ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿ, ಮಳೆಗೆ ನಲುಗಿದ ಮೀನುಗಾರಿಕೆ

ಲಂಗರು ಕಡಿದು ಟ್ಯಾಗೋರ್ ಕಡಲತೀರದ ಮರಳಿನಲ್ಲಿ ಸಿಲುಕಿದ ದೋಣಿಗಳು
Last Updated 21 ಸೆಪ್ಟೆಂಬರ್ 2020, 15:53 IST
ಅಕ್ಷರ ಗಾತ್ರ

ಕಾರವಾರ: ನಗರದಲ್ಲಿ ಭಾನುವಾರ ರಾತ್ರಿ ಶುರುವಾದ ರಭಸದ ಗಾಳಿ ಮತ್ತು ಮಳೆಯು, ಮೀನುಗಾರರಿಗೆ ಸಾಕಷ್ಟು ತೊಂದರೆ ತಂದಿಟ್ಟಿದೆ. ಆಳಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ 300ಕ್ಕೂ ಅಧಿಕ ದೋಣಿಗಳು ಅಬ್ಬರದ ಅಲೆಗೆ ಬೆದರಿ ಟ್ಯಾಗೋರ್ ಕಡಲತೀರದಲ್ಲಿ ಆಶ್ರಯ ಪಡೆದಿವೆ.

ಸಮುದ್ರವು ಪ್ರಕ್ಷುಬ್ಧಗೊಂಡ ಕಾರಣ ದಡಕ್ಕೆ ಮರಳಿದ ಸ್ಥಳೀಯ ದೋಣಿಗಳ ಜೊತೆಗೇ ಉಡುಪಿ, ಮಲ್ಪೆ ಭಾಗದ ಹಾಗೂ ಗೋವಾದ ದೋಣಿಗಳೂ ಹೆಚ್ಚಿವೆ. ಈ ರೀತಿ ಭಾನುವಾರ ರಾತ್ರಿ ಬಂದಿದ್ದ ಮಲ್ಪೆಯ ‘ಪ್ರಾವಿಡೆನ್ಸ್’ ಹೆಸರಿನ ದೋಣಿಯ ಲಂಗರು ಗಾಳಿ ಮತ್ತು ಅಲೆಗಳ ಅಬ್ಬರಕ್ಕೆ ತುಂಡಾಯಿತು. ಅಲೆಗಳಲ್ಲಿ ತೇಲಿಬಂದ ದೋಣಿಯು ಟ್ಯಾಗೋರ್ ಕಡಲತೀರದ ಮರಳಿನಲ್ಲಿ ಸಿಲುಕಿತು. ಇದೇ ರೀತಿ, ಲಂಡನ್‌ ಬ್ರಿಜ್ ಬಳಿ ದೋಣಿಯೊಂದು ದಡಕ್ಕೆ ಅಪ್ಪಳಿಸಿತು. ಎರಡೂ ದೋಣಿಗಳ ಮೀನುಗಾರರು ಸಾಕಷ್ಟು ಶ್ರಮಿಸಿ ದೋಣಿಯನ್ನು ಪುನಃ ನೀರಿಗೆ ಸೇರಿಸುವಲ್ಲಿ ಯಶಸ್ವಿಯಾದರು. ದೋಣಿಗಳಲ್ಲಿದ್ದವರಿಗೆ ಅದೃಷ್ಟವಶಾತ್ ಯಾವುದೇ ತೊಂದರೆಯಾಗಲಿಲ್ಲ.

ಇದೇ ರೀತಿ, ಗಾಳಿಗೆ ಸಿಲುಕಿದ ಮೂರು ನಾಲ್ಕು ಪಾತಿ ದೋಣಿಗಳೂ ಹಗ್ಗ ಕಡಿದು ದಡದಲ್ಲಿ ಬಂದು ಬಿದ್ದವು. ಅವುಗಳಲ್ಲಿದ್ದ ಬಲೆಗಳು ನೀರು ಪಾಲಾಗಿ ಮೀನುಗಾರರಿಗೆ ನಷ್ಟವಾಗಿದೆ.

ದೋಣಿ ಮುಳುಗಡೆ

ಅಲೆಗಳ ಅಬ್ಬರಕ್ಕೆ ಸಿಲುಕಿದ ಮಲ್ಪೆಯ ‘ಭ್ರಾಮರಿ’ ಹೆಸರಿನ ದೋಣಿಯು ಕಾರವಾರ ಸಮೀಪ ಭಾನುವಾರ ಮುಳುಗಿದೆ. ಜಾಹ್ನವಿ ಕೋಟ್ಯಾನ್ ಎಂಬುವವರಿಗೆ ಈ ದೋಣಿ ಸೇರಿದೆ. ಅದರಲ್ಲಿದ್ದ ಭಟ್ಕಳ ಮತ್ತು ಉಡುಪಿಯ ಏಳು ಮಂದಿ ಮೀನುಗಾರರು ಸಮೀಪದಲ್ಲಿದ್ದ ಮೀನುಗಾರಿಕಾ ದೋಣಿಗಳನ್ನು ಏರಿ ದಡ ಸೇರಿದರು. ಬಳಿಕ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದರು.

‘ಸಾಗರ ಮತ್ಸ್ಯಾಲಯದ ಸಮೀಪ ಏಂಡಿ ಬಲೆ ಹರಡಲು ಬಳಸುತ್ತಿದ್ದ ಸಾಂಪ್ರದಾಯಿಕ ದೋಣಿಯೊಂದು ಸಮುದ್ರದಲ್ಲಿ ಮುಳುಗಿದೆ. ಇದು ಖಾರ್ವಿವಾಡಾದ ಉದಯ ಬಾನಾವಳಿಕರ ಎಂಬುವವರಿಗೆ ಸೇರಿದ್ದಾಗಿತ್ತು. ಅದರಲ್ಲಿದ್ದ ಬಲೆ ನೀರು ಪಾಲಾಗಿದೆ. ಚೆಂಡಿಯಾ ಬಳಿ ಮಲ್ಪೆಯ ದೋಣಿಯೊಂದು ಭಾನುವಾರ ಮುಳುಗಿದೆ’ ಎಂದು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಿ. ನಾಗರಾಜು ತಿಳಿಸಿದ್ದಾರೆ.

ಈ ವರ್ಷವೂ ಸಮುದ್ರ ಪದೇಪದೇ ಪ್ರಕ್ಷುಬ್ಧವಾಗುತ್ತಿರುವುದು ಮೀನುಗಾರರ ಚಿಂತೆಗೆ ಕಾರಣವಾಗಿದೆ. ಸಮುದ್ರದಲ್ಲಿ ಮತ್ಸ್ಯಕ್ಷಾಮ ಒಂದೆಡೆಯಾದರೆ, ಸಿಗುವ ಮೀನನ್ನು ತರಲೂ ಹವಾಮಾನ ವೈಪರೀತ್ಯದಿಂದ ಸಾಧ್ಯವಾಗುತ್ತಿಲ್ಲ.

ಸಮುದ್ರ ಕೊರೆತ

ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸಿದ ಪರಿಣಾಮ ಟ್ಯಾಗೋರ್ ಕಡಲತೀರದುದ್ದಕ್ಕೂ ಅಲ್ಲಲ್ಲಿ ಕಡಲ್ಕೊರೆತ ಉಂಟಾಗಿದೆ. ಸಮುದ್ರದಡದಲ್ಲಿದ್ದ ಮರಗಳು ನೀರು ಪಾಲಾಗಿವೆ. ದೇವಭಾಗದಲ್ಲಿ ಕೂಡ ಇದೇ ಸಮಸ್ಯೆಯಾಗಿದ್ದು, ರೆಸಾರ್ಟ್ ಆವರಣಕ್ಕೆ ನೀರು ನುಗ್ಗಿದೆ.

ಶಿರಸಿಯಲ್ಲಿ ಜಿಟಿಜಿಟಿ ಮಳೆ

ತಾಲ್ಲೂಕಿನಲ್ಲಿ ಭಾನುವಾರ ರಾತ್ರಿಯಿಂದ ಜೋರಾದ ಗಾಳಿ ಬೀಸುತ್ತಿದೆ. ಸೋಮವಾರ ದಿನವಿಡೀ ಆಗಾಗ ಜಿಟಿಜಿಟಿ ಮಳೆ ಬಂತು. ಮಳೆಗಾಳಿಗೆ ಹಾನಿಯುಂಟಾದ ವರದಿಯಾಗಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಂಕೋಲಾದಲ್ಲಿ 24 ಗಂಟೆಗಳ (ಬೆಳಿಗ್ಗೆ 8) ಅವಧಿಯಲ್ಲಿ 22 ಸೆಂ.ಮೀ ಮಳೆಯಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ಇಲ್ಲಿ ಬಿದ್ದ ಅತಿಹೆಚ್ಚಿನ ವರ್ಷಧಾರೆಯಾಗಿದೆ. ಆದರೆ, ಮನೆಗಳಿಗೆ ನೀರು ನುಗ್ಗಿ ಸಮಸ್ಯೆಯಾದ ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT