ಶುಕ್ರವಾರ, ಜೂನ್ 18, 2021
21 °C
ಸೋಮವಾರ ಬೆಳಿಗ್ಗೆ 6ರವರೆಗೆ ಆದೇಶ ಜಾರಿ

ವಾರಾಂತ್ಯದ ಕರ್ಫ್ಯೂಗೆ ಜಿಲ್ಲೆ ಸ್ತಬ್ಧ- ಮನೆಯಲ್ಲೇ ಉಳಿದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ರಾಜ್ಯದಲ್ಲಿ ವಾರಾಂತ್ಯದಲ್ಲಿ ಕರ್ಫ್ಯೂ ಜಾರಿ ಮಾಡಿರುವ ಕಾರಣ, ನಗರದಲ್ಲಿ ಶನಿವಾರ ವಾಣಿಜ್ಯ ಚಟುವಟಿಕೆಗಳು ಸ್ತಬ್ಧವಾಗಿದ್ದವು. ಜನ ಮನೆಗಳಲ್ಲೇ ಇದ್ದು, ನಿಯಮವನ್ನು ಪಾಲಿಸಿದರು.

ಬೆಳಿಗ್ಗೆ 6ರಿಂದ 10ರ ತನಕ ಮಾತ್ರ ಜನ ಮನೆಗಳಿಂದ ಹೊರಗೆ ಬರಲು ಅವಕಾಶ ನೀಡಲಾಗಿದೆ. ಹಾಗಾಗಿ ಆ ಅವಧಿಯಲ್ಲಿ ಹಾಲು, ತರಕಾರಿ ಮುಂತಾದ ಅತ್ಯವಶ್ಯಕ ವಸ್ತುಗಳನ್ನು ಖರೀದಿಸಿದರು. ಕರ್ಫ್ಯೂ ಜಾರಿಯಾಗುವ ಕ್ಷಣ ಸಮೀಪಿಸುತ್ತಿದ್ದಂತೆ ಪೊಲೀಸರು ಗಸ್ತು ಸಂಚರಿಸಿದರು.

ಜನರ ಓಡಾಟ ಇಲ್ಲದ ಕಾರಣ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರವೂ ವಿರಳವಾಗಿತ್ತು. ನಗರಕ್ಕೆ ಶಿರಸಿ, ಹುಬ್ಬಳ್ಳಿ ಮತ್ತು ಕುಮಟಾ ಕಡೆಯಿಂದ ಒಂದೆರಡು ಬಸ್‌ಗಳಷ್ಟೇ ಬಂದವು. ಔಷಧ ಮಳಿಗೆಗಳು ಮಾತ್ರ ಬಾಗಿಲು ತೆರೆದಿದ್ದವು. ಬಟ್ಟೆ ಮಳಿಗೆ, ಹೋಟೆಲ್‌ಗಳು, ಬೇಕರಿಗಳು, ಕಟ್ಟಡ ಸಾಮಗ್ರಿ ವ್ಯಾಪಾರಸ್ಥರು ಕೂಡ ಕರ್ಫ್ಯೂಗೆ ಸಹಕರಿಸಿದರು. ಹೀಗಾಗಿ ನಗರದ ಪ್ರಮುಖ ರಸ್ತೆಗಳು ನಿರ್ಜನವಾಗಿದ್ದವು.

ಸದಾ ವಾಹನಗಳಿಂದ ಗಿಜಿಗುಡುವ ರಾಷ್ಟ್ರೀಯ ಹೆದ್ದಾರಿ 66, ಕಾರವಾರ– ಇಳಕಲ್ ರಾಜ್ಯ ಹೆದ್ದಾರಿ, ಸದಾಶಿವಗಡ– ಜೊಯಿಡಾ ರಾಜ್ಯ ಹೆದ್ದಾರಿಗಳು ಖಾಲಿಯಾಗಿದ್ದವು.

ಜನರ ಸಂಚಾರವನ್ನು ತಡೆಯಲು ಪೊಲೀಸರು ಅಲ್ಲಲ್ಲಿ ಕಣ್ಗಾವಲು ವ್ಯವಸ್ಥೆ ಏರ್ಪಡಿಸಿದ್ದರು. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಭಾನುವಾರವೂ ನಿಗಾ ವಹಿಸಲಿದ್ದಾರೆ.

‘ಜನರ ಸಹಕಾರ ಅತ್ಯಗತ್ಯ’

‘ಕೊರೊನಾ ವೈರಸ್‌ನ ಎರಡನೇ ಅಲೆ ತೀವ್ರವಾಗಿ ದಾಳಿ ನಡೆಸಿದೆ. ಅದರ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಸರ್ಕಾರದೊಂದಿಗೆ ಸಹಕರಿಸಬೇಕು’ ಎಂದು ಶಾಸಕಿ ರೂಪಾಲಿ ನಾಯ್ಕ ಮನವಿ ಮಾಡಿದ್ದಾರೆ.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮರೋಪಾದಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ. ಲಸಿಕೆ ನೀಡಿಕೆ ಅಭಿಯಾನ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ. ರಾತ್ರಿ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂಗೆ ಸಹಕರಿಸಬೇಕು. ಜನ ಸ್ವಯಂಪ್ರೇರಿತರಾಗಿ ಮನೆಯಲ್ಲಿ ಇದ್ದುಕೊಂಡು ಕಾಳಜಿ ವಹಿಸಬೇಕು’ ಕೋರಿದ್ದಾರೆ.

‘ನೆಗಡಿ, ಜ್ವರ, ತಲೆನೋವು, ಗಂಟಲುನೋವು, ಕೆಮ್ಮು, ಉಸಿರಾಟದ ತೊಂದರೆ ಲಕ್ಷಣಗಳಿದ್ದಲ್ಲಿ ಅಥವಾ ಇದಾವುದೇ ಲಕ್ಷಣಗಳಿಲ್ಲದಿದ್ದರೂ ಸೋಂಕಿತರ ಸಂಪರ್ಕಕ್ಕೆ ಬಂದಲ್ಲಿ ಕೂಡಲೇ ಗಂಟಲುದ್ರವದ ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

‘ಕೊರೊನಾ ವೈರಸ್ ವಿರುದ್ಧ ಮತ್ತು ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರು, ಶುಶ್ರೂಷಕಿಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೊಲೀಸರು, ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಅಭಿನಂದನೀಯ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು’ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು