ಭಾನುವಾರ, ಸೆಪ್ಟೆಂಬರ್ 26, 2021
23 °C
ಶಿಥಿಲಾವಸ್ಥೆಗೆ ತಲುಪಿದ ರೇಲಿಂಗ್, ಮೂಲ ಸೌಕರ್ಯಗಳ ಕೊರತೆ

ಹಣಕೋಣ: ದುರಸ್ತಿಗೆ ಕಾಯುತ್ತಿರುವ ಕಿರು ಜಲಾಶಯ

ವಿನಾಯಕ ಬ್ರಹ್ಮೂರು Updated:

ಅಕ್ಷರ ಗಾತ್ರ : | |

Prajavani

ಕಾರವಾರ: ತಾಲ್ಲೂಕಿನ ಹಣಕೋಣದ ಕಿರು ಜಲಾಶಯದ ಸುತ್ತಮುತ್ತ ಸೂಕ್ತ ನಿರ್ವಹಣೆ ಇಲ್ಲದೇ ಪ್ರವಾಸಿಗರು ಬೇಸರಗೊಂಡಿದ್ದಾರೆ. ನಿಸರ್ಗದ ಸೊಬಗನ್ನು ಸವಿಯಲು ನಿರ್ಮಿಸಲಾದ ಪ್ರದೇಶವೀಗ ಶಿಥಿಲಾವಸ್ಥೆಗೆ ತಲುಪಿದೆ. 

ಜಲಾಶಯದತ್ತ ಸಾಗಲು ಅಳವಡಿಸಿರುವ ಪ್ಲಾಟ್‌ಫಾರಂನ ರೇಲಿಂಗ್ ತುಕ್ಕು ಹಿಡಿದಿದೆ. ಅಲ್ಲದೇ ಒಂದೆರಡು ಕಡೆ ತುಂಡಾಗಿ ಬಿದ್ದಿದೆ. ಇಲ್ಲಿ ಪ್ರವಾಸಿಗರು ಹೆಜ್ಜೆ ಹಾಕುವಾಗ ಅತ್ಯಂತ ಎಚ್ಚರಿಕೆಯಿಂದ ಇರಬೇಕಿದೆ. ಉತ್ತಮ ಪ್ರವಾಸಿ ತಾಣವಾಗಲು ಅರ್ಹವಾಗಿರುವ ಈ ಸ್ಥಳದ ನಿರ್ವಹಣೆಯ ಬಗ್ಗೆ ಗಮನ ಹರಿಸಬೇಕು ಎನ್ನುವುದು ಪ್ರವಾಸಿಗರ ಆಗ್ರಹವಾಗಿದೆ. 

45 ವರ್ಷಗಳ ಹಿಂದೆ ನಿರ್ಮಾಣ: 1974– 75ನೇ ಸಾಲಿನಲ್ಲಿ  ಈ ಕಿರು ಜಲಾಶಯವನ್ನು ನಿರ್ಮಾಣ ಮಾಡಲಾಗಿತ್ತು. ಹಣಕೋಣ ಭಾಗದ 3.98 ಹೆಕ್ಟೇರ್ ಜಮೀನಿಗೆ ಇಲ್ಲಿಯ ನೀರನ್ನು ಬಳಸಲಾಗುತ್ತಿದೆ. ಭತ್ತ, ಕಲ್ಲಂಗಡಿ ಬೆಳೆಗಳನ್ನು ಇಲ್ಲಿನ ರೈತರು ಹೆಚ್ಚಾಗಿ ಬೆಳೆಯುತ್ತಿದ್ದಾರೆ.

ಜಲಾಶಯದಿಂದಾಗಿ ಈ ಭಾಗದಲ್ಲಿ ಅಂತರ್ಜಲದ ಮಟ್ಟ ಉತ್ತಮವಾಗಿದ್ದು, ಏಪ್ರಿಲ್–ಮೇ ತಿಂಗಳಿನಲ್ಲಿಯೂ ರೈತರಿಗೆ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೂ ಅವಕಾಶಗಳಿವೆ ಎನ್ನುತ್ತಾರೆ ಪ್ರವಾಸಿಗರಾದ ಸರೋಜಾ.

ಕುಂದು–ಕೊರತೆಗಳೇ ಹೆಚ್ಚು: ಕಾರವಾರದಿಂದ 15 ಕಿಲೋಮೀಟರ್ ದೂರದ ಹಣಕೋಣದ ಬಳಿ ಇರುವ ಈ ಕಿರು ಜಲಾಶಯವನ್ನು ಗುರುತಿಸಲು ಯಾವುದೇ ನಾಮಫಲಕವಿಲ್ಲ. ಸ್ಥಳೀಯರ ಬಳಿ ಮಾಹಿತಿ ಪಡೆದುಕೊಂಡೇ ಒಂದು ಕಿಲೋಮೀಟರ್ ದೂರ ಕಾಲ್ನಡಿಗೆಯಲ್ಲಿ ಕ್ರಮಿಸಬೇಕು.

ಜಲಾಶಯದ ಮತ್ತೊಂದು ತುದಿಯಲ್ಲಿರುವ ವ್ಯೂ ಪಾಯಿಂಟ್, ಗಿಡಗಂಟಿಗಳಿಂದಲೇ ಮುಚ್ಚಿ ಹೋಗಿದೆ. ಯಾವುದೇ ಮೂಲಸೌಕರ್ಯಗಳಿಲ್ಲ. ಪ್ಲಾಸ್ಟಿಕ್ ಬಾಟಲಿಗಳು, ತಿಂಡಿ ಪೊಟ್ಟಣಗಳನ್ನು ಹಾಕಲು ಕಸದ ಬುಟ್ಟಿಯೂ ಇಲ್ಲ. ಎಲ್ಲೆಂದರಲ್ಲಿ ಕಸಗಳನ್ನು ಬಿಸಾಡಲಾಗುತ್ತಿದೆ. ಹಾಗಾಗಿ ಪರಿಸರಕ್ಕೂ ಹಾನಿಯಾಗುತ್ತಿದೆ. ಹಾಗಾಗಿ ಈ ಸ್ಥಳವನ್ನು ಮತ್ತಷ್ಟು ಸುಂದರವಾಗಿಸಲು ಕಿರು ನೀರಾವರಿ ಇಲಾಖೆ ಗಮನ ಹರಿಸಬೇಕು ಎನ್ನುವುದು ಅವರ ಒತ್ತಾಯವಾಗಿದೆ.

‘ಏಪ್ರಿಲ್‌ನಲ್ಲಿ ಮತ್ತಷ್ಟು ದುರಸ್ತಿ’: ‘ಹಣಕೋಣ ಕಿರು ಜಲಾಶಯವನ್ನು ವರ್ಷಕ್ಕೊಮ್ಮೆ ಸಣ್ಣ ನೀರಾವರಿ ಇಲಾಖೆಯಿಂದ ಪ್ರತಿ ವರ್ಷಕ್ಕೊಮ್ಮೆ ನಿರ್ವಹಣೆ ಮಾಡಲಾಗುತ್ತದೆ. ಏಪ್ರಿಲ್ ತಿಂಗಳಿನಲ್ಲಿ ನೀರಿನ ಸಂಗ್ರಹ ಕಡಿಮೆಯಾಗುವ ಸಂದರ್ಭದಲ್ಲಿ ಮತ್ತಷ್ಟು ದುರಸ್ತಿ ಮಾಡಲಾಗುತ್ತದೆ’ ಎಂದು ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಮನೋಹರ್ ಪ್ರತಿಕ್ರಿಯಿಸಿದ್ದಾರೆ.

‘ವ್ಯೂ ಪಾಯಿಂಟ್‌ನ ರೇಲಿಂಗ್ ಶಿಥಿಲಗೊಂಡಿರುವುದು ಗಮನಕ್ಕೆ ಬಂದಿದೆ. ಅದನ್ನು ನೂತನವಾಗಿ ನಿರ್ಮಿಸಲು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಒಂದೂವರೆ ಕಿಲೋಮೀಟರ್ ವ್ಯಾಪ್ತಿಯ ಗಿಡಗಂಟಿಗಳನ್ನು ಕತ್ತರಿಸಲಾಗುತ್ತದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು