ಶುಕ್ರವಾರ, ಆಗಸ್ಟ್ 23, 2019
22 °C
ಶಾಲೆ–ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಣೆ; ಹೊಳೆ ನೋಡಿ ಸಂಭ್ರಮಿಸಿದ ಜನರು

ಹೊಳೆಗಳಿಗೆ ಪ್ರವಾಹ; ಕೃಷಿ ಭೂಮಿ ಜಲಾವೃತ

Published:
Updated:
Prajavani

ಶಿರಸಿ: ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ಹಳ್ಳಗಳು ಉಕ್ಕಿ ಹರಿದು ಕೃಷಿ, ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ಅಲ್ಲಲ್ಲಿ ಮರ ಮುರಿದು ಬಿದ್ದು ಅನೇಕ ಹಳ್ಳಿಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ನಗರದ ಮಾರಿಕಾಂಬಾ ದೇವಾಲಯದ ಪಕ್ಕದಲ್ಲಿರುವ ಧರ್ಮಛತ್ರದ ಹಳೆಯ ಗೋಡೆಯೊಂದು ಸೋಮವಾರ ಬೆಳಿಗ್ಗೆ ಕುಸಿದು, ನಾಗರಾಜ ಪೂಜಾರಿ ಎಂಬುವರಿಗೆ ಸೇರಿದ ಕಾರು ಜಖಂಗೊಂಡಿದೆ. ಘಟನೆಯಲ್ಲಿ ಸುವರ್ಣಾ ಪೂಜಾರಿ ಎಂಬ ವೃದ್ಧೆಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಕೊಡ್ನಗದ್ದೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಬಸವನ ಹೊಳೆ ತುಂಬಿ, ಅಕ್ಕಪಕ್ಕದ ಭತ್ತದ ಗದ್ದೆ, ಅಡಿಕೆ ತೋಟಗಳನ್ನು ಆವರಿಸಿದೆ. ಸುಮಾರು 50 ಎಕರೆ ಕೃಷಿ ಭೂಮಿಯಲ್ಲಿ ಬೆಳೆಹಾನಿಯಾಗಿದೆ ಎಂದು ಸ್ಥಳೀಯ ಪ್ರವೀಣ ಹೆಗಡೆ ತಿಳಿಸಿದ್ದಾರೆ.

ವಾನಳ್ಳಿಯಲ್ಲಿ ಶೇಡಿಹೊಳೆಗೆ ಪ್ರವಾಹ ಬಂದಿದ್ದು, ಹೊಳೆಯಂಚಿನ ಭತ್ತದ ಗದ್ದೆ ನೀರಿನಲ್ಲಿ ಮುಳುಗಿದೆ. ಅಡಿಕೆ ತೋಟದಲ್ಲಿ ನೀರು ನಿಂತು, ಮರಗಳಿಗೆ ಹಾಕಿರುವ ಗೊಬ್ಬರ ಕೊಚ್ಚಿಕೊಂಡು ಹೋಗಿದೆ. 50 ಎಕರೆಗೂ ಅಧಿಕ ತೋಟಕ್ಕೆ ಹಾನಿ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಮೂರ್ನಾಲ್ಕು ದಶಕಗಳ ನಂತರ ಮೊದಲ ಬಾರಿಗೆ ಈ ಹೊಳೆಗೆ ನೆರೆ ಬಂದಿದೆ. ಪಟ್ಟಣದ ಹೊಳೆ, ತಣ್ಣೀರು ಹೊಳೆಗಳಿಗೂ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಸುತ್ತಲಿನ ಅಡಿಕೆ ತೋಟಗಳು ಜಲಾವೃತಗೊಂಡಿವೆ.

ಔಡಾಳದ ಹೊಳೆ ಉಕ್ಕಿ 20 ಎಕರೆ ಅಡಿಕೆ ತೋಟ, 20 ಎಕರೆ ಭತ್ತದ ಗದ್ದೆಗೆ ನೀರು ನುಗ್ಗಿದೆ. ಕೆ.ಜಿ.ಹೆಗಡೆ, ಚಂದ್ರಶೇಖರ ಹೆಗಡೆ, ಮಧುಕೇಶ್ವರ ಹೆಗಡೆ, ಮಹಾದೇವ ಮರಾಠಿ, ಓಮು ಮರಾಠಿ ಅವರ ಕೃಷಿ ಕ್ಷೇತ್ರಕ್ಕೆ ಹಾನಿಯಾಗಿದೆ.

ನಿರಂತರ ಮಳೆಗೆ ಹೆಬ್ಬತ್ತಿ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದಿದೆ. ಶಿವಳ್ಳಿ ಗ್ರಾಮದ ಹೊನ್ನೆಕಟ್ಟೆ ಮಜಿರೆಯ ರಸ್ತೆ ಕೊಚ್ಚಿ ಹೋಗಿದೆ. ನಗರದ ಅಶ್ವಿನಿ ವೃತ್ತದ ಬಳಿ ಹಿರೊ ಶೋ ರೂಮ್‌ನ ಏಳು ಹೊಸ ಬೈಕ್‌ಗಳಿಗೆ ಹಾನಿಯಾಗಿದೆ.

ಶಾಲ್ಮಲಾ, ಬೇಡ್ತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮಳೆಯ ಅಬ್ಬರಕ್ಕೆ ಗೋಳಿಮಕ್ಕಿ ಹೋಗುವ ರಸ್ತೆಯಲ್ಲಿ ಸರಕುಳಿ ಹೊಳೆ ತುಂಬಿ, ಸೇತುವೆ ಮುಳುಗಡೆಯಾಗಿತ್ತು. ಧಾರಾಕಾರ ಮಳೆಯಲ್ಲೂ ಜನರು ಹೊಳೆ ತುಂಬಿರುವ ಸಂಭ್ರಮವನ್ನು ನೋಡಲು ಬಂದಿದ್ದರು.

Post Comments (+)