ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಸಚಿವರ ತವರು ಜಿಲ್ಲೆಯಲ್ಲಿ ಕಿಟ್ ಸಿದ್ಧತೆ

ಸಂಕಷ್ಟಕ್ಕೊಳಗಾದ ಕಾರ್ಮಿಕರ ಕುಟುಂಬಕ್ಕೆ ನೆರವು
Last Updated 10 ಮೇ 2020, 13:31 IST
ಅಕ್ಷರ ಗಾತ್ರ

ಶಿರಸಿ: ಕೋವಿಡ್‌ 19 ನಿಯಂತ್ರಿಸಲು ಜಾರಿಗೊಂಡ ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರಿಗೆ ವಿತರಿಸಲು ಕಿಟ್‌ಗಳ ಸಿದ್ಧತೆ ಭರದಿಂದ ಸಾಗಿದೆ. ಕಾರ್ಮಿಕ ಇಲಾಖೆ ಘೋಷಿಸಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನೋಂದಾಯಿತ ಕಾರ್ಮಿಕರಿಗೆ ಕಿಟ್ ದೊರೆಯಲಿದೆ.

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ವಿಶೇಷ ಮುತುವರ್ಜಿವಹಿಸಿ, ತವರು ಜಿಲ್ಲೆಯಲ್ಲಿ ಕಿಟ್ ಸಿದ್ಧಪಡಿಸಿ, ಹೊರ ಜಿಲ್ಲೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ. ದಾವಣಗೆರೆ, ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ ಕಾರ್ಮಿಕರಿಗೆ ವಿತರಿಸುವ ಕಿಟ್‌ಗಳನ್ನು ಇಲ್ಲಿನ ತೋಟಗಾರರ ಕಲ್ಯಾಣ ಮಂಟಪದಲ್ಲಿ ತಯಾರಿಸಲಾಗುತ್ತಿದೆ. ನಾಲ್ಕೈದು ದಿನಗಳಿಂದ ಹಲವಾರು ಜನರು ಈ ಕಾರ್ಯದಲ್ಲಿ ತೊಡಗಿದ್ದಾರೆ. ಇಲ್ಲಿನ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿಯು ಕಿಟ್ ಸಿದ್ಧಪಡಿಸುವ ಹೊಣೆಗಾರಿಕೆ ನಿರ್ವಹಿಸುತ್ತಿದೆ.

‘ಕಲ್ಯಾಣ ಮಂಟಪದ ಒಳ ಆವರಣದಲ್ಲಿ ಭರಪೂರ ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ. ಸ್ವಚ್ಛತೆಗೆ ವಿಶೇಷ ಒತ್ತು ನೀಡಿ, ಕೆಲಸಗಾರರು ಪರಸ್ಪರ ಅಂತರ ಕಾಯ್ದುಕೊಂಡು ಕಿಟ್ ಅಣಿಗೊಳಿಸುತ್ತಿದ್ದಾರೆ. ರಟ್ಟಿನ ಪೆಟ್ಟಿಗೆಗಳಲ್ಲಿ ದಿನಸಿ ಸಾಮಗ್ರಿಗಳನ್ನು ತುಂಬಿ ಸರಿಯಾದ ಪ್ಯಾಕಿಂಗ್ ಮಾಡಲಾಗುತ್ತದೆ’ ಎಂದು ಅಲ್ಲಿನ ಕೆಲಸಗಾರರು ಹೇಳಿದರು.

ಪ್ರತಿದಿನ ಸರಾಸರಿ 3500ರಷ್ಟು ಕಿಟ್ ಸಿದ್ಧವಾಗುತ್ತಿದೆ. ಈಗಾಗಲೇ 40ಸಾವಿರದಷ್ಟು ಕಿಟ್ ತಯಾರಾಗಿದ್ದು, ವಾಹನಗಳಿಗೆ ತುಂಬಿ ಹೊರ ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ. ಎರಡು ಜಿಲ್ಲೆಗಳಿಗೆ ಕಿಟ್‌ಗಳನ್ನು ರವಾನಿಸಲಾಗಿದೆ. ಇನ್ನೂ 25ಸಾವಿರ ಕಿಟ್ ತಯಾರಿಕೆಯಲ್ಲಿ ಕೆಲಸಗಾರರು ತೊಡಗಿದ್ದಾರೆ. ಪ್ರತಿ ಕಿಟ್ ಐದು ಕೆ.ಜಿ ಅಕ್ಕಿ, ಮೂರು ಕೆ.ಜಿ ಗೋಧಿಹಿಟ್ಟು, ರವಾ, ಸಕ್ಕರೆ, ಅವಲಕ್ಕಿ, ತೊಗರಿಬೇಳೆ, ಉಪ್ಪು ತಲಾ ಒಂದು ಕೆ.ಜಿ, ಅಡುಗೆ ಎಣ್ಣೆ, ಸಾಂಬಾರು ಪುಡಿ, ರಸಂ ಪುಡಿ, ಒಂದು ಸೋಪ್ ಒಳಗೊಂಡಿದೆ.

‘ಕಾರ್ಮಿಕ ಇಲಾಖೆಯ ಸೂಚನೆ ಮೇರೆಗೆ ಕಿಟ್‌ಗಳನ್ನು ತಯಾರಿಸಲಾಗಿದೆ. ಶೇ 60ರಷ್ಟು ಕೆಲಸ ಪೂರ್ಣಗೊಂಡಿದ್ದು, ಉಳಿದವನ್ನು ಆದಷ್ಟು ಬೇಗ ತಯಾರಿಸಿ, ಫಲಾನುಭವಿಗಳಿಗೆ ತಲುಪಿಸಲಾಗುವುದು. ನೋಂದಾಯಿತ ಕಾರ್ಮಿಕರು ಕಿಟ್ ಪಡೆಯಲು ಅರ್ಹರಾಗಿದ್ದಾರೆ’ ಎಂದು ಕಾರ್ಮಿಕ ಅಧಿಕಾರಿ ಬಿ.ಎಸ್.ಬೆಟಗೇರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT