ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದರು ವಿಸ್ತರಣೆ: ಕಡಲತೀರ ಪರಿಶೀಲನೆ

ಕೇಂದ್ರ ಕಚೇರಿಗೆ ವರದಿ ನೀಡಲಿರುವ ಹಿರಿಯ ಅಧಿಕಾರಿ
Last Updated 1 ಜುಲೈ 2021, 16:00 IST
ಅಕ್ಷರ ಗಾತ್ರ

ಕಾರವಾರ: ನಗರದ ವಾಣಿಜ್ಯ ಬಂದರಿನ ಎರಡನೇ ಹಂತದ ವಿಸ್ತರಣೆ ಸಂಬಂಧ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಗಳೂರು ವಲಯ ಕಚೇರಿಯ ಹಿರಿಯ ಪರಿಸರ ಅಧಿಕಾರಿ ರಮೇಶ ಡಿ.ನಾಯ್ಕ ಅವರು ಇಲ್ಲಿನ ಕಡಲತೀರವನ್ನು ಗುರುವಾರ ಪರಿಶೀಲಿಸಿದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ಬೆಂಗಳೂರು ಕೇಂದ್ರ ಕಚೇರಿಯ ಸೂಚನೆಯ ಮೇರೆಗೆ ಅವರು ನಗರಕ್ಕೆ ಭೇಟಿ ನೀಡಿದರು. ಬಂದರು ವಿಸ್ತರಣೆ ಸಂಬಂಧ ಈಗಿನ ಸ್ಥಿತಿಗತಿಯನ್ನು, ಸ್ಥಳೀಯರ ಅಭಿಪ್ರಾಯಗಳನ್ನು ಪರಾಮರ್ಶಿಸಿದರು.

ಬಂದರು ವಿಸ್ತರಣೆ ಸಂಬಂಧ ಬಳಸಲು ಉದ್ದೇಶಿಸಲಾಗಿರುವ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಮಕ್ಕಳ ಉದ್ಯಾನದ ಬಳಿ, ಅಲಿಗದ್ದಾ, ಬಂದರು ಪ್ರದೇಶವನ್ನು ಅವರು ವೀಕ್ಷಿಸಿದರು. ಈ ಸಂದರ್ಭದಲ್ಲಿ ಮೀನುಗಾರರ ಮುಖಂಡರು, ಸ್ಥಳೀಯರು ಬಂದರು ವಿಸ್ತರಣೆಯಿಂದ ಆಗಬಹುದಾದ ತೊಂದರೆಗಳ ಬಗ್ಗೆ ತಿಳಿಸಿದರು. ಇದಕ್ಕೂ ಮೊದಲು ಮೀನುಗಾರರ ಮನವಿಗಳನ್ನು ಸ್ವೀಕರಿಸಿ, ಕೇಂದ್ರ ಕಚೇರಿಗೆ ಸಮಗ್ರವಾದ ವರದಿಯನ್ನು ಸಲ್ಲಿಸುವುದಾಗಿ ತಿಳಿಸಿದರು.

ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಜಿಲ್ಲಾ ಸಹಕಾರ ಮೀನು ಮಾರಾಟ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ, ವಕೀಲ ಬಿ.ಎಸ್.ಪೈ ಮುಂತಾದವರಿದ್ದರು. ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರವಾರ ಕಚೇರಿಯ ಪರಿಸರ ಅಧಿಕಾರಿ ಡಾ.ಎಚ್.ಲಕ್ಷ್ಮೀಕಾಂತ, ಉಪ ಪರಿಸರ ಅಧಿಕಾರಿ ಡಾ.ಗಣಪತಿ ಹೆಗಡೆ ಜೊತೆಗಿದ್ದರು.

ಮನವಿ: ‘ನಗರದಲ್ಲಿ ಕೋಣೆ ನಾಲೆಯು ಸಮುದ್ರ ಸೇರುವಲ್ಲಿ ದೊಡ್ಡ ತಡೆಗೋಡೆ ನಿರ್ಮಿಸಲಾಗಿದೆ. ಇದರಲ್ಲಿ ನಿಯಮದ ಉಲ್ಲಂಘನೆಯಾಗಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಬೈತಖೋಲ್‌ನ ಮೀನುಗಾರ ಮುಖಂಡ ವಿನಾಯಕ ಹರಿಕಂತ್ರ ಒತ್ತಾಯಿಸಿದ್ದಾರೆ.

ನಗರಕ್ಕೆ ಗುರುವಾರ ಭೇಟಿ ನೀಡಿದ್ದ ಮಂಡಳಿಯ ಮಂಗಳೂರು ವಲಯ ಕಚೇರಿಯ ಹಿರಿಯ ಪರಿಸರ ಅಧಿಕಾರಿ ರಮೇಶ ಡಿ.ನಾಯ್ಕ ಅವರ ಮೂಲಕ ಕೇಂದ್ರ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.

‘ವಾಣಿಜ್ಯ ಬಂದರಿನ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಯಲ್ಲಿ, ಕೋಣೆನಾಲಾವು ಸಮುದ್ರ ಸೇರುವ ಪ್ರದೇಶವೂ ಒಳಗೊಳ್ಳುತ್ತದೆ. ಇಲ್ಲಿ ನಿರ್ಮಿಸಲಾಗಿರುವ ತಡೆಗೋಡೆಯನ್ನು ಯಾವ ಇಲಾಖೆಯವರು, ಯಾಕಾಗಿ ನಿರ್ಮಿಸಿದ್ದಾರೆ ಎಂದು ಸಾರ್ವಜನಿಕರಿಗೆ ಗೊತ್ತಿಲ್ಲ. ಈ ಕಾಮಗಾರಿಯು ಬಂದರು ವಿಸ್ತರಣೆ ಕಾಮಗಾರಿಯ ಪ್ರಾರಂಭಿಕ ಹಂತವಾಗಿರಬಹುದು ಎಂಬ ಸಂಶಯವಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

‘ಈ ಕಾಮಗಾರಿಯು ಕಾನೂನಿಗೆ ವಿರುದ್ಧವಾಗಿ ಆಗಿದ್ದರೆ, ನಿಯಮಾನುಸಾರ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT