ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಬೆಳೆದು ನಿಂತ ಭತ್ತ: ಸರ್ಕಾರದತ್ತ ರೈತರ ಚಿತ್ತ

ಮಳೆ, ಕಾಡುಪ್ರಾಣಿ ಕಾಟದಿಂದ ಅನ್ನದಾತ ಕಂಗಾಲು: ಖರೀದಿ ಕೇಂದ್ರದ ನಿರೀಕ್ಷೆ
Last Updated 15 ನವೆಂಬರ್ 2021, 21:15 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯ ನಡುವೆಯೂ ಭತ್ತದ ಕಟಾವು ಮಾಡಲಾಗುತ್ತಿದೆ. ಹಲವು ಗದ್ದೆಗಳಲ್ಲಿ ಕೊಯ್ಲಿಗೆ ಸಿದ್ಧವಾಗಿದೆ. ಆದರೆ, ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರವನ್ನು ಇನ್ನೂ ಸರ್ಕಾರ ಪ್ರಕಟಿಸದಿರುವುದು ರೈತರನ್ನು ಯೋಚನೆಗೀಡು ಮಾಡಿದೆ.

ಕೊಯ್ಲು ಮಾಡಿದ ಭತ್ತ ಮಳೆಯಿಂದಾಗಿ ಹಾನಿಗೀಡಾಗುತ್ತಿದೆ. ಮಳೆಯಲ್ಲಿ ನೆನೆದು ಕಾಳು ಕಪ್ಪಾಗುತ್ತಿದೆ. ಜೊತೆಗೇ ಮೊಳಕೆಯೂ ಒಡೆಯುತ್ತಿವೆ. ಇದರಿಂದ ಭತ್ತದ ಗುಣಮಟ್ಟದಲ್ಲಿ ಇಳಿಕೆಯಾಗುತ್ತಿದ್ದು, ರೈತರು ಭಾರಿ ನಷ್ಟದ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಮಲೆನಾಡಿನ ತಾಲ್ಲೂಕುಗಳಲ್ಲಿ ಈ ಸಮಸ್ಯೆ ಹೆಚ್ಚಿದ್ದು, ಕಟಾವು ಮಾಡಿದ ಭತ್ತವನ್ನು ಸಂಗ್ರಹಿಸಿ ಇಡಲು ಸ್ಥಳಾಭಾವ ಎದುರಿಸುತ್ತಿದ್ದಾರೆ.

‘ಭತ್ತದ ಕೊಯ್ಲು ಮಾಡುವ ಸಂದರ್ಭದಲ್ಲೇ ಜೋರಾಗಿ ಮಳೆಯಾಗುತ್ತಿದೆ. ಭತ್ತದ ಗುಣಮುಟ್ಟ ಕುಸಿಯುತ್ತಿದ್ದು, ಅಕ್ಕಿ ಖರೀದಿಸುವವರು ಅರ್ಧ ದರಕ್ಕೆ ಕೇಳುತ್ತಾರೆ. ತೇವಾಂಶ ಜಾಸ್ತಿಯಿದೆ, ಭತ್ತ ಬೇಡವೆಂದು ಪುನಃ ತೆಗೆದುಕೊಂಡು ಹೋಗಲು ಹೇಳುತ್ತಾರೆ’ ಎಂದು ಕೃಷಿಕರೂ ಆಗಿರುವ ಜೊಯಿಡಾದ ಕುಣಬಿ ಸಮಾಜದ ಅಧ್ಯಕ್ಷ ಜಯಾನಂದ ಡೇರೇಕರ್ ಸಮಸ್ಯೆ ವಿವರಿಸುತ್ತಾರೆ.

‘ಜೊಯಿಡಾದಲ್ಲಿ ಬಹುತೇಕ ಎಲ್ಲರೂ ಸಣ್ಣ ರೈತರು. ಅವರಿಗೆ ಭತ್ತ ಖರೀದಿ ಕೇಂದ್ರ ಆರಂಭವಾಗದಿದ್ದರೆ ಮತ್ತಷ್ಟು ನಷ್ಟವಾಗುತ್ತದೆ. ಕಳೆದ ವರ್ಷ ಕ್ವಿಂಟಲ್‌ಗೆ ಬೆಂಬಲ ಬೆಲೆ ₹ 1,868 ನಿಗದಿ ಮಾಡಲಾಗಿತ್ತು. ಈ ವರ್ಷ ₹ 1,940ಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ದರ ಏರಿಕೆ ಮಾಡಿದ್ದರೂ ಖರೀದಿ ಕೇಂದ್ರವನ್ನು ಇನ್ನೂ ನಿಗದಿ ಮಾಡಿಲ್ಲ. ಕಳೆದ ವರ್ಷವೂ ಕೊನೆಯ ಎರಡು ದಿನ ಮಾತ್ರ ಖರೀದಿಸಲಾಯಿತು. ಅಷ್ಟರಲ್ಲಿ ಬಹುತೇಕ ರೈತರು ಭತ್ತ ಮಾರಾಟ ಮಾಡಿದ್ದರು’ ಎಂದು ಹೇಳುತ್ತಾರೆ.

ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ರೈತರು ಕೂಡ ಭತ್ತದ ಖರೀದಿ ಕೇಂದ್ರ ಆರಂಭವಾಗುವುದನ್ನು ಕಾಯುತ್ತಿದ್ದಾರೆ. ಕಟಾವಾದ ಬಳಿಕ ಮಳೆಯಿಂದ ತೊಯ್ದ ತೆನೆಯನ್ನು ರೈಲು ಹಳಿಗಳು, ಹೆದ್ದಾರಿ, ರಸ್ತೆಗಳ ಅಂಚಿನಲ್ಲಿ ಹರವಿಟ್ಟು ಒಣಗಿಸಲು ಯತ್ನಿಸುವ ದೃಶ್ಯಗಳು ಸಾಮಾನ್ಯವಾಗಿವೆ.

‘ಬಂಗಾರ’ದ ಹೊಲ:

ಜೊಯಿಡಾದ ಮುಡಿಯೆ, ಡೇರಿಯಾ ಸುತ್ತಮುತ್ತ ತೆನೆಗಳನ್ನು ಮುಡಿದಿರುವ ಪೈರು, ಬಂಗಾರದ ಬಣ್ಣಕ್ಕೆ ತಿರುಗಿವೆ. ಈ ಭಾಗದಲ್ಲಿ ಮೆಟ್ಟಿಲು ಪದ್ಧತಿಯಲ್ಲಿ ನಾಟಿ ಮಾಡಲಾಗುತ್ತಿದ್ದು, ನೋಡುಗರ ಮನಸೂರೆ ಮಾಡುತ್ತಿವೆ.

ಈ ಪ್ರದೇಶದಲ್ಲಿ ಗಂಧಸಾಲೆ, ಕುಮುದಾ, ಪೂನಂ, ಜಯಾ, ಅಂಕುರ್ ಸೋನಾ, ಸೋರಟ, ತಾಂಬ್ಡೆ ಪೂನಂ ಮತ್ತು ಚಿಂಟು ಎಂಬ ಎಂಟು ಭತ್ತದ ತಳಿಗಳನ್ನು ರೈತರು ಬೇಸಾಯ ಮಾಡಿದ್ದಾರೆ. ಫಸಲು ಈಗ ಕಟಾವಿಗೆ ಸಿದ್ಧವಾಗಿವೆ.

ಕಾಡು ಪ್ರಾಣಿಗಳ ಹಾವಳಿ:

ಅರಣ್ಯದಂಚಿನ ಹೊಲಗಳಿಗೆ ಕಾಡುಪ್ರಾಣಿಗಳ ಕಾಟವೂ ಹೆಚ್ಚಾಗಿದೆ. ಹುಲಿ, ಚಿರತೆಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಜಿಂಕೆ, ಕಾಡುಕೋಣ, ಕಾಡೆಮ್ಮೆ, ಕಾಡಹಂದಿಗಳು ಕಾಡಿನ ಅಂಚಿನಲ್ಲಿರುವ ಹೊಲಗಳ ಸುತ್ತಮುತ್ತ ವಾಸಿಸುತ್ತಿವೆ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.

‘ಮೊದಲು ಜಿಂಕೆಗಳು ಊರಿನೊಳಗೆ ಬರುತ್ತಿರಲಿಲ್ಲ. ಈಗ ಹೊಲದ ಮಧ್ಯೆಯೇ ಕಾಣಿಸಿಕೊಳ್ಳುತ್ತಿದ್ದು, ನಿಯಂತ್ರಣವೂ ನಮಗೆ ತಿಳಿಯದಾಗಿದೆ. ಕಟಾವಿಗೆ ಸಿದ್ಧವಾಗಿರುವ ಭತ್ತ ಹೊಲದಲ್ಲಿ ಇದ್ದಷ್ಟೂ ದಿನ ಅವುಗಳು ಅಲ್ಲೇ ಇರುತ್ತವೆ. ಹಾಗಾಗಿ ಭತ್ತ ಖರೀದಿಯು ಬೇಗನೇ ಆರಂಭವಾಗಬೇಕು’ ಎಂದು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಸಮೀಪದ ಕೃಷಿಕರೊಬ್ಬರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

–––––––

* ತುಳಸಿ ಹಬ್ಬದ ಬಳಿಕ ಬಹುತೇಕ ಕಡೆಗಳಲ್ಲಿ ಭತ್ತ ಕಟಾವು ಮಾಡಲಾಗುತ್ತದೆ. ಇನ್ನು 15 ದಿನಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯದಿದ್ದರೆ ರೈತರಿಗೆ ಹೆಚ್ಚು ಪ್ರಯೋಜನವಾಗದು.

– ಜಯಾನಂದ ಡೇರೇಕರ್, ಕುಣಬಿ ಸಮಾಜದ ಮುಖಂಡ.

* ಭತ್ತ ಖರೀದಿ ಕೇಂದ್ರವು ಸರ್ಕಾರದಿಂದ ಆಗುತ್ತದೆ. ರಾಜ್ಯದಲ್ಲಿ ಸದ್ಯ ನಾಲ್ಕು ಜಿಲ್ಲೆಗಳಲ್ಲಿ ತೆರೆಯಲಾಗಿದೆ. ಉತ್ತರ ಕನ್ನಡದಲ್ಲೂ ಶೀಘ್ರವೇ ಆರಂಭವಾಗುವ ನಿರೀಕ್ಷೆಯಿದೆ.

– ಮಂಜುನಾಥ ರೇವಣಕರ್, ಉಪ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT