ಶನಿವಾರ, ಆಗಸ್ಟ್ 20, 2022
21 °C
ನಿಯಮ ಮೀರಿ ಮೀನುಗಾರಿಕೆಯೂ ಮತ್ಸ್ಯಸಂಕುಲ ನಾಶಕ್ಕೆ ಪ್ರಮುಖ ಕಾರಣ: ಆರೋಪ

ಮೀನಿಗೇ ಆಹಾರದ ಕೊರತೆ: ಮೀನುಗಾರರ ಚಿಂತೆ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಸಮುದ್ರದಲ್ಲಿ ಮೀನುಗಳಿಗೇ ಆಹಾರ ಸರಿಯಾಗಿ ಸಿಗ್ತಿಲ್ಲ. ಮತ್ತೆಲ್ಲಿಂದ ಅವು ಬೆಳೀಬೇಕು? ನದಿಗಳಿಂದ ಸಮುದ್ರಕ್ಕೆ ಸೇರುವ ನೀರು ಮೊದಲಿನಷ್ಟು ಸ್ವಚ್ಛವಾಗಿಲ್ಲ. ಮೀನಿನ ಸಂತಾನ ಕಡಿಮೆಯಾಗಲು ಮುಖ್ಯ ಕಾರಣವಿದು...’

ಕಾರವಾರದ ಹರಿಕಂತ್ರ ಖಾರ್ವಿ ಮೀನುಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಕೆ.ಟಿ.ತಾಂಡೇಲ ಮುಂದಿಡುವ ವಾದವಿದು.

ವರ್ಷದಿಂದ ವರ್ಷಕ್ಕೆ ಮೀನಿನ ಇಳುವರಿ ಕಡಿಮೆಯಾಗುತ್ತಿರುವುದು ಮೀನುಗಾರರ ಚಿಂತೆಗೆ ಕಾರಣವಾಗಿದೆ. ಪ್ರತಿ ಬಾರಿಯೂ ಆಗಸ್ಟ್ 1ರಂದು ಮೀನುಗಾರಿಕಾ ಋತು ಆರಂಭವಾಗುತ್ತಿದ್ದಂತೆ, ಸಮುದ್ರಕ್ಕೆ ಪೂಜೆ ಸಲ್ಲಿಸುವ ಮೀನುಗಾರರು ಮತ್ಸ್ಯ ಶಿಕಾರಿ ಉತ್ತಮವಾಗಿ ಆಗಲಿ. ತಮ್ಮ ಕಷ್ಟಗಳೆಲ್ಲ ದೂರವಾಗಲಿ ಎಂದು ಪ್ರಾರ್ಥಿಸುತ್ತಾರೆ. ಆದರೆ, ಮತ್ತದೇ ನಿರಾಸೆಯ ಅಲೆಗಳು ಅಪ್ಪಳಿಸುತ್ತವೆ.

‘ಈಗ ಜನಸಂಖ್ಯೆ ಹೆಚ್ಚಿದೆ. ಬಟ್ಟೆ ತೊಳೆಯಲು ಸಾಬೂನು, ಸ್ನಾನಕ್ಕೆ ಸಾಬೂನು, ವಾಹನ ತೊಳೆಯಲೂ ರಾಸಾಯನಿಕ... ಇನ್ನೂ ಏನೇನೋ ಕೆಲಸಗಳಿಗೆಲ್ಲ ರಾಸಾಯನಿಕಗಳ ಬಳಕೆಯಾಗುತ್ತಿದೆ. ಆ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರ ನೇರ ಪರಿಣಾಮ ಮೀನಿನ ಸಂತತಿ ಮೇಲಾಗುತ್ತಿದೆ’ ಎಂದು ಅವರು ಹೇಳುತ್ತಾರೆ.

‘ಜಲಾಶಯಗಳೂ ಕಾರಣ’: ‘ಜಿಲ್ಲೆಯ ಪ್ರಮುಖ ನದಿಗಳಾದ ಕಾಳಿ, ಶರಾವತಿಯಲ್ಲಿ ಜಲಾಶಯಗಳಿವೆ. ಮಳೆ ಹೆಚ್ಚಾದ ಕೂಡಲೇ ಅವುಗಳಿಂದ ನದಿಗೆ ರಭಸವಾಗಿ ನೀರು ಹರಿಸುತ್ತಾರೆ. ಜಲಾಶಯದ ಈ ಭಾಗದಲ್ಲಿ ಬೆಳೆದಿರುವ, ಮೀನಿಗೆ ಆಹಾರವಾಗಿರುವ ಸಣ್ಣಪುಟ್ಟ ಮೀನು, ಕ್ರಿಮಿಗಳು ಕೊಚ್ಚಿಕೊಂಡು ಹೋಗುತ್ತವೆ. ಸಮುದ್ರಕ್ಕೆ ಬರುತ್ತಿದ್ದಂತೆ ಅವು ಸಾಯುತ್ತವೆ. ಇದರಿಂದಲೂ ಮೀನಿಗೆ ಆಹಾರದ ಕೊರತೆಯಾಗುತ್ತದೆ’ ಎನ್ನುವುದು ಅವರ ಮತ್ತೊಂದು ಪ್ರತಿಪಾದನೆ.

‘ಜಲಾಶಯದಲ್ಲಿ ನೀರು ಸಂಗ್ರಹವಾದಾಗ ಬ್ಯಾಕ್ಟೀರಿಯಾಗಳು, ಸಣ್ಣ ಜೀವಿಗಳು ಅದರ ತಳದಲ್ಲಿ ಉಳಿಯುತ್ತವೆ. ಜಲಾಶಯ ಭರ್ತಿಯಾದಾಗ ಕೇವಲ ಮೇಲ್ಭಾಗದ ನೀರನ್ನು ಹರಿಸಲಾಗುತ್ತದೆ. ಬಂಗಡೆ, ಭೂತಾಯಿ ಮುಂತಾದವುಗಳಿಗೆ ಸಣ್ಣಪುಟ್ಟ ಮೀನುಗಳೇ ಆಹಾರ. ಕೇವಲ ತಿಳಿನೀರಿನಿಂದ ಸಮುದ್ರದಲ್ಲಿ ಅವುಗಳಿಗೆ ಏನು ಸಿಗುತ್ತದೆ’ ಎಂಬುದು ಅವರು ಪ್ರಶ್ನೆಯಾಗಿದೆ.

ತೂಫಾನ್ ಸಮಸ್ಯೆ ತಂದಿದೆ: ‘ಎರಡು, ಮೂರು ವರ್ಷಗಳಿಂದ ವಿಪರೀತ ಎನ್ನುವಷ್ಟು ತೂಫಾನ್ (ಚಂಡಮಾರುತ) ಉಂಟಾಗುತ್ತಿದ್ದು, ಮತ್ಸ್ಯೋದಮಕ್ಕೆ ಭಾರಿ ಹೊಡೆತ ನೀಡಿದೆ. ಸಮುದ್ರದಲ್ಲಿ ನೀರು ಅಲ್ಲೋಲಕಲ್ಲೋಲ ಆದ ಕೂಡಲೇ ಮೀನುಗಳು ದಿಕ್ಕೆಟ್ಟು ಓಡುತ್ತವೆ. ಗುಜರಾತ್‌ನಿಂದ ಕೇರಳದವರೆಗೂ ಅವು ಚಲಿಸುತ್ತವೆ. ಒಮ್ಮೆ ತೂಫಾನ್ ಆಯ್ತೆಂದರೆ ಸಮುದ್ರ ಮತ್ತೆ ಸಹಜ ಸ್ಥಿತಿಗೆ ಬರಲು 15 ದಿನಗಳು ಬೇಕಾಗುತ್ತವೆ. ಬಳಿಕ ಮೀನುಗಳು ಪುನಃ ತಮಗೆ ಅನುಕೂಲವಾದ ಸ್ಥಳವನ್ನು ಹುಡುಕಿಕೊಂಡು ಬರುತ್ತವೆ. ಅಷ್ಟು ದಿನ ಮೀನುಗಾರನಿಗೂ ನಷ್ಟ ಕಟ್ಟಿಟ್ಟ ಬುತ್ತಿ’ ಎಂದು ಅನುಭವದಿಂದ ಹೇಳುತ್ತಾರೆ.

ಕಾರವಾರದಲ್ಲಿ ಹೆಚ್ಚು ಮೀನು ಸಿಗುತ್ತಿದ್ದ ಹಲವು ಕಡಲತೀರಗಳು ಸೀಬರ್ಡ್ ನೌಕಾನೆಲೆಯ ವಶವಾಗಿವೆ. ಸೀಮಿತ ಪ್ರದೇಶದಲ್ಲಿ ಮೀನುಗಾರಿಕೆಯ ಅನಿವಾರ್ಯತೆ ಉಂಟಾಗಿದೆ ಎಂದು ಮೀನುಗಾರಿಕಾ ಸಹಕಾರ ಸಂಘದ ಅಧ್ಯಕ್ಷರಾದ ಕೆ.ಟಿ.ತಾಂಡೇಲ ಹರಿಕಂತ್ರ ಖಾರ್ವಿ ವಿಶ್ಲೇಷಿಸುತ್ತಾರೆ.

ಸಣ್ಣ ಬಲೆಗಳ ಬಳಕೆ, ಬುಲ್ ಟ್ರಾಲ್, ಲೈಟ್ ಫಿಶಿಂಗ್ ನಿಷೇಧವಿದ್ದರೂ ಬಳಕೆ ಮುಂದುವರಿದಿರುವುದು ಸಮಸ್ಯೆಗೆ ಕಾರಣವಾಗಿದೆ. ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು ಎನ್ನುವುದು ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಒಕ್ಕೂಟದ ಅಧ್ಯಕ್ಷ ಗಣಪತಿ ಮಾಂಗ್ರೆ ಅವರ ಆಗ್ರಹ.

‘ಅವೈಜ್ಞಾನಿಕ ಮೀನುಗಾರಿಕೆಯೇ ಕಾರಣ’

‘ಅವೈಜ್ಞಾನಿಕ ಮೀನುಗಾರಿಕೆಯೇ ದೇಶದಲ್ಲಿ ಮತ್ಸ್ಯಕ್ಷಾಮಕ್ಕೆ ಮುಖ್ಯ ಕಾರಣ. ಸರ್ಕಾರಗಳು ವಿಜ್ಞಾನಿಗಳ, ತಜ್ಞರ ಮಾತಿಗೆ ಬೆಲೆ ಕೊಡದೇ ರಾಜಕೀಯಕ್ಕಾಗಿ ಬೇಕಾಬಿಟ್ಟಿ ಮೀನುಗಾರಿಕೆಗೆ ಅನುಮತಿ ಕೊಟ್ಟಿವೆ’ ಎನ್ನುವುದು ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಒಕ್ಕೂಟದ ಅಧ್ಯಕ್ಷ ಗಣಪತಿ ಮಾಂಗ್ರೆ , ಕಾರವಾರದ ಗಣಪತಿ ಮಾಂಗ್ರೆ ಅವರ ದೂರು.

‘ಹೊಸ ಮೀನುಗಾರಿಕಾ ದೋಣಿಗಳಿಗೆ ಅನುಮತಿ ಕೊಡುವುದಿಲ್ಲ ಎಂದು ಐದು ವರ್ಷಗಳ ಹಿಂದೆ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ, ಈಗೇನಾಗಿದೆ? ಮೀನುಗಾರರಲ್ಲದವರೂ ಮೀನುಗಾರಿಕೆಯನ್ನು ವ್ಯಾಪಾರೀಕರಣ ಮಾಡಿಕೊಂಡರು. ಇದು ಎಲ್ಲ ಸರ್ಕಾರಗಳ ತಪ್ಪು. ಯಾವುದೇ ಕಾರಣಕ್ಕೂ ಮೂಲ ವೃತ್ತಿಯಲ್ಲದವರು ಮೀನುಗಾರಿಕೆ ನಡೆಸಲು ಅವಕಾಶ ಕೊಡಬಾರದು’ ಎನ್ನುತ್ತಾರೆ ಅವರು.

ಉತ್ತರ ಕನ್ನಡದಲ್ಲಿ ಮೀನುಗಾರಿಕೆ

ವರ್ಷ; ಮೆಟ್ರಿಕ್ ಟನ್

2019– 20;1.10 ಲಕ್ಷ

2018– 19;1.22 ಲಕ್ಷ

* ಮಾಹಿತಿ: ಮೀನುಗಾರಿಕಾ ಇಲಾಖೆ

ಉತ್ತರ ಕನ್ನಡದಲ್ಲಿ ದೋಣಿಗಳು

1,124 - ಯಾಂತ್ರೀಕೃತ

130 - ಪರ್ಸೀನ್

994 - ಟ್ರಾಲರ್

2,600 - ಯಾಂತ್ರೀಕೃತ

6,500 - ಸಾಂಪ್ರದಾಯಿಕ

10,500 - ಒಟ್ಟು ದೋಣಿಗಳು (ಸುಮಾರು)

* ಮಾಹಿತಿ: ಮೀನುಗಾರಿಕಾ ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು