡಕ್ಕೆ ಬರುವ ಎಲ್ಲರ ಮಾಹಿತಿಯನ್ನೂ ಮಾಜಾಳಿಯಲ್ಲಿರುವ ರಾಜ್ಯದ ತಪಾಸಣಾ ಕೇಂದ್ರದಲ್ಲಿ ಕಲೆ ಹಾಕಲಾಗುತ್ತಿದೆ. ಪ್ರಯಾಣಿಕರು ಜಿಲ್ಲೆಯ ಮೂಲಕ ಬೇರೆ ಜಿಲ್ಲೆಗಳು ಅಥವಾ ರಾಜ್ಯಗಳಿಗೆ ಪ್ರಯಾಣಿಸುವುದಾದರೆ ಅವರ ವಿವರಗಳನ್ನು ಮಾತ್ರ ಸಂಗ್ರಹಿಸಲಾಗುತ್ತದೆ. ಒಂದುವೇಳೆ ಅವರು ಜಿಲ್ಲೆಯಲ್ಲಿ ಕೆಲವು ದಿನ ವಾಸ್ತವ್ಯಕ್ಕೆ ಬಂದವರಾದರೆ, ಕೈಗೆ ಮುದ್ರೆಯೊತ್ತಿ 14 ದಿನಗಳ ಕ್ವಾರಂಟೈನ್‌ಗೆ ಸೂಚಿಸಲಾಗುತ್ತಿದೆ. ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಿಂದ ಬರುವ ಎಲ್ಲ ಪ್ರಯಾಣಿಕರಿಗೂ ಈ ಸೂಚನೆ ನೀಡಲಾಗುತ್ತಿದೆ.

ಮಾಜಾಳಿಯ ಕೋವಿಡ್ ಚೆಕ್‌ಪೋಸ್ಟ್‌ನಲ್ಲಿ ಸದ್ಯ ಇಬ್ಬರೇ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಬಳಿ ಒಂದು ಥರ್ಮೊ ಮೀಟರ್ ಮತ್ತು ಒಂದು ಪಲ್ಸ್ ಆಕ್ಸಿ ಮೀಟರ್ ಇದೆ. ಒಂದುವೇಳೆ, ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಮಾಹಿತಿ ನೀಡಲು ಕಾಯಬೇಕಾಗುತ್ತದೆ. ಇದರಿಂದ ಪ್ರಯಾಣದ ಸಮಯ ವ್ಯರ್ಥವಾಗುತ್ತದೆ. ಹಾಗಾಗಿ ಇಲ್ಲಿ ಮತ್ತಷ್ಟು ಸಿಬ್ಬಂದಿ ನೇಮಿಸುವುದು ಸೂಕ್ತ ಎಂದು ಪ್ರಯಾಣಿಕರಾದ ಮಂಗಳೂರಿನ ನಾಗೇಶ ಪ್ರಭು ಹೇಳಿದರು.

‘ಆರ್.ಎ.ಟಿ. ಪರೀಕ್ಷೆ ಆರಂಭಿಸಿ’: ಜಿಲ್ಲೆಯಲ್ಲಿ ಕೆಲವು ದಿನಗಳಿಂದ ದಿನವೂ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆಯು 100ರ ಒಳಗಿದೆ. ಇದೇ ಸ್ಥಿತಿಯನ್ನು ಕಾಯ್ದುಕೊಂಡು ಹೋಗಲು ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳು ಅಗತ್ಯ. ಹಾಗಾಗಿ, ಮಾಜಾಳಿಯಲ್ಲಿ ಹೊರ ರಾಜ್ಯಗಳಿಂದ ಬರುವವರಿಗೆ ಕೋವಿಡ್ ರ‍್ಯಾಪಿಡ್ ಪರೀಕ್ಷಾ ವ್ಯವಸ್ಥೆ ಶೀಘ್ರವೇ ಆರಂಭಿಸಬೇಕು. ಅದರಲ್ಲೂ ಗೋವಾ ಮೂಲಕ ಜಿಲ್ಲೆಗೆ ಬರುವ ಇತರ ರಾಜ್ಯಗಳ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಬೇಕು ಎಂಬುದು ಕಾರವಾರ ನಿವಾಸಿ ರಮೇಶ ನಾಯ್ಕ ಅವರ ಆಗ್ರಹವಾಗಿದೆ.

*
ಜಿಲ್ಲೆಗೆ ಬರುವವರಿಗೆ ಆರ್.ಎ.ಟಿ ಕಡ್ಡಾಯ ಮಾಡಿಲ್ಲ. ಆದರೆ, ಎಲ್ಲ ಪ್ರಯಾಣಿಕರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸರ್ಕಾರದ ಸೂಚನೆಯಂತೆ ಮುಂದುವರಿಯಲಾಗುವುದು.
– ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT