ಶನಿವಾರ, ಮೇ 28, 2022
21 °C

ವಸತಿ ಯೋಜನೆ:ಕಾನೂನಾತ್ಮಕ ಬದ್ಧತೆ ಪ್ರಕಟಿಸಿ- ರವೀಂದ್ರ ನಾಯ್ಕ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಸರ್ಕಾರದ ಅಸ್ಪಷ್ಟ ನಿಲುವಿನಿಂದಾಗಿ ವಸತಿ ಯೋಜನೆ ಸೌಲಭ್ಯ ನೀಡುವಲ್ಲಿ ಕಾನೂನು ತೊಡಕು ಉಂಟಾಗುತ್ತಿದೆ. ಇದರ ನಿವಾರಣೆಗೆ ವಿವಿಧ ಇಲಾಖೆಗಳ ಇತ್ತೀಚಿನ ಆದೇಶಗಳ ಕಾನೂನಾತ್ಮಕ ಬದ್ಧತೆಯ ಮೌಲ್ಯತೆ ಪ್ರಕಟಿಸಲು ಅಧಿಕಾರಿಗಳಿಗೆ ಸೂಚಿಸುವಂತೆ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

‘ಬಡವರಿಗೆ ನ್ಯಾಯಯುತವಾಗಿ ವಸತಿ ಯೋಜನೆಯ ಲಾಭ ಸಿಗಬೇಕಿದೆ. ಆದರೆ ಸ್ವಂತ ಜಾಗ ಹೊಂದಿಲ್ಲದ ಅರಣ್ಯಭೂಮಿ ಸಾಗುವಳಿದಾರರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಅವರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮವಾಗಬೇಕು’ ಎಂದು ರವೀಂದ್ರ ಒತ್ತಾಯಿಸಿದ್ದಾರೆ.

‘ವಸತಿ ಯೋಜನೆ ಅಡಿ ಅರಣ್ಯಭೂಮಿಯಲ್ಲಿ ವಾಸಿಸುತ್ತಿದ್ದು, ಮನೆ ತೆರಿಗೆ ಪಾವತಿಸುತ್ತಿರುವವರಿಗೆ ಮನೆ ನಿರ್ಮಿಸಿಕೊಳ್ಳಲು ಸಹಾಯಧನ ನೀಡುವುದಾಗಿ ವಸತಿ ಇಲಾಖೆ ಆದೇಶಿಸುತ್ತದೆ. ಆದರೆ, ಇನ್ನೊಂದು ಕಡೆಯಲ್ಲಿ ಇದೇ ಆದೇಶಕ್ಕೆ ಪ್ರತಿಕೂಲವಾಗಿ ಅರಣ್ಯ ಇಲಾಖೆ, ಜಿಲ್ಲಾ ಪಂಚಾಯ್ತಿ ಸಿಇಓ ಆದೇಶಿಸಿದ್ದಾರೆ. ಇದರಿಂದ ಜನರು ಗೊಂದಲಕ್ಕೆ ಸಿಲುಕಿದ್ದಾರೆ’ ಎಂದಿದ್ದಾರೆ.

‘ವಸತಿ ಯೋಜನೆಗೆ ಸ್ವಂತ ನಿವೇಶನದ ಹಕ್ಕು ಪತ್ರ ಹೊಂದಿರಬೇಕು ಎಂಬ ಷರತ್ತನ್ನು ಜಿಲ್ಲಾ ಪಂಚಾಯ್ತಿ ಸಿಇಓ ವಿಧಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ವಸತಿ ಯೋಜನೆ ಮಂಜೂರು ಮಾಡಬಾರದು. ಮಾಡಿದ್ದಲ್ಲಿ ರದ್ದುಪಡಿಸಬೇಕು. ಇಲ್ಲದಿದ್ದರೆ  ಪಿಡಿಓಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಅನಧೀಕೃತ ಅರಣ್ಯವಾಸಿಗಳಿಗೆ ವಿನಾಯಿತಿ ನೀಡುವುದಾಗಲಿ, ಅವರೊಂದಿಗೆ ರಾಜಿ ಮಾಡಿಕೊಳ್ಳುವುದಾಗಲಿ ಅವಕಾಶವಿಲ್ಲ. ಅರಣ್ಯ ಅತಿಕ್ರಮಣದಾರರಿಗೆ ರಕ್ಷಣೆ ನೀಡಬಾರದು ಎಂದು ಸುಪ್ರಿಂಕೋರ್ಟ್ ಆದೇಶಿಸಿದೆ’ ಎಂದಿರುವ ಅವರು, ‘ಇವೆಲ್ಲ ಗೊಂದಲ ನಿವಾರಿಸಿ ಜನರಿಗೆ ಸ್ಪಷ್ಟತೆ ನೀಡಿ’ ಎಂದಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು