ಭಾನುವಾರ, ಏಪ್ರಿಲ್ 11, 2021
33 °C
ಹಳಿಯಾಳದಲ್ಲಿ ₹ 22 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕೇಂದ್ರ

ಹಳಿಯಾಳ: ತಾನಾಜಿ ಗಲ್ಲಿಯಲ್ಲಿ ‘ಹೈಟೆಕ್’ ಅಂಗನವಾಡಿ

ಸಂತೋಷ ಹಬ್ಬು Updated:

ಅಕ್ಷರ ಗಾತ್ರ : | |

Prajavani

ಹಳಿಯಾಳ: ಒಂದು ಬದಿಯಲ್ಲಿ ಸುಂದರವಾದ ಕೈತೋಟ, ಮತ್ತೊಂದೆಡೆ ಆಟದ ಮೈದಾನದಲ್ಲಿ ಆಟಿಕೆಗಳು. ಹೊಸ ಕಟ್ಟಡದ ಒಳಗೆ ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಸುಸಜ್ಜಿತ ಕೊಠಡಿ. ಅಡುಗೆ ಕೋಣೆ, ದಾಸ್ತಾನು ಕೊಠಡಿ, ಶೌಚಾಲಯ ಎಲ್ಲವೂ ಸುವ್ಯವಸ್ಥಿತ.

ಇದು ಪಟ್ಟಣದ ತಾನಾಜಿ ಗಲ್ಲಿಯಲ್ಲಿ ₹ 22 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಹೈಟೆಕ್ ಅಂಗನವಾಡಿಯ ಸ್ಥೂಲ ಪರಿಚಯ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೋಕ ಕೋಲಾ ಕಂಪನಿಯ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.ಆರ್) ನಿಧಿ ಹಾಗೂ ಶಾಸಕರ ಅನುದಾನದಡಿ ಇದನ್ನು ನಿರ್ಮಿಸಲಾಗಿದೆ.

ಕಟ್ಟಡದ ಒಳಗೆ ನೈಸರ್ಗಿಕವಾಗಿ ಗಾಳಿ, ಬೆಳಕು ಸಾಕಷ್ಟು ಬರುವಂತೆ ವಿನ್ಯಾಸ ಮಾಡಲಾಗಿದೆ. ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಬರುತ್ತಿದ್ದಂತೆ ಸುಂದರವಾದ ಕೈ ತೋಟ ಮತ್ತು ಆಟಿಕೆಗಳು ಆಕರ್ಷಿಸುತ್ತವೆ. ಅದೇ ರೀತಿ, ಕಟ್ಟಡದ ಒಳಗೂ ಮಕ್ಕಳಿಗೆ ಆಟವಾಡಲು ವಿಶೇಷವಾದ ಪ್ರತ್ಯೇಕ ಕೊಠಡಿಯಿದೆ. ಮಕ್ಕಳಿಗೆ ಹಾಲುಣಿಸಲು (ಲ್ಯಾಕ್ಟೇಶನ್) ಕೊಠಡಿಯನ್ನೂ ಮೀಸಲಿಡಲಾಗಿದೆ. 

ಇಲ್ಲಿನ ಅಂಗನವಾಡಿ ಕೇಂದ್ರಕ್ಕೆ ಈ ಮೊದಲು ಸ್ವಂತ ಕಟ್ಟಡವಿರಲಿಲ್ಲ. ಇದು ಗಮನಕ್ಕೆ ಬಂದ ಬಳಿಕ ಶಾಸಕ ಆರ್.ವಿ.ದೇಶಪಾಂಡೆ ಕಾರ್ಯಪ್ರವೃತ್ತರಾದರು. ಪುರಸಭೆಗಾಗಿ ಮೀಸಲಿಟ್ಟ, ಭೂಪರಿವರ್ತನೆ ಮಾಡಿದ ಜಾಗವನ್ನು ಗುರುತಿಸಿ ಅಂಗನವಾಡಿ ಕಟ್ಟಡಕ್ಕೆ ಮಂಜೂರು ಮಾಡಿಸಿದರು. ಕೋಕಕೋಲಾ ಕಂಪನಿಯು ₹ 18 ಲಕ್ಷ ಹಾಗೂ ಶಾಸಕರ ಅನುದಾನದಿಂದ ₹ 4 ಲಕ್ಷವನ್ನು ಬಿಡುಗಡೆ ಮಾಡಿ ಕಟ್ಟಡವನ್ನು ನಿರ್ಮಿಸಲಾಯಿತು.

ಇಲ್ಲಿ ದಿನದ 24 ಗಂಟೆಯೂ ನೀರಿನ ಸೌಲಭ್ಯವಿದೆ. ಒಬ್ಬ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ನೇಮಕವಾಗಿದ್ದಾರೆ. ಕೋವಿಡ್-19 ಕಾರಣದಿಂದ ಮಕ್ಕಳಿಗೆ ತಮ್ಮ ತಮ್ಮ ಮನೆಯಲ್ಲಿಯೇ ಪೌಷ್ಟಿಕ ಆಹಾರ ಮತ್ತಿತರ ಅಂಗನವಾಡಿ ಕೇಂದ್ರದಿಂದ ವಿತರಿಸಲಾದ ಸೌಲಭ್ಯವನ್ನು ತಲುಪಿಸಲಾಗುತ್ತಿದೆ.

72 ಮಕ್ಕಳ ನೋಂದಣಿ:

‘ತಾನಾಜಿ ಗಲ್ಲಿಯಲ್ಲಿ ಈಗಾಗಲೇ ಸಮೀಕ್ಷೆ ಮಾಡಿದ ಪ್ರಕಾರ 72 ಮಕ್ಕಳು ದಾಖಲಾತಿಗಾಗಿ ನೊಂದಾಯಿಸಿದ್ದಾರೆ. ಮೂರರಿಂದ ಆರು ವರ್ಷದ ಒಳಗಿನ ಮಕ್ಕಳಿಗೆ ಹಾಲಿನ ಪುಡಿ, ಅಕ್ಕಿ, ಬೇಳೆ, ಮೊಟ್ಟೆ, ಹೆಸರು ಬೇಳೆ, ಬೆಲ್ಲ, ಹೆಸರು ಕಾಳು, ತೊಗರಿಬೇಳೆ ವಿತರಿಸಲಾಗುತ್ತಿದೆ. ಆರು ತಿಂಗಳಿಂದ ಮೂರು ವರ್ಷದ ಮಕ್ಕಳಿಗೆ ಪುಷ್ಟಿ ಹಿಟ್ಟು, ಹಾಲಿನ ಪುಡಿ ಸಕ್ಕರೆ ಹಾಗೂ ಇತರ ಧಾನ್ಯಗಳನ್ನು ವಿತರಿಸಲಾಗುತ್ತದೆ. ಜೊತೆಗೆ ಗರ್ಭಿಣಿ ಹಾಗೂ ಬಾಣಂತಿಯರಿಗೂ ಸೌಲಭ್ಯವನ್ನು ನೀಡಲಾಗುತ್ತಿದೆ’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಾ.ಲಕ್ಷ್ಮೀದೇವಿ.ಎಸ್ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು