ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಯಾಯ ಜಮೀನು ನೀಡುವಂತೆ ಕದ್ರಾ ಕೆ.ಪಿ.ಸಿ ಲೇಬರ್ ಕಾಲೊನಿ ನಿವಾಸಿಗಳ ಆಗ್ರಹ

Last Updated 26 ಜುಲೈ 2021, 15:56 IST
ಅಕ್ಷರ ಗಾತ್ರ

ಕಾರವಾರ: ‘ನಮಗೆ ಪರಿಹಾರಾನೂ ಬೇಡ, ಏನೂ ಬೇಡ.. ನಮಗೆಲ್ಲಾದ್ರೂ ಒಂದೊಂದು ಗುಂಟೆ ಜಾಗ ಕೊಡ್ಸಿ. ನಾವಲ್ಲೇ ಜೋಪಡಿ ಕಟ್ಕೊಂಡಾದ್ರೂ ಬದುಕ್ಕೊಂತೀವಿ...’

ತಾಲ್ಲೂಕಿನ ಕದ್ರಾ ಕೆ.ಪಿ.ಸಿ ಕಾಲೊನಿಯ ಹತ್ತಾರು ನಿವಾಸಿಗಳ ಒಕ್ಕೊರಲ ಬೇಡಿಕೆಯಿದು. ಕದ್ರಾ ಜಲಾಶಯದಿಂದ ಹೊರಬಿದ್ದ ಎರಡು ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರಿನ ಹೊಡೆತಕ್ಕೆ ಸಿಲುಕಿದ ಇಲ್ಲಿನ ಹಲವು ಮನೆಗಳು ನೆಲಸಮವಾಗಿವೆ. ಈ ಬಾರಿ 2019ರ ನೆರೆಯನ್ನೂ ಮೀರಿ ನೀರು ತುಂಬಿತ್ತು. ನೋಡನೋಡುತ್ತಿದ್ದಂತೆ ಏರಿದ್ದ ಪ್ರವಾಹದಿಂದ ಜರ್ಝರಿತವಾಗಿರುವ ಸ್ಥಳೀಯರು, ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಲೇಬರ್ ಕಾಲೊನಿಯಲ್ಲಿ ಬಡವರೇ ವಾಸವಿದ್ದು, ಕೂಲಿ, ಸಣ್ಣಪುಟ್ಟ ಕೆಲಸಗಳೇ ದೈನಂದಿನ ಜೀವನಾಧಾರ. ಸುಮಾರು 110 ಮನೆಗಳಿರುವ ಈ ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರವಾಹ ಸಾಮಾನ್ಯ ಎಂಬಂತಾಗಿದೆ ಎನ್ನುತ್ತಾರೆ ಸ್ಥಳೀಯರು.

‘ನಾವು ಕಂದಾಯ ಮಾತ್ರ ತುಂಬುತ್ತಿದ್ದೇವೆ. ಸಮಸ್ಯೆಗೆ ಪರಿಹಾರ ಮಾತ್ರ ಕಾಣ್ತಿಲ್ಲ. ಪ್ರತಿ ಬಾರಿ ನೆರೆ ಬಂದಾಗಲೂ ಯಾರ‍್ಯಾರೋ ಬಂದು ನೋಡಿ ಹೋಗ್ತಾರೆ. ಬಿದ್ದಿರುವ ಮನೆ ಕಟ್ಟಿಸಿಕೊಂಡಿ ಎಂದು ಕೇಳಿದ್ರೆ, ನಿಮ್ಮದು ಅತಿಕ್ರಮಣ ಜಾಗ. ಸ್ವಂತ ಜಾಗವಿದ್ದರೆ ಮನೆ ಕಟ್ಟಿಕೊಡಬಹುದಿತ್ತು ಎಂದು ಹೇಳ್ತಾರೆ. ನಮ್ಮ ಅಪ್ಪ, ಅಮ್ಮನ ಕಾಲದಿಂದಲೂ ಇಲ್ಲೇ ವಾಸವಿದ್ದೇವೆ. ‍ಪ್ರತಿ ವರ್ಷ ಜುಲೈ ತಿಂಗಳು ಬಂದರೆ ಇದೇ ಹಣೆಬರಹ. 20 ದಿನವಾದರೂ ನಾವು ಕೂಲಿ ಕೆಲಸಕ್ಕೆ ರಜಾ ಮಾಡಿ ಕೂರಬೇಕು. ಜೀವನ ನಡೆಸುವುದು ಹೇಗೆ’ ಎಂಬ ಪ್ರಶ್ನೆ ಸ್ಥಳೀಯ ನಿವಾಸಿ ರಂಗಾ ವಿಜಯನ್ ಅವರದ್ದು.

‘ನನ್ನ ಪತಿಗೆ ಪಾರ್ಶ್ವವಾಯು ಆಗಿದೆ. ನಾನೊಬ್ಬಳೇ ದುಡಿದು ಜೀವನ ಮಾಡಬೇಕಿದೆ. ಪ್ರತಿ ವರ್ಷ ಪ್ರವಾಹ ಬರ್ತಿದೆ. ಸುರಕ್ಷತೆ ಇರುವ ಯಾವುದಾದರೂ ಜಾಗ ಕೊಡಿ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಪದ್ಮಾವತಿ ರಮೇಶ ಮಡಿವಾಳ ಒತ್ತಾಯಿಸುತ್ತಾರೆ.

ಕಾಳಿ ನದಿಯ ದಡದಲ್ಲೇ ಕಾಲೊನಿಯಿದ್ದರೂ ಹಿಂದಿನ ಹಲವು ವರ್ಷಗಳ ತನಕ ಪ್ರವಾಹ ಬರುತ್ತಿರಲಿಲ್ಲ. ಈಗ ಒಂದೆರಡು ದಿನದ ಮಳೆಗೂ ಯಾಕೆ ಪ್ರವಾಹ ಆಗುತ್ತಿದೆ ಎಂಬ ಬಗ್ಗೆ ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳಬೇಕು ಎಂಬುದು ಇಲ್ಲಿನ ನಿವಾಸಿಗಳ ಮನವಿಯಾಗಿದೆ.

‘ಮಕ್ಕಳಿಗೆ ಏನೂ ಕೊಡಲಾಗ್ತಿಲ್ಲ’:

‘ಪರಿಹಾರ ಅಂತ ₹ 10 ಸಾವಿರ ಕೊಡ್ತಾರೆ. ನಾವು ಕೂಲಿ ನಾಲಿ ಮಾಡಿ ಉಳಿಸಿದ ₹ 20 ಸಾವಿರ ₹ 30 ಸಾವಿರವನ್ನು ಒಟ್ಟುಗೂಡಿಸಿ ಸಣ್ಣ ಜೋಪಡಿಯಂಥ ಮನೆ ಕಟ್ಟಿಕೊಳ್ತೇವೆ. ನಮ್ಮ ಮಕ್ಕಳಿಗಾಗಿಯೂ ಹಣ ಉಳಿತಾಯ ಮಾಡಿಕೊಳ್ಳಲು ಆಗುತ್ತಿಲ್ಲ. ನಮಗೆ ಪರಿಹಾರನೂ ಬೇಡ, ಏನೂ ಬೇಡ. ಪ್ರವಾಹದ ನೀರು ತಲುಪದಂಥ ಜಾಗ ಕೊಡಿ. ಜೋಪಡಿಯಲ್ಲೇ ಜೀವನ ಸಾಗಿಸ್ತೇವೆ’ ಎಂದು ಲೇಬರ್ ಕಾಲೊನಿಯ ಹಸನ್ ಯು ಶೇಖ್ ಮನವಿ ಮಾಡುತ್ತಾರೆ.

––––––

* ಲೇಬರ್ ಕಾಲೊನಿಗೆ ‌ನಾನೇ ಹೋಗಿ ಪರಿಶೀಲನೆ ಮಾಡಿದ್ದೇನೆ. ಅಲ್ಲಿನ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ಕುರಿತು ಪರಿಶೀಲಿಸಲು ವಿಶೇಷ ತಂಡ ರಚಿಸಲಾಗುವುದು.

– ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT