ಮಂಗಳವಾರ, ಸೆಪ್ಟೆಂಬರ್ 21, 2021
21 °C
ಕೋವಿಡ್, ಇತರ ಕಾರಣಗಳಿಂದ ಮಾನಸಿಕ ಒತ್ತಡಕ್ಕೆ ತುತ್ತಾದವರ ನೆರವಿಗೆ ಸಹಾಯವಾಣಿ

ಮನಸ್ಸಿನ ಆರೋಗ್ಯಕ್ಕೆ ಆಪ್ತ ಮಾತು

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕೊರೊನಾ ಸಂದರ್ಭದಲ್ಲಿ ಮಾನಸಿಕ ಒತ್ತಡ, ಖಿನ್ನತೆಗೆ ತುತ್ತಾದವರ ಸಹಾಯಕ್ಕಾಗಿ ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕ್ರಿಮ್ಸ್) ಆರಂಭಿಸಲಾಗಿರುವ ಸಹಾಯವಾಣಿಗೆ (74112 64213) ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಐದೇ ದಿನಗಳಲ್ಲಿ 20ಕ್ಕೂ ಅಧಿಕ ಮಂದಿಯ ಸಮಸ್ಯೆಗಳನ್ನು ಆಪ್ತ ಸಮಾಲೋಚನೆಯ ಮೂಲಕ ಪರಿಹರಿಸಲು ಯತ್ನಿಸಲಾಗಿದೆ.

ಕೋವಿಡ್, ಲಾಕ್‌ಡೌನ್‌ನಿಂದ ಹಲವರು ಹಲವು ರೀತಿಯ ಸಂಕಟಗಳಿಗೆ ಗುರಿಯಾಗಿದ್ದಾರೆ. ಕೆಲವರು ಉದ್ಯೋಗ ಕಳೆದುಕೊಂಡರೆ ಹಲವರು ಆರ್ಥಿಕ ಹಿನ್ನಡೆ, ಕ್ವಾರಂಟೈನ್, ಸಮಾಜವು ಅಪರಾಧಿಗಳಂತೆ ನೋಡುವುದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಇದರ ನೇರ ಪರಿಣಾಮವು ಅವರ ಒಟ್ಟೂ ಆರೋಗ್ಯದ ಮೇಲಾಗುತ್ತಿದೆ. ಇದನ್ನು ಗಮನಿಸಿದ ‘ಕ್ರಿಮ್ಸ್’ ವೈದ್ಯರು, ಆಪ್ತ ಸಮಾಲೋಚನೆ ಮಾಡಿ ಸಮಸ್ಯೆ ಪರಿಹರಿಸಲು ಮುಂದಾಗಿದ್ದಾರೆ.

ಈ ರೀತಿಯ ಸಹಾಯವಾಣಿಯು ರಾಜ್ಯಮಟ್ಟದಲ್ಲಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಧಾರವಾಡದ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆ (ಡಿಮಾನ್ಸ್) ಕೂಡ ಇಂಥದ್ದೇ ಸಹಾಯವಾಣಿ ತೆರೆದಿದೆ. ‘ಕ್ರಿಮ್ಸ್’ನಲ್ಲಿ ತೆರೆದಿರುವ ಸಹಾಯವಾಣಿಯು ಉತ್ತರ ಕನ್ನಡದ ಜನರಿಗೆ ನೆರವಾಗಲಿದೆ.

‘ಹೋಂ ಐಸೋಲೇಷನ್‌ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಪೀಡಿತರಿಗೆ ದೂರವಾಣಿ ಮೂಲಕ ಆಪ್ತ ಸಮಾಲೋಚನೆ ಮಾಡಲಾಗುತ್ತದೆ. ಸಹಾಯವಾಣಿಯು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದೆ. ಕರೆ ಮಾಡಿದ ರೋಗಿಗಳ ಹೆಸರು (ಕಡ್ಡಾಯವಲ್ಲ), ದೂರವಾಣಿ ಸಂಖ್ಯೆ ಹಾಗೂ ಸಮಸ್ಯೆಯ ವಿವರಗಳನ್ನು ಪುಸ್ತಕದಲ್ಲಿ ನಮೂದಿಸಲಾಗುತ್ತದೆ. ಅವರೊಂದಿಗೆ ಮನೋಶಾಸ್ತ್ರಜ್ಞರು ದಿನಕ್ಕೆ ಒಂದು ಸಲವಾದರೂ ಮಾತನಾಡುತ್ತಾರೆ’ ಎಂದು ‘ಕ್ರಿಮ್ಸ್’ನ ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ಎನ್.ವಿಜಯರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕರೆ ಮಾಡಿದವರ ಸಮಸ್ಯೆ ಪರಿಹಾರವಾಗದಿದ್ದರೆ ಮನೋವೈದ್ಯರು ಮಧ್ಯಪ್ರವೇಶಿಸುತ್ತಾರೆ. ರೋಗಿಗಳ ಸ್ಥಿತಿ ನೋಡಿಕೊಂಡು ಔಷಧಿ, ಚಿಕಿತ್ಸೆಯ ಅಗತ್ಯತೆಯನ್ನು ನಿರ್ಧರಿಸುತ್ತಾರೆ’ ಎಂದು ಮಾಹಿತಿ ನೀಡಿದರು.

ಸಹಾಯವಾಣಿ ತಂಡದಲ್ಲಿ ವೈದ್ಯರಾದ ಡಾ.ವಿಜಯರಾಜ್, ಡಾ.ಅಕ್ಷಯ ಪಾಠಕ್ ಹಾಗೂ ಡಾ.ಮೋಹನ ಬಾಬು ಸೇರಿದ್ದಾರೆ. 

‘ಹೋಂ ಐಸೋಲೇಷನ್‌ನಲ್ಲಿ ಇರುವ ಸೋಂಕಿತರ ಮನೆಯವರು ತಾವೂ ಕೋವಿಡ್ ಪರೀಕ್ಷೆ ಮಾಡಿಸಬೇಕಾ, ಅವರ ಜೊತೆ ಇರಬಹುದಾ, ಮನೆಯಿಂದ ಹೊರಗೆ ಹೋಗಬಹುದಾ, ಕುಟುಂಬದ ಸದಸ್ಯರನ್ನು ಊರಿಗೆ ಕಳುಹಿಸಬಹುದಾ ಮುಂತಾದ ಅನುಮಾನಗಳನ್ನು ವ್ಯಕ್ತಪಡಿಸುತ್ತಾರೆ. ನಾನಾ ಕಾರಣಗಳಿಂದ ಅವರು ಎದುರಿಸುತ್ತಿರುವ ಮಾನಸಿಕ ಒತ್ತಡವನ್ನೂ ಹೇಳಿಕೊಳ್ಳುತ್ತಾರೆ. ಅವರಿಗೆ ದೂರವಾಣಿ ಮೂಲಕ ಸಮಾಧಾನ ಹೇಳಿ ಸಮಸ್ಯೆ ಪರಿಹರಿಸುವುದು ಇದರ ಉದ್ದೇಶವಾಗಿದೆ’ ಎಂದು ವಿವರಿಸಿದರು.

‘ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಿನೋದ ಭೂತೆ, ಆರ್‌.ಎಂ.ಒ ಡಾ.ವೆಂಕಟೇಶ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಕೋವಿಡ್ ಪೀಡಿತರಲ್ಲಿ ಯಾರಿಗೆ ಆಪ್ತ ಸಮಾಲೋಚನೆ ಅಗತ್ಯವಿದೆ ಎಂಬುದನ್ನು ತಿಳಿದುಕೊಂಡು ಕರೆ ಮಾಡಿ ಮಾತನಾಡಿಸುತ್ತೇವೆ’ ಎಂದರು.

ಕೋವಿಡ್‌ಗೇ ಸೀಮಿತವಲ್ಲ: ‘ಕ್ರಿಮ್ಸ್’ನಲ್ಲಿ ತೆರೆಯಲಾಗಿರುವ ಸಹಾಯವಾಣಿಯು ಕೋವಿಡ್ ಹೊರತಾದ ಕಾರಣಗಳಿಂದ ಉಂಟಾಗಿರುವ ಮಾನಸಿಕ ಸಮಸ್ಯೆಗಳನ್ನು ನಿವಾರಿಸಲೂ ಬಳಕೆಯಾಗಲಿದೆ. ಈ ಬಗ್ಗೆ ಸಂಸ್ಥೆಯ ನಿರ್ದೇಶಕ ಡಾ.ಗಜಾನನ ನಾಯಕ ಅವರ ಪ್ರಸ್ತಾವಕ್ಕೆ ಇತರ ವೈದ್ಯರೂ ಸಹಮತ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಜನ ತಮ್ಮ ಮಾನಸಿಕ ಸಮಸ್ಯೆಗಳಿಗೆ ಫೋನ್ ಕರೆಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು.

ಸಹಾಯವಾಣಿಗೆ ಕರೆ ಮಾಡಿದವರನ್ನು ವಿಡಿಯೊ ಕರೆ ಅಥವಾ ಖುದ್ದು ಭೇಟಿ ಮಾಡಿ ಮಾತನಾಡಿಸುತ್ತೇವೆ. ಅಗತ್ಯವಿದ್ದರೆ ‘ಕ್ರಿಮ್ಸ್’ನ ಮೂವರು ಮಾನಸಿಕ ತಜ್ಞರಲ್ಲಿ ಒಬ್ಬರು ಭೇಟಿ ಮಾಡುತ್ತೇವೆ ಎಂದು ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ಎನ್.ವಿಜಯರಾಜ್ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು