ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ. ಬಳಿ ನಿಯೋಗ ಹೋಗಲು ತೀರ್ಮಾನ

ಕಾರವಾರ ಬಂದರು ಎರಡನೇ ಹಂತದ ವಿಸ್ತರಣೆಗೆ ಮೀನುಗಾರರ ವಿರೋಧ
Last Updated 14 ಡಿಸೆಂಬರ್ 2019, 15:30 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ವಾಣಿಜ್ಯ ಬಂದರಿನ ಎರಡನೇ ಹಂತದ ವಿಸ್ತರಣೆ ಕಾಮಗಾರಿಯನ್ನು ನಿಲ್ಲಿಸುವಂತೆ ಒತ್ತಾಯಿಸಲು ಮುಖ್ಯಮಂತ್ರಿ ಬಳಿಗೆ ನಿಯೋಗ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿದೆ. ಯಾವುದೇ ಕಾರಣಕ್ಕೂ ಕಾಮಗಾರಿಯನ್ನು ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂದು ಮೀನುಗಾರರ ಮುಖಂಡರು ತಿಳಿಸಿದ್ದಾರೆ.

ಈ ಬಗ್ಗೆ ನಗರದಲ್ಲಿಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಟಿ.ತಾಂಡೇಲ,‘ಬಂದರು ವಿಸ್ತರಣೆಯ ಬಗ್ಗೆ ಸಾರ್ವಜನಿಕ ಅಹವಾಲು ಸಭೆ ನಡೆಸುವ ಬಗ್ಗೆ ಮೀನುಗಾರರಿಗೆ ಸೂಕ್ತ ಮಾಹಿತಿ ನೀಡಿರಲಿಲ್ಲ. ಸಾರ್ವಜನಿಕರ ಅಭಿಪ್ರಾಯದ ಬಗ್ಗೆ ಬಂದರು ಇಲಾಖೆಯು ಮುದ್ರಿಸಿರುವ ಕಿರು ಪುಸ್ತಕದಲ್ಲಿ ಸಂಪೂರ್ಣ ಸುಳ್ಳು ಮಾಹಿತಿಗಳಿವೆ’ ಎಂದು ದೂರಿದರು.

‘ಉದ್ದೇಶಿತ ಪ್ರದೇಶದಲ್ಲಿ114 ಕುಟುಂಬಗಳು ವಾಸಿಸುತ್ತಿವೆ. ಆ ಜಾಗವನ್ನು ಮೀನುಗಾರಿಕೆ, ದೋಣಿ ನಿಲ್ಲಿಸಲು, ಮೀನು ಒಣಗಿಸಲು ಬಳಸುತ್ತಿದ್ದಾರೆ. ಆದರೆ,ಪರಿಸರಪರಿಣಾಮ ಮೌಲ್ಯಮಾಪನ ವರದಿಯಲ್ಲಿ ಇದರ ಉಲ್ಲೇಖವೇ ಇಲ್ಲ. ಯೋಜನೆಯನ್ನು ಭರ್ತಿ ಮಾಡಿದ ಭೂ ಪ್ರದೇಶದಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಲಾಗಿದೆ. ಆದರೆ, ಅದರ ಸರ್ವೆ ನಂಬರ್, ಪ್ಲಾಟ್ ಸಂಖ್ಯೆಗಳನ್ನು ತಿಳಿಸಿಲ್ಲ. ರೈಲುಹಳಿ, ರಸ್ತೆ ನಿರ್ಮಾಣ, ಕಟ್ಟಡಗಳ ನಿರ್ಮಾಣಕ್ಕೆ ಮರಗಳ ತೆರವು ಮಾಡುವ ಬಗ್ಗೆ ಮಾಹಿತಿ ನೀಡಿಲ್ಲ’ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಗಣಪತಿ ಮಾಂಗ್ರೆ ಮಾತನಾಡಿ, ‘ಮೀನುಗಾರಿಕೆಯನ್ನುಅವಲಂಬಿಸಿ ಕಾರವಾರ ತಾಲ್ಲೂಕಿನಲ್ಲೇ ಅಂದಾಜು 75 ಸಾವಿರ ಜನರಿದ್ದಾರೆ. ಬಂದರು ವಿಸ್ತರಣೆ ಕಾಮಗಾರಿ ಆರಂಭಿಸುವ ಮೊದಲೇ ಮೀನುಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿದಾಗಲೂ ಶೇ 80ರಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ ಕಾಮಗಾರಿಯನ್ನು ಕೈಬಿಡಬೇಕಿತ್ತು’ ಎಂದು ಆಗ್ರಹಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಕುಮಟಾದ ಸಂಶೋಧನಾ ಕೇಂದ್ರದ ಸಮುದ್ರ ಜೀವಶಾಸ್ತ್ರಜ್ಞ ಡಾ.ಪ್ರಕಾಶ ಮೇಸ್ತ ಮಾತನಾಡಿ, ‘ಕಾರವಾರದ ಕಡಲತೀರದಲ್ಲಿ 14,500 ಮೀನುಗಾರರ ಕುಟುಂಬಗಳಿವೆ. ಕೇವಲ 3.5 ಕಿಲೋಮೀಟರ್ ಕರಾವಳಿಯಿದೆ. ಇದರಲ್ಲಿ ಮತ್ತಷ್ಟು ಯೋಜನೆಗಳನ್ನು ಜಾರಿ ಮಾಡುವುದು ಸರಿಯಲ್ಲ. ಕಡಲಿನ ತೀರದಲ್ಲಿ ಸುಮಾರು 30 ಮೀಟರ್‌ ದೂರದವರೆಗೆಜೀವಿಗಳಿರುತ್ತವೆ. ಕಾಮಗಾರಿಗಾಗಿ ಸಮುದ್ರಕ್ಕೆ ಕಲ್ಲು ಹಾಕಿದರೆ ಅವುಗಳು ಸಾಯುತ್ತವೆ. ಇದು ಜೀವ ಸಂಕುಲಕ್ಕೆ ಅಪಾಯಕಾರಿ’ ಎಂದರು.

ಮೋಹನ ಬೋಳಶೆಟ್ಟಿಕರ ಮಾತನಾಡಿ, ‘ಸೀಬರ್ಡ್ ನೌಕಾನೆಲೆಯ ಅಲೆ ತಡೆಗೋಡೆಗಳಿಂದಾಗಿ ಅಂಕೋಲಾದ ಕೇಣಿಯಿಂದ ಕಾರವಾರದ ಮಾಜಾಳಿಯವರೆಗೆ ಸಮುದ್ರ ಕೊರೆತ ಉಂಟಾಗುತ್ತಿದೆ. ಮತ್ತಷ್ಟು ಕಾಮಗಾರಿಗಳು ಅಪಾಯಕಾರಿ’ ಎಂದು ಅಭಿಪ್ರಾಯಪಟ್ಟರು.

ಮುಖಂಡರಾದ ವೆಂಕಟೇಶ ತಾಂಡೇಲ, ರಾಜು ತಾಂಡೇಲ, ಸುಧಾಕರ ಹರಿಕಂತ, ಸುಶೀಲಾ ಹರಿಕಂತ,‍ಪ್ರೇಮಾ ಹರಿಕಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT