ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಶೆಡ್ ಇಲ್ಲದೆ ಪರದಾಟ: ಬಲೆ ಹೆಣೆಯಲು ಮೇಲ್ಸೇತುವೆ ಆಸರೆ

Last Updated 22 ಜುಲೈ 2022, 20:30 IST
ಅಕ್ಷರ ಗಾತ್ರ

ಕಾರವಾರ: ಮುಂಗಾರು ಅವಧಿಯ ಮೀನುಗಾರಿಕೆ ನಿಷೇಧವು ತೆರವಾಗಲು ಇನ್ನು ಒಂಬತ್ತು ದಿನಗಳು ಮಾತ್ರ ಇವೆ. ಮೀನುಗಾರರು ದೋಣಿಗಳ ದುರಸ್ತಿ, ಬಲೆಗಳ ತಯಾರಿಯಲ್ಲಿ ತೊಡಗಿದ್ದಾರೆ. ಆದರೆ, ಕಾರವಾರದಲ್ಲಿ ಸೂಕ್ತ ಶೆಡ್ ಇಲ್ಲದೇ ಮೇಲ್ಸೇತುವೆಯ ಕೆಳಗೆ, ರಸ್ತೆಯ ಬದಿಯಲ್ಲಿ ತಾಡಪಾಲು ಹಾಸಿ ಕುಳಿತು ಬಲೆ ಹೆಣೆಯುತ್ತಿದ್ದಾರೆ.

ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಲಂಡನ್ ಬ್ರಿಜ್ ಹಾಗೂ ಸಾಗರ ಮತ್ಸ್ಯಾಲಯದ ಬಳಿ ಶೆಡ್‌ಗಳಿವೆ. ಲಂಡನ್ ಬ್ರಿಜ್ ಬಳಿಯ ಕಟ್ಟಡವು ಸಂಪೂರ್ಣ ಹದಗೆಟ್ಟಿದೆ. ಚಾವಣಿಗೆ ಹೊದಿಸಿದ್ದ ಶೀಟ್‌ಗಳು ಗಾಳಿಗೆ ಹಾರಿ ಹೋಗಿ ಅದೆಷ್ಟೋ ತಿಂಗಳಾದವು.

‘ಲಂಡನ್ ಬ್ರಿಜ್ ಬಳಿಯಿರುವ ಶೆಡ್‌ಗೆ ಗೋಡೆ, ಬಾಗಿಲು ಇಲ್ಲ. ಹಾಗಾಗಿ ಅಲ್ಲಿ ಬೆಲೆಬಾಳುವ ಎಂಜಿನ್, ಬಲೆ ಮುಂತಾದವನ್ನು ಇಡಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಅಲ್ಲಿ ಇಟ್ಟಿದ್ದ ಎಂಜಿನ್‌ಗಳು, ಬಲೆಗಳು ಕಳವಾಗಿದ್ದವು. ಹಾಗಾಗಿ ಪ್ರತಿದಿನ ಮೀನುಗಾರಿಕೆಯ ಬಳಿಕ ಅವುಗಳನ್ನು ವಾಹನಗಳಲ್ಲಿ ತುಂಬಿಕೊಂಡು ಪುನಃ ಮನೆಗೆ ತರಬೇಕಾಗುತ್ತದೆ. ಒಂದುವೇಳೆ ತರಲು ಸಾಧ್ಯವಾಗದಿದ್ದರೆ, ಕಾವಲು ಕಾಯುತ್ತ ನಾವೂ ಅಲ್ಲೇ ರಾತ್ರಿ ಕಳೆಯಬೇಕಿದೆ’ ಎಂದು ಮೀನುಗಾರ ಚೇತನ್ ಹರಿಕಂತ್ರ ಹೇಳುತ್ತಾರೆ.

‘ಸಾಗರ ಮತ್ಸ್ಯಾಲಯದ ಬಳಿಯಿರುವ ಶೆಡ್ ಬೈತಖೋಲ್ ಭಾಗದ ಮೀನುಗಾರರಿಗೆ ಬಹಳ ದೂರವಾಗುತ್ತದೆ. ಅಲ್ಲದೇ ಅದು ಆ ಭಾಗದ ಮೀನುಗಾರರಿಗೆ ಮಾತ್ರ ಸ್ಥಳಾವಕಾಶ ಹೊಂದಿದೆ. ಈ ಹಿಂದೆ ಕಡಲತೀರದಲ್ಲಿ ಗುಡಿಸಲುಗಳು ಇದ್ದಾಗ ಅಲ್ಲೇ ಬಲೆ ಹೆಣೆಯುವಂಥ ಕೆಲಸಗಳನ್ನು ಪೂರ್ಣಗೊಳಿಸುತ್ತಿದ್ದೆವು. ಬಳಿಕ ಅವುಗಳನ್ನು ತೆರವು ಮಾಡಿದಾಗ ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ. ಮೀನುಗಾರಿಕೆ ಇಲಾಖೆಯು ಈ ಬಗ್ಗೆ ಗಮನ ಹರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಬಿಸಿಲು, ಮಳೆಯಿಂದ ರಕ್ಷಿಸಿಕೊಳ್ಳಲು, ಮೀನುಗಾರಿಕೆ ಮಾಡಿ ಸುಸ್ತಾಗಿ ಬಂದಾಗ ವಿಶ್ರಾಂತಿ ಪಡೆಯಲು ನೆರಳಿನ ವ್ಯವಸ್ಥೆ ಅವಶ್ಯವಾಗಿ ಬೇಕಿದೆ. ಶೆಡ್ ದುರಸ್ತಿ ಮಾಡಿಸಿಕೊಡಬೇಕು’ ಎಂದು ಮೀನುಗಾರರಾದ ವಿನಾಯಕ ಹರಿಕಂತ್ರ, ಆನಂದು ಬಾನಾವಳಿ ಮತ್ತು ಶ್ರೀಪಾದ ಬಾನಾವಳಿ ಅವರೂ ಮನವಿ ಮಾಡಿದ್ದಾರೆ.

‘ಅಲ್ಲೇ ವ್ಯವಸ್ಥೆ ಮಾಡಿ’:

‘ಮೀನುಗಾರಿಕೆ ಆರಂಭವಾಗಲು ಸ್ವಲ್ಪ ದಿನಗಳಷ್ಟೇ ಇವೆ. ದಿನವಿಡೀ ಸಮುದ್ರದಲ್ಲಿ ಕಷ್ಟ ಪಡುವ ಸಮುದಾಯವು, ಬಲೆ ಹೆಣೆಯಲು ಸೂಕ್ತ ಜಾಗಕ್ಕೂ ಪರದಾಡುವಂತಾಗಿದೆ. ಇದು ವಿಪರ್ಯಾಸ’ ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟಗಾರರ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಮೀನುಗಾರರು ತಮ್ಮ ವೃತ್ತಿಯ ಸಲಕರಣೆಗಳನ್ನು ಕಡಲತೀರದ ಹೊರತಾಗಿ ದೂರದಲ್ಲಿ ಎಲ್ಲೋ ಇಡಲು ಸಾಧ್ಯವಾಗದು. ಹಾಗಾಗಿ ಅಲ್ಲೇ ವ್ಯವಸ್ಥೆ ಮಾಡಿಕೊಡಬೇಕು. ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಹೋರಾಟಕ್ಕೆ ಸಿದ್ಧರಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

* ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಮೀನುಗಾರರ ಶೆಡ್ ದುರಸ್ತಿಯ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು.

– ಕವಿತಾ ಆರ್.ಕೆ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT