ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಅನುಷ್ಠಾನಕ್ಕೆ ಮುನ್ನವೇ ಮುಗ್ಗರಿಸಿದ ‘ಜಲಾಮೃತ’

ಕಳೆದ ವರ್ಷ ಘೋಷಿಸಿದ್ದ ಯೋಜನೆಗೆ ಇನ್ನೂ ಬಾರದ ಅನುದಾನ
Last Updated 16 ಜೂನ್ 2020, 20:00 IST
ಅಕ್ಷರ ಗಾತ್ರ

ಶಿರಸಿ: ಜಲಮೂಲಗಳ ಪುನಶ್ಚೇತನ, ಜಲ ಸಂರಕ್ಷಣೆಯ ಮಹತ್ವಾಕಾಂಕ್ಷೆಯಿಂದ ರಾಜ್ಯ ಸರ್ಕಾರ ಪ್ರಕಟಿಸಿದ್ದ ಜಲಾಮೃತ ಯೋಜನೆಯು ಅನುಷ್ಠಾನಕ್ಕೆ ಮುನ್ನವೇ ಮುಗ್ಗರಿಸುವಂತಾಗಿದೆ. ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಗೆ ಇನ್ನೂ ಅನುದಾನ ಬಿಡುಗಡೆಯಾಗದಿರುವುದು ಇದಕ್ಕೆ ಕಾರಣವಾಗಿದೆ.

2019-20ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರವು ಸುಮಾರು 2000 ಜಲಸಂರಕ್ಷಣೆ, ಹಸಿರೀಕರಣ ಕಾಮಗಾರಿ ರೂಪಿಸಿ, ಮುಂಬರುವ ಎರಡು ವರ್ಷಗಳಲ್ಲಿ ಅನುಷ್ಠಾನಗೊಳಿಸುವುದಾಗಿ ಪ್ರಕಟಿಸಿತ್ತು. ಇವುಗಳಲ್ಲಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಎಲ್ಲ 11 ತಾಲ್ಲೂಕುಗಳಲ್ಲಿ ಕೆರೆಗಳ ಪುನರುಜ್ಜೀವನ ನಡೆಸಲು ₹ 6.19 ಕೋಟಿ ಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ, ಸರ್ಕಾರದಿಂದ ಈವರೆಗೂ ಈ ಸಂಬಂಧ ಅನುದಾನ ಬಿಡುಗಡೆಯಾಗಿಲ್ಲ ಎ‌ನ್ನುತ್ತಾರೆ ಅಧಿಕಾರಿಗಳು.

ಯೋಜನೆಯಂತೆ ಏಪ್ರಿಲ್‌ನಲ್ಲಿ ಕಾಮಗಾರಿ ಪ್ರಾರಂಭವಾಗಿದ್ದರೆ, ಮಳೆಗಾಲದ ಆರಂಭವಾಗುವುದರ ಒಳಗಾಗಿ ಜಿಲ್ಲೆಯಲ್ಲಿ ಹಲವಾರು ಕೆರೆಗಳ ಹೂಳೆತ್ತುವ ಕೆಲಸ ಪೂರ್ಣಗೊಳ್ಳುತ್ತಿತ್ತು. ಆದರೆ, ಕೋವಿಡ್ 19 ಸಾಂಕ್ರಾಮಿಕ ಕಾಯಿಲೆಯ ಕಾರಣ ಅರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಸರ್ಕಾರದಿಂದ ಅನುದಾನ ಬಿಡುಗಡೆ ವಿಳಂಬವಾಗಿದೆ. ಶಿರಸಿ ತಾಲ್ಲೂಕಿನಲ್ಲಿ ಸೋಂದಾ, ಎಸಳೆ, ಹುಸರಿ, ಬನವಾಸಿ ಹೋಬಳಿಯ ಎರಡು ಕೆರೆಗಳು ಸೇರಿ ಒಟ್ಟು ಐದು ಕೆರೆ ಕಾಮಗಾರಿ ನಡೆಸಲು ಯೋಜನೆ ರೂಪಿಸಲಾಗಿತ್ತು. ಒಂದು ಕೆರೆಗೆ ₹ 10 ಲಕ್ಷ ಅನುದಾನ ನಿಗದಿಯಾಗಿತ್ತು ಎನ್ನುತ್ತಾರೆ ಅವರು.

ಜಲಾಮೃತ ಯೋಜನೆ ಅನುಷ್ಠಾನ ಸಂಬಂಧ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಒಂದು ಸಭೆ ನಡೆದಿತ್ತು. ನಂತರ ಈ ಬಗ್ಗೆ ವಿಶೇಷ ಆಸಕ್ತಿ ತೋರಿ, ಯೋಜನೆ ಜಾರಿಗೆ ಪಂಚಾಯ್ತಿ ಮಟ್ಟದಲ್ಲಿ ಪ್ರಯತ್ನಗಳು ನಡೆದಿಲ್ಲ. ಇಂತಹ ಯೋಜನೆ ಜಾರಿಗೊಳಿಸುವಾಗ ಈ ಕ್ಷೇತ್ರದಲ್ಲಿ ಆಸಕ್ತರನ್ನು ಒಳಗೊಂಡು ವ್ಯಾ‍ಪಕ ಪ್ರಚಾರ ದೊರೆತರೆ, ವಿಶೇಷ ಮುತುವರ್ಜಿಯಿಂದ ಕಾರ್ಯಾನುಷ್ಠಾನ ಸಾಧ್ಯವಾಗುತ್ತದೆ ಎನ್ನುತ್ತಾರೆ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ.

ಕಳೆದ ವರ್ಷ ಅತಿವೃಷ್ಟಿಯಾಗಿದ್ದ ಕಾರಣಕ್ಕೆ ಈ ವರ್ಷ ಬಹುತೇಕ ಕೆರೆಗಳು ಬೇಸಿಗೆಯಲ್ಲೂ ಬತ್ತಿರಲಿಲ್ಲ. ಕೆರೆಯಲ್ಲಿ ನೀರು ಕಡಿಮೆಯಾದಾಗ ಮಾತ್ರ ಹೂಳೆತ್ತಲು ಸಾಧ್ಯವಾಗುತ್ತದೆ. ಅಲ್ಲದೇ, ಅನುದಾನ ಬಂದಿದ್ದರೂ ಈ ವರ್ಷ ಲಾಕ್‌ಡೌನ್ ಇದ್ದ ಕಾರಣಕ್ಕೆ ಕಾಮಗಾರಿ ಕೈಗೆತ್ತಿಕೊಳ್ಳಲು ಸಹ ತೊಂದರೆಯಾಗುತ್ತಿತ್ತು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ರೋಶನ್ ಪ್ರತಿಕ್ರಿಯಿಸಿದರು.

ಜಲಾಮೃತ ಯೋಜನೆಗೆ ಸರ್ಕಾರದಿಂದ ಇನ್ನಷ್ಟೇ ಅನುದಾನ ಬಿಡುಗಡೆ ಆಗಬೇಕಾಗಿದೆ. ಮಳೆಗಾಲದ ನಂತರ ಕೆರೆ ಅಭಿವೃದ್ಧಿ ಕಾಮಗಾರಿ ಅನುಷ್ಠಾನಗೊಳಿಸಲಾಗುವುದು ಎಂದು ನುಡಿದರು.

ಒಟ್ಟು79 ಕಾಮಗಾರಿಗಳನ್ನುಕೈಗೆತ್ತಿಕೊಳ್ಳಲಾಗಿತ್ತು.ಯೋಜನೆಯ ಅಂದಾಜು ವೆಚ್ಚ ₹ 6.19 ಕೋಟಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT