ಮಂಗಳವಾರ, ಆಗಸ್ಟ್ 16, 2022
20 °C
ವಿವಿಧ ತೋಟಗಳಲ್ಲಿ ಸಮಸ್ಯೆ: ಬೆಳೆ ನಷ್ಟವಾಗುವ ಆತಂಕದಲ್ಲಿ ಕೃಷಿಕ

ಅಕಾಲಿಕ ಮಳೆ: ಉದುರುತ್ತಿವೆ ಅಡಿಕೆ ಮಿಳ್ಳೆ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕಳೆದ ವರ್ಷ ಅಕಾಲಿಕ ಮಳೆಯ ಪರಿಣಾಮಗಳು ಈಗಲೂ ಮುಂದುವರಿದಿವೆ. ಫಲಭರಿತ ಅಡಿಕೆ ಮರಗಳಿಂದ ಮುಗುಟು (ಎಳೆಯ ಅಡಿಕೆ) ಉದುರುತ್ತಿದ್ದು, ತೋಟಗಳಲ್ಲಿ ರಾಶಿರಾಶಿ ಕಾಣಸಿಗುತ್ತಿವೆ. ಇದರಿಂದ ಕೃಷಿಕರು ಫಸಲು ಕೈತಪ್ಪುವ ಆತಂಕದಲ್ಲಿದ್ದಾರೆ.

ಅಡಿಕೆಗೆ ಮಾರುಕಟ್ಟೆಯಲ್ಲಿ ಉತ್ತಮ ದರವಿದೆ. ಬೆಳೆಗಾರರು ಒಂದಷ್ಟು ಆದಾಯ ಕಾಣುವ ನಿರೀಕ್ಷೆಯಲ್ಲಿದ್ದಾಗಲೇ ಈ ರೀತಿಯ ಸಮಸ್ಯೆ ಎದುರಾಗಿದೆ. ಹೊನ್ನಾವರ ತಾಲ್ಲೂಕಿನ ಕವಲಕ್ಕಿ ಸೇರಿದಂತೆ ಹಲವು ಗ್ರಾಮಗಳ ತೋಟಗಳಲ್ಲಿ ಅಡಿಕೆ ಮರಗಳು ಬರಿದಾಗುತ್ತಿವೆ.

‘ಕಳೆದ ವರ್ಷ ಡಿಸೆಂಬರ್‌ ತನಕವೂ ಮಳೆಯಾಗಿದೆ. ಹಾಗಾಗಿ ಅಡಿಕೆ ಮರಗಳಲ್ಲಿ ಸಿಂಗಾರ ಅರಳುವ ಸಂದರ್ಭದಲ್ಲೂ ಅಕಾಲಿಕವಾಗಿ ವರ್ಷಧಾರೆಯಾಗಿದೆ. ಇದರಿಂದ ಸಿಂಗಾರದಲ್ಲಿ ಮಳೆ ನೀರು ನಿಂತಿತ್ತು. ಇದರಿಂದ ಅಡಿಕೆ ಮಿಳ್ಳೆ (ಮುಗುಟು) ಸೂಕ್ತ ಬೆಳವಣಿಗೆ ಕಾಣಲು ಸಾಧ್ಯವಾಗಲಿಲ್ಲ. ಈಗ ತೋಟದ ತುಂಬ ಮಿಳ್ಳೆಗಳು ಬಿದ್ದಿವೆ. ಇದು ಮುಂಬರುವ ಬೆಳೆಗೆ ದೊಡ್ಡ ಹೊಡೆತವಾಗಲಿದೆ’ ಎಂದು ಕವಲಕ್ಕಿಯ ಅಡಿಕೆ ಬೆಳೆಗಾರ ವಿನಯ ಶೆಟ್ಟಿ ಕಳವಳ ವ್ಯಕ್ತಪಡಿಸುತ್ತಾರೆ.

ಮಳೆಗಾಲದ ಅವಧಿಯನ್ನು ಹೊರತಾಗಿಯೂ ಮಳೆಯಾಗಿದ್ದರಿಂದ ತೋಟಗಳಿಗೆ ಗೊಬ್ಬರ, ಮಣ್ಣು ಹಾಕಲು ಸಾಧ್ಯವಾಗಲಿಲ್ಲ. ಇದರಿಂದ ಅಡಿಕೆ ಮರಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳು ಸಿಕ್ಕಿಲ್ಲ. ಇದೂ ಕೂಡ ಅಡಿಕೆ ಮುಗುಟು ಬೀಳಲು ಕಾರಣವಾಗಿರಬಹುದು ಎನ್ನುತ್ತಾರೆ ಬೆಳೆಗಾರರು.

ವಾತಾವರಣದಲ್ಲಿ ಬದಲಾವಣೆ
‘ಅಕಾಲಿಕ ಮಳೆಯಿಂದಾಗಿ ಈ ಸಮಯದಲ್ಲಿ ಅಡಿಕೆ ಮಿಳ್ಳೆಗಳು ಬೀಳುತ್ತವೆ. ವಾತಾವರಣದಲ್ಲಿ ಉಷ್ಣಾಂಶದ ಭಾರಿ ಏರಿಳಿತ ಆದಾಗ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ವಾತಾವರಣದಲ್ಲಿ ಆದ ಬದಲಾವಣೆಯಿಂದ ಹೀಗಾಗಿರುವ ಕಾರಣ, ರೋಗ ನಿರೋಧಕ, ಕೀಟ ನಾಶಕ ಔಷಧಿ ಸಿಂಪಡಿಸಿದರೂ ಪ್ರಯೋಜನವಾಗದು. ಮಾರ್ಚ್, ಏಪ್ರಿಲ್‌ನಲ್ಲಿ ಮಿಳ್ಳೆಗಳು ಸಾಮಾನ್ಯವಾಗಿ ‘ಪೊಳ್ಳು ದುಂಬಿ’ ದಾಳಿಯಿಂದ ಉದುರುತ್ತವೆ. ಆಗ ನಿಯಂತ್ರಣ ಕ್ರಮ ಕೈಗೊಳ್ಳಬಹುದು’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸತೀಶ ಹೆಗಡೆ ತಿಳಿಸಿದ್ದಾರೆ.

*

ಶಿಲೀಂಧ್ರ ಕಾಟದಿಂದ ಅಡಿಕೆ ಮಿಳ್ಳೆಗಳು ಬೀಳುತ್ತವೆ. ಹವಾಮಾನ ಬದಲಾವಣೆಯೂ ಕಾರಣವಾಗುತ್ತದೆ. ಸ್ಥಳಕ್ಕೆ ಭೇಟಿ ನೀಡಲು ಸ್ಥಳೀಯ ಸಹಾಯಕ ನಿರ್ದೇಶಕರಿಗೆ ಸೂಚಿಸಲಾಗುವುದು.
-ಬಿ.ಪಿ.ಸತೀಶ್, ಉಪ ನಿರ್ದೇಶಕ ತೋಟಗಾರಿಕೆ ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು