ಸೋಮವಾರ, ಆಗಸ್ಟ್ 8, 2022
21 °C

ಕಾಸರಕೋಡು: ಮಗುಚಿದ ದೋಣಿ; ಮೀನುಗಾರ ನೀರುಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಹೊನ್ನಾವರದ ಕಾಸರಕೋಡು ಬ್ಲೂ ಫ್ಲ್ಯಾಗ್ ಕಡಲತೀರ ಬಳಿಯಿಂದ ಸೋಮವಾರ ಬೆಳಿಗ್ಗೆ  ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು ನೀರು ಪಾಲಾಗಿದ್ದಾರೆ. ಅವರನ್ನು ಉದಯ ತಾಂಡೇಲ (30) ಎಂದು ಗುರುತಿಸಲಾಗಿದೆ.

ಅವರೊಂದಿಗೆ ದೋಣಿಯಲ್ಲಿದ್ದ ಇತರ ಮೂವರು ಈಜಿ ದಡ ಸೇರಿದ್ದಾರೆ. ಮುಂಗಾರು ಅವಧಿಯಲ್ಲಿ ಯಾಂತ್ರೀಕೃತ ದೋಣಿಗಳಲ್ಲಿ ಮೀನುಗಾರಿಕೆಗೆ ನಿಷೇಧವಿದ್ದು, ಸಾಂಪ್ರದಾಯಿಕ ಶೈಲಿಯಲ್ಲಿ ಮಾತ್ರ ಮತ್ಸ್ಯ ಬೇಟೆ ಮಾಡಬಹುದು. ಅದೇರೀತಿ ಮೀನುಗಾರಿಕೆಗೆ ತೆರಳಿದ್ದ ಅವರ ದೋಣಿಗೆ ದೊಡ್ಡ ಅಲೆಯೊಂದು ಅಪ್ಪಳಿಸಿ ಮಗುಚಿತು ಎಂದು ಮೀನುಗಾರರು ತಿಳಿಸಿದ್ದಾರೆ. ಉದಯ ಅವರಿಗೆ ಇತರ ಮೀನುಗಾರರು ಮತ್ತು ಪೊಲೀಸರು ಹುಡುಕಾಟ ನಡೆಸಿದ್ದಾರೆ.


ಮಗುಚಿದ ದೋಣಿಯನ್ನು ದಡಕ್ಕೆ ತರುತ್ತಿರುವುದು

ಉದಯ ಅವರು, ಸಮೀಪದ ಟೊಂಕಾ ನಿವಾಸಿಯಾಗಿದ್ದು, ಅಲ್ಲಿ ಖಾಸಗಿ ಬಂದರಿನ ಕಾಮಗಾರಿ ನಡೆಯುತ್ತಿದೆ. ಹಾಗಾಗಿ ಕೆಲವು ದಿನಗಳಿಂದ ಮೀನುಗಾರರು ತಮ್ಮ ನಾಡದೋಣಿಗಳನ್ನು ಸುರಕ್ಷತೆಯ ದೃಷ್ಟಿಯಿಂದ ಅಲ್ಲಿ ಇಡುತ್ತಿಲ್ಲ. 

ಅವರು ದೊಣಿಗಳನ್ನು ಇಡಲು ಬಳಸುತ್ತಿದ್ದ ಬಂಡೆಕಲ್ಲುಗಳನ್ನು ಬಂದರಿನ ರಸ್ತೆ ಕಾಮಗಾರಿಗೆ ಬಳಸುವ ಆತಂಕ ಎದುರಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕಾಮಗಾರಿಗೆ ಚಾಲನೆ ನೀಡಿದ್ದ ಬಂದರು ಕಂಪನಿಯು, ಪೊಲೀಸರ ರಕ್ಷಣೆಯೊಂದಿಗೆ ಮೀನುಗಾರರ ನೆಲೆಗಳನ್ನು ತೆರವು ಮಾಡಿತ್ತು. ಇದರಿಂದ ಬೆದರಿದ್ದ ಟೊಂಕಾದ ಮೀನುಗಾರರು ದೋಣಿಗಳನ್ನು ಬ್ಲೂ ಫ್ಲ್ಯಾಗ್ ಕಡಲತಿರ ಸಮೀಪದ ಮರಳುತೀರದಲ್ಲಿ ಇಡುತ್ತಿದ್ದು, ಅಲ್ಲಿಂದಲೇ ಮೀನುಗಾರಿಕೆಗೆ ತೆರಳುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ದೋಣಿಯಲ್ಲಿದ್ದ ಇನ್ನುಳಿದ ಮೀನುಗಾರರಾದ  ವಿಜಯ್ ಕ್ರಿಸ್ತಾದಾಸ್ ಫರ್ನಾಂಡೀಸ್ (49),  ಶಂಕರ ಮಾದೇವ ತಾಂಡೇಲ್ (38) ಹಾಗೂ  ಕಾಮೇಶ್ವರ ದೇವಯ್ಯ ತಾಂಡೇಲ್ (39) ಈಜಿಕೊಂಡು ದಡ ಸೇರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು