ಮಂಗಳವಾರ, ಸೆಪ್ಟೆಂಬರ್ 28, 2021
24 °C
ಮಾನವೀಯ ನೆಲೆಯಲ್ಲಿ ಅವಕಾಶ ನೀಡಿದ ಪೊಲೀಸರು, ಅಧಿಕಾರಿಗಳು

ಕಾರವಾರ: ‘ನೆಗೆಟಿವ್’ ಪತ್ರವಿಲ್ಲದೇ ಬಂದ ವರ, ಗಡಿಯಲ್ಲಿ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕೋವಿಡ್‌ ನೆಗೆಟಿವ್ ಪ್ರಮಾಣ ಪತ್ರ ಹಾಜರುಪಡಿಸದೇ ರಾಜ್ಯಕ್ಕೆ ಬರುವವರನ್ನು ಮಾಜಾಳಿಯ ಗಡಿಯಲ್ಲೇ ಪೊಲೀಸರು ಮತ್ತು ಅಧಿಕಾರಿಗಳು ತಡೆಯುತ್ತಿದ್ದಾರೆ. ನಗರದಲ್ಲಿ ಗುರುವಾರ ಮದುವೆ ನಿಶ್ಚಿತಾರ್ಥಕ್ಕೆ ಬರುತ್ತಿದ್ದ ವರ ಮತ್ತು ಅವರ ಕುಟುಂಬದವರನ್ನೂ ತಡೆದು, ಬಳಿಕ ಮಾನವೀಯ ನೆಲೆಯಲ್ಲಿ ನಿರ್ಬಂಧಿತ ಪ್ರವೇಶ ನೀಡಲಾಯಿತು.

ಗೋವಾದ ಯುವಕ ಇಸ್ಮಾಯಿಲ್ ಎಂಬುವವರು ಕಾರವಾರದ ಯುವತಿಯೊಂದಿಗೆ ಮದುವೆ ನಿಶ್ಚಿತಾರ್ಥಕ್ಕೆಂದು ಕುಟುಂಬ ಸಮೇತರಾಗಿ ಬರುತ್ತಿದ್ದರು. ಸುಮಾರು 30 ಮಂದಿ ಬಸ್‌ನಲ್ಲಿ ಮಾಜಾಳಿಯ ಅಂತರರಾಜ್ಯ ಗಡಿಗೆ ತಲುಪಿದ್ದರು. ಅಲ್ಲಿನ ಕೋವಿಡ್ ತಪಾಸಣಾ ಕೇಂದ್ರದಲ್ಲಿ ಅಧಿಕಾರಿಗಳು ಪರಿಶೀಲಿಸಿದಾಗ ಯಾರ ಬಳಿಯೂ ಕೋವಿಡ್ ನೆಗೆಟಿವ್ (ಆರ್.ಟಿ.ಪಿ.ಸಿ.ಆರ್) ಪ್ರಮಾಣ ಪತ್ರ ಇರಲಿಲ್ಲ. ಹಾಗಾಗಿ ಎಲ್ಲರನ್ನೂ ಗಡಿ ದಾಟದಂತೆ ತಡೆದರು.

ವರ ಮತ್ತು ಅವರ ಕುಟುಂಬದವರು ಸುಮಾರು ಎರಡು ಗಂಟೆ ಗಡಿಯಲ್ಲೇ ಕಾದುನಿಂತಿದ್ದರು. ಕೊನೆಗೆ, ‘ಮದುವೆ ನಿಶ್ಚಿತಾರ್ಥಕ್ಕೆ ನಿಗದಿಯಾಗಿದ್ದ ಸಮಯ ಮೀರಿ ಹೋಗುತ್ತದೆ, ಮುಂದೆ ಹೋಗಲು ಬಿಡಿ’ ಎಂದು ಸ್ಥಳದಲ್ಲಿದ್ದ ಕರ್ನಾಟಕ ಪೊಲೀಸರಿಗೆ ಮನವಿ ಮಾಡಿಕೊಂಡರು.

ಈ ಬಗ್ಗೆ ಚರ್ಚಿಸಿದ ಚಿತ್ತಾಕುಲಾ ಠಾಣೆಯ ಪೊಲೀಸರು ಮತ್ತು ಅಧಿಕಾರಿಗಳು, ಮಾನವೀಯತೆಯ ಆಧಾರದಲ್ಲಿ ವರ ಸೇರಿದಂತೆ ಕೇವಲ ಎಂಟು ಜನರಿಗೆ ಕಾರವಾರಕ್ಕೆ ಬರಲು ಅವಕಾಶ ನೀಡಿದರು. ಅದಕ್ಕೂ ಮೊದಲು ಅವರಿಗೆ ರ‍್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಮಾಡಲಾಯಿತು. ಅವರೊಂದಿಗೆ ಬಂದಿದ್ದ ಇತರರನ್ನು ಮರಳಿ ಗೋವಾಕ್ಕೆ ಕಳುಹಿಸಲಾಯಿತು. ಈ ಮೂಲಕ ಮದುವೆ ನಿಶ್ಚಿತಾರ್ಥಕ್ಕೆ ಅವಕಾಶ ಕಲ್ಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು