ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವಳಿ ಪ್ರವಾಹ: ಕೊಚ್ಚಿಹೋದ ಸೇತುವೆ, ದ್ವೀಪದಂತಾದ ಗ್ರಾಮಗಳು

Last Updated 24 ಜುಲೈ 2021, 8:53 IST
ಅಕ್ಷರ ಗಾತ್ರ

ಕಾರವಾರ/ ಅಂಕೋಲಾ: ಎರಡು ದಿನಗಳಿಂದ ಉಕ್ಕಿ ಹರಿಯುತ್ತಿರುವ ಗಂಗಾವಳಿ ನದಿ ಪ್ರವಾಹಕ್ಕೆ ಗುಳ್ಳಾಪುರದ ಸೇತುವೆ ಮಧ್ಯಭಾಗದಿಂದ ಕೊಚ್ಚಿ ಹೋಗಿದೆ. ಇದರಿಂದ ಗುಳ್ಳಾಪುರ- ಹಳವಳ್ಳಿ ಸಂಪರ್ಕ ಕಡಿತವಾಗಿದೆ.

ಈ ಭಾಗದಲ್ಲಿ 3,000ಕ್ಕಿಂತ ಹೆಚ್ಚು ಮನೆಗಳಿವೆ. ಶೇವ್ಕಾರ್, ಕೈಗಡಿ, ದೊರಣಗಾರ್, ಹೆಗ್ಗಾರ್, ಕೋನಾಳ, ಕಲ್ಲೇಶ್ವರ, ಕನಕನಹಳ್ಳಿ, ಮಳಲಗಾಂವ, ಹಳವಳ್ಳಿ‌‌, ಕಮ್ಮಾಣಿ‌‌‌ ಗ್ರಾಮಗಳಿಗೆ ಈ ಸೇತುವೆ ಸಂಪರ್ಕ ಕೊಂಡಿಯಾಗಿತ್ತು.

ಸುಮಾರು 100 ಕಾಲೇಜು ವಿದ್ಯಾರ್ಥಿಗಳಿದ್ದಾರೆ. ನೂರಾರು ಮಂದಿ ಉದ್ಯೋಗಿಗಳು, ಕೃಷಿಕರು, ಅಡಿಕೆ ಬೆಳೆಗಾರರು ಯಲ್ಲಾಪುರ, ಅಂಕೋಲಾಕ್ಕೆ ಸಾಗಲು ಈ ಸೇತುವೆಯನ್ನು ಬಳಕೆ ಮಾಡುತ್ತಿದ್ದರು.

ಈ ಸೇತುವೆಯ ಮೂಲಕ ಗುಳ್ಳಾಪುರ ತಲುಪಲು ಕೇವಲ 10 ಕಿಲೋಮೀಟರ್ ದೂರವಾಗುತ್ತಿತ್ತು. ಅಂಕೋಲಾಕ್ಕೆ ಬರಲು 50 ಕಿಲೋಮೀಟರ್, ಯಲ್ಲಾಪುರಕ್ಕೆ 25 ಕಿಲೋಮೀಟರ್ ದೂರವಾಗುತ್ತಿತ್ತು. ಈಗ ಮತ್ತಿಘಟ್ಟ ಮೂಲಕ ಅಂಕೋಲಾ ಬರಲು 150 ಕಿಲೋಮೀಟರ್, ಯಲ್ಲಾಪುರ ತಲುಪಲು ಮತ್ತಿಘಟ್ಟ ಮೂಲಕ ಶಿರಸಿಯಿಂದ ಹೋಗಬೇಕಾಗುತ್ತದೆ. ಈಗ ಸುಮಾರು 100 ಕಿಲೋಮೀಟರ್ ಸುತ್ತುಬಳಸಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಡೀ ಪ್ರದೇಶವೀಗ ದ್ವೀಪದಂತಾಗಿದೆ.

ಸುಮಾರು 35 ಕಿಲೋಮೀಟರ್ ವಿಸ್ತೀರ್ಣ ಹೊಂದಿರುವ ಈ ಗ್ರಾಮಗಳು, ಮೂರು ಕಡೆ ಗಂಗಾವಳಿ ನದಿ ನೀರಿನಿಂದ ಆವೃತವಾಗಿವೆ. ಮತ್ತೊಂದೆಡೆ ದುರ್ಗಮ ಕಾಡಿನ ಪ್ರದೇಶವಿದೆ. ಸೇತುವೆಯು 1995-96ರ ಅವಧಿಯಲ್ಲಿ ನಿರ್ಮಾಣಗೊಂಡು 1997ರಲ್ಲಿ ಉದ್ಘಾಟನೆಯಾಗಿತ್ತು. 25 ವರ್ಷಗಳ ಹಿಂದಿನ ಸೇತುವೆಯಾಗಿದ್ದು, ಅಲ್ಲಿನ ಜನರು ತಾಲ್ಲೂಕು ಕೇಂದ್ರ ಯಲ್ಲಾಪುರ ಸಂಪರ್ಕಿಸಲು ದೋಣಿಯನ್ನು ಆಶ್ರಯಿಸಬೇಕಾಗಿದೆ.

ಈಗ ಮತ್ತಿಘಟ್ಟ ಮೂಲಕ ಏಕೈಕ ದಾರಿ ಇದೆ. ಆದರೆ, ಗಂಗಾವಳಿ ನದಿ ಉಕ್ಕೇರಿದಾಗ ಆ ದಾರಿಯಲ್ಲಿ ನೀರು ಹರಿದು, ಹಲವೆಡೆ ಮಣ್ಣು ತುಂಬಿಕೊಳ್ಳುತ್ತದೆ. ಮಣ್ಣು ತೆರವುಗೊಳಿಸಿದರೆ ಮಾತ್ರ ಪ್ರಯಾಣಿಸಲು ಸಾಧ್ಯ. ಮಾರ್ಗಮಧ್ಯದಲ್ಲಿ ವಾಹನಗಳು ಕೆಟ್ಟರೆ, ರಾತ್ರಿಯ ವೇಳೆ ಸಂಚಾರ ಮಾಡಲು ಕಷ್ಟವಾಗಿದೆ. 500ಕ್ಕೂ ಹೆಚ್ಚು ಕಾರುಗಳು, ಸಾವಿರಾರು ಬೈಕ್‌ಗಳು ಅಲ್ಲಿದ್ದು ಅವುಗಳನ್ನು ಹೊರತರಲು ಕಷ್ಟವಾಗಿದೆ. ಗರ್ಭಿಣಿಯರು, ರೋಗಿಗಳು, ವಿದ್ಯಾರ್ಥಿಗಳ ಸಂಚಾರಕ್ಕೆ ಕಷ್ಟವಾಗಿದೆ.

ಭೀಕರ ಪ್ರವಾಹವಾಗಿರುವುದರಿಂದ ಮತ್ತಿಘಟ್ಟ ದಾರಿಯ ಸ್ಥಿತಿಗತಿಯ ಕುರಿತು ಇನ್ನೂ ತಿಳಿದುಬಂದಿಲ್ಲ.

2019ರಲ್ಲಿ ಉಂಟಾಗಿದ್ದ ಗಂಗಾವಳಿ ಪ್ರವಾಹದಲ್ಲಿ ಕೂಡ ಸೇತುವೆಗಳು ನೀರುಪಾಲಾಗಿದ್ದವು. ಡೊಂಗ್ರಿ ಮತ್ತು ಸುಂಕಸಾಳದ ತೂಗುಸೇತುವೆಗಳು ಕೊಚ್ಚಿಕೊಂಡು ಹೋಗಿದ್ದವು.

ಎರಡು ದಿನಗಳಿಂದ ಭಾರಿ ಏರಿಕೆ ಕಂಡಿದ್ದ ಗಂಗಾವಳಿ ನದಿಯ ನೀರು, ಶನಿವಾರ ಬೆಳಿಗ್ಗೆಯಿಂದ ನಿಧಾನವಾಗಿ ಇಳಿಯಲು ಶುರುವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT